ಮೈಸೂರು: ಕೋವಿಡ್ 19 ಹೋರಾಟದಲ್ಲಿ ಮೈಸೂರಿನ ಪಾತ್ರ ಮಹತ್ವದ್ದಾಗಿದೆ. ಇದಕ್ಕೆ ಜಿಲ್ಲೆಯ ಪೊಲೀಸರ ಕಾರ್ಯ ಮಹತ್ವದ್ದು, ರಾಜ್ಯಕ್ಕೆ ಇಲ್ಲಿನ ನಿರ್ವಹಣೆ ಮಾದರಿಯಾಗಿದೆ ಎಂದು ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.
ಜಿಲ್ಲಾ ಪೊಲೀಸರ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾಡಿ, ರಾಜ್ಯಕ್ಕೆ ಬಂದ ಎಲ್ಲ ತಬ್ಲೀಘಿ ಗಳನ್ನು ಗುರುತಿಸಿ, ಅವರನ್ನು ಪತ್ತೆ ಹಚ್ಚಿ ಚಿಕಿತ್ಸೆಗೆ ಒಳಪಡಿಸುವ ಕೆಲಸವನ್ನು ಕರ್ನಾಟಕ ಪೊಲೀಸರು ಮಾಡಿದ್ದಾರೆ. ಜೊತೆಗೆ ಬೇರೆ ರಾಜ್ಯಗಳಲ್ಲಿರುವ ತಬ್ಲೀಘಿ ಗಳನ್ನು ಪತ್ತೆ ಹಚ್ಚಿ ಅವರ ಬಗ್ಗೆ ಆ ರಾಜ್ಯದವರಿಗೆ ದೂರವಾಣಿ ಸಂಖ್ಯೆ ಸಹಿತ ಮಾಹಿತಿ ನೀಡಲಾಗಿದೆ. ಇಂಥ ಕೆಲಸವನ್ನು ಮಾಡಿದ ಏಕೈಕ ರಾಜ್ಯ ಕರ್ನಾಟಕ ಎಂದು ತಿಳಿಸಿದರು.
ಆರೋಗ್ಯ ಕಾಪಾಡಿಕೊಳ್ಳಿ: ಪೊಲೀಸರ ಆರೋಗ್ಯ ಬಹಳ ಮುಖ್ಯ. ಹೀಗಾಗಿ ನೀವು ಆರೋಗ್ಯ ಕಾಪಾಡಿ ಕೊಳ್ಳಬೇಕು. ನಿಮಗೆ ಸಿಗಬೇಕಾದ ಸೌಲಭ್ಯವನ್ನು ನೀಡುವಂತೆ ನಾನು ಮುಖ್ಯಮಂತ್ರಿಗಳ ಜೊತೆ ಚರ್ಚಿಸಿದ್ದೇನೆ ಎಂದರು.
ಎಲ್ಲೆಡೆಯಿಂದ ಪ್ರಶಂಸೆ: ಸಚಿವ ಎಸ್.ಟಿ. ಸೊಮಶೇಖರ್ ಮಾತನಾಡಿ, ಪೊಲೀಸ್ ಇಲಾಖೆ, ಜಿಲ್ಲಾಡಳಿತ ಕಾರ್ಯನಿರ್ವಹಿಸಿದ ರೀತಿಗೆ ಎಲ್ಲೆಡೆಯಿಂ ದ ಪ್ರಶಂಸೆ ವ್ಯಕ್ತವಾಗುತ್ತಿದೆ. ಯಾರೂ ಕೆಲಸ ಕಾರ್ಯಗಳ ಮೇಲೆ ಬೆರಳು ತೋರಿಸಿಲ್ಲ. ಡೀಸಿ ಜೊತೆ ಪೊಲೀಸ್ ಇಲಾಖೆ ಸಮನ್ವಯ ಹೊಂದಿ ಕಾರ್ಯ ನಿರ್ವ ಹಿಸಿದ್ದರ ಪರಿಣಾಮ ರಾಜ್ಯದಲ್ಲೇ ಹೆಚ್ಚಿದ್ದ ಕೋವಿಡ್ 19 ಪ್ರಕರಣ ಕಡಿಮೆಯಾಗಿದೆ ಎಂದು ಹೇಳಿದರು.
ಶಾಸಕ ಎಲ್.ನಾಗೇಂದ್ರ, ದಕ್ಷಿಣ ವಲಯ ಐಜಿಪಿ ವಿಪುಲ್ ಕುಮಾರ್, ಮೈಸೂರು ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್, ಡಿಸಿಪಿ ಪ್ರಕಾಶ್ ಗೌಡ, ಅಪರ ಪೊಲೀಸ್ ವರಿಷ್ಠಾಧಿಕಾರಿ ಪಿ.ವಿ. ಸ್ನೇಹ ಉಪಸ್ಥಿತರಿದ್ದರು.