ಲಿಂಗಸುಗೂರು: ಜಿಲ್ಲಾ ಉಸ್ತುವಾರಿ ಸಚಿವರ ಮನವಿ ಮೇರೆಗೆ ಜಂಗಮ ಸಮಾಜಕ್ಕೆ ಪರಿಶಿಷ್ಟ ಜಾತಿ ಪ್ರಮಾಣಪತ್ರ ನೀಡುವಂತೆ ಬೇಡ ಜಂಗಮ ಸಂಘಟನೆಗಳ ಒಕ್ಕೂಟ ಪಟ್ಟಣದ ಎಸಿ ಕಚೇರಿ ಬಳಿ ನಡೆಸುತ್ತಿರುವ ಧರಣಿ ಹಿಂಪಡೆಯಲಾಯಿತು.
ಜಂಗಮ ಸಮಾಜಕ್ಕೆ ಪರಿಶಿಷ್ಟ ಜಾತಿ ಪ್ರಮಾಣಪತ್ರ ನೀಡುವಂತೆ ಬೆಂಗಳೂರಿನಲ್ಲಿ ಕಳೆದ ಜೂ.30ರಂದು ಬಿ.ಡಿ. ಹಿರೇಮಠ ನೇತೃತ್ವದಲ್ಲಿ ನಡೆಯುತ್ತಿರುವ ಹೋರಾಟದ ಭಾಗವಾಗಿ ಪಟ್ಟಣದ ಎಸಿ ಕಚೇರಿ ಬಳಿ ಬೇಡ ಜಂಗಮಗಳ ಒಕ್ಕೂಟದಿಂದ ಜು.6ರಿಂದ ಸತತ 42 ದಿನಗಳ ಕಾಲ ಧರಣಿ ನಡೆಸಲಾಗಿತ್ತು.
ಹೋರಾಟ ನಿರತ ಬಸವರಾಜಸ್ವಾಮಿ ಹಿರೇಮಠ ಹೃದಯಘಾತದಿಂದ ಮೃತಪಟ್ಟ ಸುದ್ದಿ ತಿಳಿದು ಜಿಲ್ಲಾ ಉಸ್ತುವಾರಿ ಸಚಿವ ಶಂಕರ್ ಪಾಟೀಲ್ ಮುನೇನಕೊಪ್ಪ ಅವರು ಬಸವರಾಜಸ್ವಾಮಿ ಅವರ ಮನೆಗೆ ಭೇಟಿ ನೀಡಿ ಕುಟಂಬಸ್ಥರಿಗೆ ಸಾಂತ್ವನ ಹೇಳಿದ ನಂತರ ಧರಣಿ ನಿರತ ಹೋರಾಟಗಾರರೊಂದಿಗೆ ಮಾತುಕತೆ ನಡೆಸಿ ಅನಿರ್ದಿಷ್ಟ ಧರಣಿ ಕೈಬಿಟ್ಟು ಸರ್ಕಾರದ ಜೊತೆ ಶಾಂತಿಯುತ ಮಾತುಕತೆಗೆ ಮುಂದಾಗಬೇಕು ಎಂದು ಮನವಿ ಮಾಡಿದ್ದರಿಂದ ಸಚಿವರ ಮನವಿಗೆ ಗೌರವ ನೀಡಿ 42 ದಿನಗಳಿಂದ ನಡೆಸಿಕೊಂಡು ಬಂದ ಧರಣಿ ಮುಕ್ತಾಯಗೊಳಿಸಿ ಬೆಂಗಳೂರಿನಲ್ಲಿ ನಡೆಯುತ್ತಿರುವ ಹೋರಾಟಕ್ಕೆ ಬೆಂಬಲ ನೀಡುವುದಾಗಿ ಹಾಗೂ ಸರ್ಕಾರ ಜಂಗಮ ಬೇಡಿಕೆ ಕೂಡಲೇ ಈಡೇರಿಸಬೇಕೆಂದು ಆಗ್ರಹಿಸಿ ಎಸಿ ಮೂಲಕ ಸಿಎಂಗೆ ಮನವಿ ಸಲ್ಲಿಸಿದರು.
ಈ ವೇಳೆ ಒಕ್ಕೂಟದ ಅಧ್ಯಕ್ಷ ಪ್ರಭುಸ್ವಾಮಿ ಅತೂ°ರು, ವೀರಭದ್ರಯ್ಯಸ್ವಾಮಿ, ಮಹೇಶ ಶಾಸ್ತ್ರಿ, ಜಂಬಯ್ಯಸ್ವಾಮಿ, ಶರಣಬಸಯ್ಯ ಹಿರೇಮಠ, ವೀರಭದ್ರಯ್ಯಸ್ವಾಮಿ ವಸ್ತ್ರದ, ಶರಣಯ್ಯ ದಾಸೋಹಮಠ, ವೀರಶ ಜಗವತಿಮಠ, ಬಸವರಾಜಸ್ವಾಮಿ ಹಿರೇಮಠ, ಸೂಗರಯ್ಯಸ್ವಾಮಿ, ಶಿವಮೂರ್ತಿಯ್ಯಸ್ವಾಮಿ, ಮರಿಸ್ವಾಮಿ ಶಿವಕುಮಾರ ನಂದಿಕೋಲಮಠ, ನಾಗಯ್ಯ ಸೊಪ್ಪಿಮಠ ಇತರರಿದ್ದರು.