Advertisement

ಪೊಸ್ರಾಲು-ಪೇರೂರು: ಕಿರು ಸೇತುವೆಯಿಂದ ಕಿರಿಕಿರಿ!

03:35 AM Nov 05, 2018 | Karthik A |

ಬೆಳ್ಮಣ್‌: ಮುಂಡ್ಕೂರು ಜಾರಿಗೆಕಟ್ಟೆಯಿಂದ ಮೂಡಬಿದಿರೆಗೆ ಸಂಪರ್ಕ ಕಲ್ಪಿಸುವ ಪೇರೂರು ಪೊಸ್ರಾಲು ಸಮೀಪದ ಮುಖ್ಯ ರಸ್ತೆಯಲ್ಲಿರುವ ಕಿರು ಸೇತುವೆ ವಾಹನ ಸವಾರರಿಗೆ ನಿತ್ಯ ಕಿರಿ ಕಿರಿ ಉಂಟು ಮಾಡುತ್ತಿದ್ದು ಅಪಘಾತಗಳೂ ಸಂಭವಿಸುತ್ತಿವೆ.

Advertisement

ಇಕ್ಕಟ್ಟಿನ ಸೇತುವೆ
ಇಕ್ಕಟ್ಟಿನ ಸೇತುವೆಯಿಂದಾಗಿ ಪ್ರತೀ ನಿತ್ಯ ಈ ಭಾಗದ ರಸ್ತೆಯಲ್ಲಿ ಓಡಾಟ ನಡೆಸುವ ನೂರಾರು ವಾಹನಗಳು, ಬಸ್ಸುಗಳು, ಲಾರಿ ಗಳು ಜೊತೆಗೆ ಶಾಲಾ ವಾಹನಗಳು ಅಪಾಯ ಎದುರಿಸುವಂತಾಗಿದೆ. ಪೇರೂರು ಪರಿಸರದಿಂದ ಸ್ವಲ್ಪ ದೂರ ತಗ್ಗು ಪ್ರದೇಶದಲ್ಲೇ ಈ ಕಿರು ಸೇತುವೆಯಿದ್ದು ವಾಹನಗಳು ಎದುರಾದರೆ ತೊಂದರೆ ಅನುಭವಿಸುವಂತಾಗಿದೆ.

ಸೇತುವೆ ಮಾತ್ರ ಅಗಲಗೊಂಡಿಲ್ಲ
ಕೆಲ ತಿಂಗಳ ಹಿಂದೆಯಷ್ಟೇ ಈ ರಸ್ತೆಯ ಸುಮಾರು 2.5 ಕಿ.ಮೀ. ಉದ್ದದ ರಸ್ತೆಯನ್ನು ವಿಸ್ತರಣೆ ಮಾಡಿ ಮರು ಡಾಮರು ಹಾಕಲಾಗಿತ್ತು. ಆದರೆ ಈ ಕಿರು ಸೇತುವೆ ಜಾಗದಲ್ಲಿ ಅಗಲೀಕರಣ ಆಗಿಲ್ಲ. ಸೇತುವೆಯೂ ತುಂಬ ಹಳೆಯದಾಗಿದ್ದು ತಳಭಾಗದಲ್ಲಿ ಬಿರುಕು ಬಿಟ್ಟಿದೆ ಎನ್ನುವುದು ಸ್ಥಳೀಯರ ಆರೋಪ. ಸೇತುವೆ ಸಣ್ಣದಾಗಿರುವುದರಿಂದ ಏಕಮುಖ ಸಂಚಾರ ಮಾತ್ರವಿದೆ. ಒಂದು ವಾಹನಕ್ಕೆ ಜಾಗ ಬಿಟ್ಟುಕೊಡಲು ಇನ್ನೊಂದು ವಾಹನ ಒಂದಷ್ಟು ದೂರ ನಿಂತು ಕಾಯಬೇಕಾದ ಪರಿಸ್ಥಿತಿ ಇಲ್ಲಿದೆ.

ಪದೇ ಪದೇ ವಾಹನ ಢಿಕ್ಕಿ
ಈ ಕಿರು ಸೇತುವೆಯ ಅಪಾಯವನ್ನು ಕಂಡು ಇಲಾಖೆ ಕಳೆದ ಕೆಲ ತಿಂಗಳ ಹಿಂದೆ ಈ ಕಿರು ಸೇತುವೆಗೆ ಕಬ್ಬಿಣದ ರಾಡ್‌ ನಿಂದ ಕೂಡಿದ ತಡೆ ಬೇಲಿಯನ್ನು ಎರಡು ಬದಿಯಲ್ಲೂ ನಿರ್ಮಿಸಿದ್ದರೂ ಕಿರು ಸೇತುವೆಯ ಸರಿಯಾದ ಅರಿವು ಇಲ್ಲದ ವಾಹನಗಳು ಇಲ್ಲಿ ಸಾಕಷ್ಟು ಬಾರೀ ಪದೇ ಪದೇ ತಡೆಬೇಲಿಗೆ ಢಿಕ್ಕಿ ಹೊಡೆಯುತ್ತಿವೆ. ಇತ್ತೀಚೆಗೆ ಕಿರು ಸೇತುವೆಯ ಗೋಚರವಿಲ್ಲದೇ ಕಾರೊಂದು ವೇಗವಾಗಿ ಬಂದು ಎದುರು ಬರುವ ವಾಹನಕ್ಕೆ ಜಾಗ ಬಿಟ್ಟು ಕೊಡುವ ಹಿನ್ನೆಲೆಯಲ್ಲಿ ನೇರವಾಗಿ ಸೇತುವೆಗೆ ಢಿಕ್ಕಿ ಹೊಡೆದು  ಸೇತುವೆಯಿಂದ ಕೆಳಗೆ ಬಿದ್ದಿತ್ತು.

