Advertisement

Congress: ಸಚಿವರ ಸಭೆ, ದಲಿತ ಸಿಎಂ ಚರ್ಚೆಗೆ ಕೈಕಮಾಂಡ್‌ ಗರಂ!

02:24 AM Oct 10, 2024 | Team Udayavani |

ಬೆಂಗಳೂರು: ದಲಿತ ಮುಖ್ಯಮಂತ್ರಿ ಚರ್ಚೆಯಿಂದ ಆಡಳಿತಾರೂಢ ಕಾಂಗ್ರೆಸ್‌ಗೆ ಆಗುತ್ತಿರುವ “ಡ್ಯಾಮೇಜ್‌’ ಕಂಟ್ರೋಲ್‌ಗೆ
ಮುಂದಾಗಿರುವ ಕಾಂಗ್ರೆಸ್‌ ಪಕ್ಷದ ಹೈಕಮಾಂಡ್‌, ಚರ್ಚೆಯ ಮೂಲವಾಗಿರುವ ದಲಿತ ಸಚಿವರ “ರಹಸ್ಯ ಭೇಟಿ’ಗಳಿಗೆ ಕತ್ತರಿ ಹಾಕಲು ನಿರ್ಧರಿಸಿದೆ.

Advertisement

ಮುಡಾ ನಿವೇಶನ ಹಂಚಿಕೆ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಅವರ ಪತ್ನಿಯ ಹೆಸರು ತಳಕು ಹಾಕಿಕೊಂಡ ಅನಂತರ ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಗುಸುಗುಸು ಕೇಳಿಬರುತ್ತಿದೆ. ಇದೇ ಸಂದರ್ಭದಲ್ಲಿ ಪ್ರಭಾವಿ ದಲಿತ ಸಚಿವರು ಪ್ರತ್ಯೇಕವಾಗಿ ಸಭೆ ನಡೆಸುತ್ತಿರುವುದು ಅದಕ್ಕೆ ಇಂಬುಕೊಟ್ಟಿದೆ. ಜತೆಗೆ “ದಲಿತ ಮುಖ್ಯಮಂತ್ರಿ’ ಚರ್ಚೆಗೂ ನಾಂದಿ ಹಾಡಿದೆ.

ಹೀಗೆ ಭೇಟಿ ಮಾಡುವ ಸಚಿವರ ಹೇಳಿಕೆಗಳು ಕೂಡ ಕಾರ್ಯಕರ್ತರಲ್ಲಿ ಮತ್ತಷ್ಟು ಆತಂಕ ಸೃಷ್ಟಿಸುತ್ತಿವೆ. ಇದು ನಾಯಕತ್ವದ ಗೊಂದಲಕ್ಕೆ ಕಾರಣವಾಗುವುದರ ಜತೆಗೆ ಸ್ವತಃ ಆಡಳಿತ ಪಕ್ಷ, ವಿಪಕ್ಷಗಳಿಗೆ ಸಿಎಂ ಬದಲಾವಣೆ ಚರ್ಚೆಗೆ ವೇದಿಕೆ ಕಲ್ಪಿಸಿದಂತಾಗುತ್ತಿದೆ. ಈ ಹಿನ್ನೆಲೆಯಲ್ಲಿ “ರಹಸ್ಯ ಭೇಟಿ’ಗಳಿಗೆ ಬ್ರೇಕ್‌ ಹಾಕುವಂತೆ ಪಕ್ಷದ ವರಿಷ್ಠರು ರಾಜ್ಯ ನಾಯಕರಿಗೆ ಸೂಚನೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಡಿಕೆಶಿಗೆ ವೇಣುಗೋಪಾಲ್‌ ಕರೆ
ಈ ಸಂಬಂಧ ಎಐಸಿಸಿ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್‌, ಕೆಪಿಸಿಸಿ ಅಧ್ಯಕ್ಷರೂ ಆದ ಡಿಸಿಎಂ ಡಿ.ಕೆ. ಶಿವಕುಮಾರ್‌ಗೆ ಕರೆ ಮಾಡಿ, ಕಳೆದ ಒಂದು ವಾರದಿಂದ ದಲಿತ ಸಚಿವರು ಪರಸ್ಪರ ಮಾತುಕತೆ ಮತ್ತು ಕೆಲ ನಾಯಕರ ದಿಲ್ಲಿ ಭೇಟಿ ಹಾಗೂ ಅದರ ಅನಂತರದ ಬೆಳವಣಿಗೆಗಳ ಕುರಿತು ಪ್ರಸ್ತಾವಿಸಿ ಬೇಸರ ವ್ಯಕ್ತಪಡಿಸಿದ್ದಾರೆ.

ಈ ರೀತಿಯ ಬೆಳವಣಿಗೆಗಳು ಪಕ್ಷದಲ್ಲಿನ ಒಗ್ಗಟ್ಟಿನಲ್ಲಿ ಬಿರುಕು ಉಂಟು ಮಾಡಲು ಕಾರಣವಾಗುವುದರ ಜತೆಗೆ ಕಾರ್ಯಕರ್ತರಲ್ಲೂ ಗೊಂದಲ ಸೃಷ್ಟಿಸುವ ಸಾಧ್ಯತೆಗಳಿವೆ. ವೈಯಕ್ತಿಕ ಕಾರಣಗಳಿಗೆ ಭೇಟಿಯಾಗಿದ್ದರೂ ಸಂದರ್ಭ ಮತ್ತು ಸನ್ನಿವೇಶಗಳು ವ್ಯತಿರಿಕ್ತವಾಗಿ ಯೋಚಿಸುವಂತೆ ಮಾಡುತ್ತದೆ. ಆದ್ದರಿಂದ ಇದಕ್ಕೆ ಅವಕಾಶ ನೀಡಬಾರದು ಎಂದು ನಿರ್ದೇಶನ ನೀಡಿದ್ದಾರೆ ಎನ್ನಲಾಗಿದೆ.

