ಮಂಗಳೂರು: ಕುಕ್ಕರ್ ಪ್ರಕರಣವನ್ನು ಸರ್ಕಾರ ಸಮರ್ಥವಾಗಿ ನಿಭಾಯಿಸುತ್ತಿದೆ, ರಾಷ್ಟ್ರೀಯ ತನಿಖಾ ದಳಕ್ಕೆ ಇದನ್ನು ಹಸ್ತಾಂತರಿಸುವ ಮೂಲಕ ಪ್ರಕರಣದ ಆಳ -ಅಗಲ ಅರ್ಥಮಾಡಿಕೊಳ್ಳಲಾಗುವುದು ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ವಿ. ಸುನಿಲ್ ಕುಮಾರ್ ಹೇಳಿದ್ದಾರೆ.
ನಾಗುರಿಗೆ ಶುಕ್ರವಾರ ಭೇಟಿ ನೀಡಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಈ ಪ್ರಕರಣದ ಹಿಂದೆ ಮುಂದೆ ಯಾರ್ಯಾರಿದ್ದಾರೆ ಎನ್ನುವುದು ಎನ್‌ಐಎ ತನಿಖೆಯಿಂದ ಬಹಿರಂಗಗೊಳ್ಳುವ ಸಂಪೂರ್ಣ ವಿಶ್ವಾಸವಿದೆ ಎಂದರು.
ಪಿಎಫ್‌ಐ ನಿಷೇಧದ ಬಳಿಕ ಈ ರೀತಿಯ ಚಟುವಟಿಕೆಗೆ ಕಡಿವಾಣ ಹಾಕುವ ಕ್ರಮ ಸರ್ಕಾರರಿಂದ ಆಗಿದೆ. ಬೆಳ್ಳಾರೆಯ ಪ್ರವೀಣ್ ನೆಟ್ಟಾರು, ಶಿವಮೊಗ್ಗದ ಹರ್ಷ ಪ್ರಕರಣಗಳ ಮೂಲಕ ಸಮಾಜದಲ್ಲಿ ಭಯದ ವಾತಾವರಣ ನಿರ್ಮಾಣ ಮಾಡುವ ಸಂಚನ್ನು ಹಾಕಿಕೊಂಡಿದ್ದು, ಅದನ್ನು ವಿಫಲಗೊಳಿಸುವ ಎಲ್ಲ ದಿಟ್ಟ ಕ್ರಮಗಳನ್ನು ಸರಕಾರ ಕೈಗೊಂಡಿದೆ, ಪಿಎಫ್‌ಐ ನಿಷೇಧ ಇದರ ಒಂದು ಭಾಗ. ಸಮಾಜಘಾತುಕ ಶಕ್ತಿಗಳ ಬಗ್ಗೆ ನಮ್ಮ ಸರಕಾರ ಮೃದು ಧೋರಣೆ ಹೊಂದುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಎನ್‌ಐಎ ಘಟಕ ಸ್ಥಾಪನೆ ಪೂರಕ ಸ್ಪಂದನೆ: ಮಂಗಳೂರಿನಲ್ಲಿ ಎನ್‌ಐಎ ಘಟಕ ಸ್ಥಾಪನೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಮಂಗಳೂರಿನಲ್ಲಿ ಎನ್‌ಐಎ ಘಟಕ ಸ್ಥಾಪನೆಗೆ ನಾವು ಮನವಿ ಮಾಡಿದ್ದು, ಕೇಂದ್ರ ಇದಕ್ಕೆ ಪೂರಕ ಸ್ಪಂದನೆ ನೀಡಿದೆ, ಕೆಲವೊಂದು ನಿಯಮಾವಳಿ, ನಿಬಂಧನೆಗಳಿದ್ದು, ಅವುಗಳನ್ನು ಪರಿಶೀಲಿಸಲಾಗುತ್ತಿದೆ ಎಂದರು.
ದುಷ್ಕರ್ಮಿಗಳು ದೇವಸ್ಥಾನಗಳನ್ನು ಟಾರ್ಗೆಟ್ ಮಾಡುವ ಯತ್ನ ವಿಫಲವಾಗಿದೆ. ಈ ರೀತಿಯ ಕೃತ್ಯದ ಹಿಂದೆ ದೊಡ್ಡ ಮಟ್ಟದ ಷಡ್ಯಂತ್ರವಿದೆ ಎನ್ನುವುದು ಮೇಲ್ನೋಟಕ್ಕೆ ಸ್ಪಷ್ಟವಾಗಿದೆ. ಇಂತಹ ಸಮಾಜಘಾತುಕ ಶಕ್ತಿಗಳನ್ನು ರಾಷ್ಟ್ರೀಯ ತನಿಖಾದಳ ಹಾಗೂ ನಮ್ಮ ಪೊಲೀಸರು ಮಟ್ಟಹಾಕುವ ವಿಶ್ವಾಸವಿದೆ ಎಂದರು.
ಚಿಕಿತ್ಸೆ ಪೂರ್ಣ ವೆಚ್ಚ
ಕುಕ್ಕರ್ ಪ್ರಕರಣದಲ್ಲಿ ಗಾಯಗೊಂಡಿರುವ ರಿಕ್ಷಾ ಚಾಲಕ ಪುರುಷೋತ್ತಮ ಅವರ ಚಿಕಿತ್ಸೆಯ ಪೂರ್ಣ ವೆಚ್ಚವನ್ನು ಸರಕಾರ ಭರಿಸಲಿದೆ ಎಂದು ಅವರು ತಿಳಿಸಿದರು.
ಈ ಸಂದರ್ಭ ಮೇಯರ್ ಜಯಾನಂದ ಅಂಚನ್, ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್., ಕಾರ್ಪೊರೇಟರ್‌ಗಳಾದ ಸಂದೀಪ್ ಗರೋಡಿ, ಸುಧೀರ್ ಶೆಟ್ಟಿ ಕಣ್ಣೂರು, ಬಿಜೆಪಿ ಜಿಲ್ಲಾ ಉಪಾಧ್ಯಕ್ಷೆ ಪ್ರಭಾ ಮಾಲಿನಿ, ಮಂಗಳೂರು ನಗರ ದಕ್ಷಿಣ ಅಧ್ಯಕ್ಷ ವಿಜಯ ಕುಮಾರ್ ಶೆಟ್ಟಿ, ಮುಖಂಡರಾದ ಚಂದ್ರಶೇಖರ್ ಉಚ್ಚಿಲ್, ವಿಶ್ವಹಿಂದೂ ಪರಿಷತ್ ಪ್ರಾಂತ ಸಹಕಾರ್ಯದರ್ಶಿ ಶರಣ್ ಪಂಪ್‌ವೆಲ್, ಗುರುಚರಣ್ ಉಪಸ್ಥಿತರಿದ್ದರು.