ಇನ್ನಾದರೂ ಎಚ್ಚೆತ್ತುಕೊಳ್ಳಿ
ಇಲ್ಲಿ ಅದೆಷ್ಟೋ ಸರಣಿ ಅಪಘಾತಗಳು ನಡೆಯುತ್ತಿದ್ದರೂ ಈ ರಸ್ತೆ ಹಾಗೂ ಕಿರು ಸೇತುವೆಗೆ ಸಂಬಂಧಪಟ್ಟ ಇಲಾಖೆ ಮಾತ್ರ ಮೌನ ವಹಿಸಿದೆ.  ಸ್ಥಳೀಯ ಶಾಸಕರ, ಜನಪ್ರತಿನಿಧಿಗಳ ಹಾಗೂ ಲೋಕೋಪ ಯೋಗಿ ಇಲಾಖೆಯ ಅಧಿಕಾರಿಗಳ ವಾಹನಗಳು ಇದೇ ರಸ್ತೆಯಲ್ಲಿ ಸಾಕಷ್ಟು ಬಾರೀ ಓಡಾಡಿದರೂ ಕಿರು ಸೇವೆಯ ಸಮಸ್ಯೆ ಮಾತ್ರ ಯಾರ ಕಣ್ಣಿಗೂ ಕಂಡಂತಿಲ್ಲ. ಇಲಾಖೆ ಕೂಡಲೇ ಎಚ್ಚೆತ್ತು ಈ ಕಿರು ಸೇತುವೆಯ ಅಗಲೀಕರಣಕ್ಕೆ ಮನಸ್ಸು ಮಾಡಬೇಕಿದೆ ಎನ್ನುವುದು ಸ್ಥಳೀಯರ ಮಾತು.

Advertisement

ಸಮಸ್ಯೆ ಬಗೆಹರಿಸಿ
ಕಿರು ಸೇತುವೆಯಿಂದ ನಿತ್ಯ ವಾಹನ ಸವಾರರೂ ಹೊಡೆದಾಡಿಕೊಳ್ಳುವಂತಾಗಿದೆ. ಎದುರು ಬದುರು ಬರುವ ವಾಹನಕ್ಕೆ ಜಾಗ ಬಿಟ್ಟು ಕೊಡಲು ಇಲ್ಲಿ ಜಾಗವಿಲ್ಲ. ಹಲವಾರು ವರ್ಷದ ಸಮಸ್ಯೆಯನ್ನು ಕೂಡಲೇ ಸಂಬಂಧಿಸಿದ ಇಲಾಖೆ ಬಗೆಹರಿಸಬೇಕಾಗಿದೆ.
– ಶರತ್‌ ಶೆಟ್ಟಿ, ಗ್ರಾಮಸ್ಥ.

ಭರವಸೆ ನೀಡಿದ್ದಾರೆ
ಲೋಕೋಪಯೋಗಿ ಇಲಾಖೆಗೆ ಈ ಬಗ್ಗೆ ತಿಳಿಸಲಾಗಿದೆ. ಶೀಘ್ರ ಸೇತುವೆ ಅಗಲೀಕರಣಗೊಳಿಸುವ ಭರವಸೆ ದೊರೆತಿದೆ.
– ಶುಭಾ ಪಿ. ಶೆಟ್ಟಿ, ಅಧ್ಯಕ್ಷೆ, ಮುಂಡ್ಕೂರು ಗ್ರಾ.ಪಂ.

ಅಪಾಯಕಾರಿ ಸೇತುವೆ
ತುಂಬಾ ಅಪಾಯಕಾರಿಯಾದ ಈ ಸೇತುವೆಗೆ ಶೀಘ್ರ ಮುಕ್ತಿ ದೊರಕಬೇಕಾಗಿದೆ. ಇಲ್ಲಿ ವಾಹನ ಸವಾರರು ನಿತ್ಯ ಎಡವಟ್ಟು ಮಾಡಿಕೊಳ್ಳುತ್ತಿದ್ದಾರೆ. ಅಲ್ಲದೆ ಪಾದಾಚಾರಿಗಳಿಗೂ ನಡೆದಾಡಲು ಇಲ್ಲಿ ಸ್ಥಳಾವಕಾಶವಿಲ್ಲ
– ಸಾಯಿನಾಥ ಶೆಟ್ಟಿ, ಸ್ಥಳೀಯರು

— ಶರತ್‌ ಶೆಟ್ಟಿ ಮುಂಡ್ಕೂರು

Advertisement

Udayavani is now on Telegram. Click here to join our channel and stay updated with the latest news.

Next