ಹೊಸದಿಲ್ಲಿ : ರಕ್ಷಣಾ ಸಚಿವಾಲಯದ ವೆಬ್ ಸೈಟನ್ನು ಇಂದು ಶುಕ್ರವಾರ ಹ್ಯಾಕ್ ಮಾಡಲಾದ ಕಾರಣ ಮುನ್ನೆಚ್ಚರಿಕೆಯ ಕ್ರಮವಾಗಿ ಅದನ್ನು ತಾತ್ಕಾಲಿಕವಾಗಿ ತೆಗೆಯಲಾಗಿದೆ ಎಂದು ಸರಕಾರಿ ವಕ್ತಾರರೋರ್ವರು ತಿಳಿಸಿದ್ದಾರೆ.
ನ್ಯಾಶನಲ್ ಇನ್‌ಫಾರ್ಮೆಟಿಕ್ಸ್ ಸೆಂಟರ್ (ಎನ್‌ಐಸಿ) ಇದೀಗ ರಕ್ಷಣಾ ಸಚಿವಾಲಯದ ವೈಬ್‌ಸೈಟನ್ನು ಮೇಲ್ಮಟಕ್ಕೇರಿಸುವ ಕೆಲಸವನ್ನು ಕೈಗೊಂಡಿದ್ದು ಬೇಗನೆ ವೆಬ್ ಸೈಟ್ ಕ್ರಿಯಾಶೀಲವಾಗಲಿದೆ ಎಂದು ಸರಕಾರಿ ವಕ್ತಾರ ಹೇಳಿದ್ದಾರೆ.
ಹ್ಯಾಕ್ ಮಾಡಲಾಗಿದ್ದ ವೆಬ್‌ಸೈಟ್‌ನಲ್ಲಿ “ಎರರ್’ ಸಂದೇಶದೊಂದಿಗೆ ಚೀನೀ ಲಿಪಿಯೊಂದು ಕಂಡು ಬಂದಿದ್ದು ಈ ಹ್ಯಾಕಿಂಗ್ ಕೃತ್ಯದ ಹಿಂದೇ ಚೀನೀಯರ ಕೈವಾಡ ಇರಬಹುದೇ ಎಂಬ ಶಂಕೆ ಉಂಟಾಗಿದೆ. ಚೀನೀ ಲಿಪಿಯಲ್ಲಿ ಕಂಡು ಬಂದಿರುವ ಪದದ ಅರ್ಥ ‘ಪದತ್ಯಾಗ’ ಎಂದಾಗಿರುವುದಾಗಿ ಚೀನೀ ಭಾಷಾ ಪರಿಣತರು ತಿಳಿಸಿದ್ದಾರೆ.
ಮುನ್ನಚ್ಚರಿಕೆಯ ಕ್ರಮವಾಗಿ ವೈಬ್‌ಸೈಟನ್ನು ಸದ್ಯಕ್ಕೆ ಮುಚ್ಚಲಾಗಿದ್ದು ಬೇಗನೆ ಅದು ಪುನರ್‌ಚಾಲಿತವಾಗಲಿದೆ ಎಂದು ರಕ್ಷಣಾ ಸಚಿವಾಲಯದ ಮೂಲಗಳು ತಿಳಿಸಿವೆ.
ವೆಬ್ ಸೈಟ್ ಹ್ಯಾಕ್ ಮಾಡಲಾಗಿರುವುದನ್ನು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ದೃಢೀಕರಿಸಿದ್ದಾರೆ. ಈ ಬಗೆಯ ಕುಕೃತ್ಯಗಳು ಮುಂದೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ ಎಂದವರು ಹೇಳಿದ್ದಾರೆ.