Advertisement

ಮೇಲಿಂದ ಮೇಲೆ ಭೇಟಿ
ಕೆಲವು ದಿನಗಳಿಂದ ಸಚಿವರಾದ ಸತೀಶ್‌ ಜಾರಕಿಹೊಳಿ, ಡಾ| ಜಿ. ಪರಮೇಶ್ವರ್‌, ಡಾ| ಎಚ್‌.ಸಿ. ಮಹದೇವಪ್ಪ ಪದೇಪದೆ ಪರಸ್ಪರ ಭೇಟಿಯಾಗುತ್ತಿದ್ದಾರೆ. ಮೊದಲಿಗೆ ಪರಮೇಶ್ವರ್‌ ಮತ್ತು ಡಿ.ಕೆ. ಶಿವಕುಮಾರ್‌ ಭೇಟಿಯಾದರು. ಬಳಿಕ ಮಹದೇವಪ್ಪ ಮನೆಯಲ್ಲಿ ಸತೀಶ್‌ ಜಾರಕಿಹೊಳಿ ಮತ್ತು ಪರಮೇಶ್ವರ್‌ ಮಾತುಕತೆ ನಡೆಸಿದರು. ಬೆನ್ನಲ್ಲೇ ಜಾರಕಿಹೊಳಿ ದಿಲ್ಲಿಗೆ ದೌಡಾಯಿಸಿದರು. ಅಲ್ಲಿಂದ ಬಂದವರೇ ತುಮಕೂರಿಗೆ ತೆರಳಿ ಮತ್ತೆ ಪರಮೇಶ್ವರ್‌ ಭೇಟಿಯಾಗಿದ್ದರು.

ಈ ನಡುವೆ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಮತ್ತು ಮಾಜಿ ಸಂಸದ ಡಿ.ಕೆ. ಸುರೇಶ್‌ ಪ್ರತ್ಯೇಕವಾಗಿ ಜಾರಕಿಹೊಳಿ ಅವರನ್ನು ಭೇಟಿಯಾದರು. ಮತ್ತೂಂದೆಡೆ ಅದೇ ಜಾರಕಿಹೊಳಿ, ಜಿ.ಟಿ. ದೇವೇಗೌಡ ಪುತ್ರ ಹರೀಶ್‌ ಗೌಡ ಅವರನ್ನು ಮೈಸೂರಲ್ಲಿ ಭೇಟಿಯಾದರು.

ಅದೇ ದಿನ ರಾತ್ರಿ ಮಹದೇವಪ್ಪ ತಮ್ಮ ಮನೆಯಲ್ಲಿ ಜಾರಕಿಹೊಳಿಗೆ ಔತಣಕೂಟ ಏರ್ಪಡಿಸಿದ್ದರು. ಇದೆಲ್ಲ ಬೆಳವಣಿಗೆಗಳಿಗೆ ಆಯಾ ನಾಯಕರು ತಮ್ಮದೇ ಆದ ರೀತಿಯಲ್ಲಿ ಸಮಜಾಯಿಷಿ ಮತ್ತು ಸ್ಪಷ್ಟನೆ ನೀಡಿದ್ದಾರೆ. ಆದಾಗ್ಯೂ ಭೇಟಿಯ ಬಗ್ಗೆ ಅಪಸ್ವರ ನಿಂತಿಲ್ಲ. ಪಕ್ಷದ ವರಿಷ್ಠರ ಸೂಚನೆಯ ಅನಂತರವಾದರೂ ಗೊಂದಲಗಳಿಗೆ ತೆರೆಬೀಳುತ್ತದೆಯೇ ಕಾದುನೋಡಬೇಕಿದೆ.

ಸಿಎಂ ಭೇಟಿಯಾದ ಡಿಸಿಎಂ
ವೇಣುಗೋಪಾಲ್‌ ಕರೆ ಹಿನ್ನೆಲೆಯಲ್ಲಿ ಉಪಮುಖ್ಯಮಂತ್ರಿ ಶಿವಕುಮಾರ್‌ ಬುಧವಾರ ಬೆಳಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವ ರನ್ನು ಭೇಟಿಯಾಗಿ ಕೆ.ಸಿ. ವೇಣುಗೋಪಾಲ್‌ ಜತೆ ದೂರವಾಣಿ ಮೂಲಕ ನಡೆಸಿದ ಮಾತುಕತೆಯ ವಿವರಗಳನ್ನು ಹಂಚಿಕೊಂಡಿದ್ದಾರೆ. ಸಚಿವರ ಪ್ರತ್ಯೇಕ ಸಭೆಗಳಿಗೆ ಕಡಿವಾಣ ಹಾಕುವಂತೆ ಹೈಕ ಮಾಂಡ್‌ ಸೂಚಿಸಿರುವ ವಿಷಯವನ್ನು ಸಿಎಂ ಗಮನಕ್ಕೆ ತಂದಿದ್ದಾರೆ ಎಂದು ಉನ್ನತ ಮೂಲ ಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next