ಬೆಂಗಳೂರು : ರಾಜ್ಯದಲ್ಲಿನ ಸರ್ಕಾರಿ ಶಾಲೆಗಳಲ್ಲಿ ಶಿಥಿಲಾವಸ್ಥೆಯಲ್ಲಿರುವ ಎಲ್ಲಾ ಶಾಲಾ ಕೊಠಡಿಗಳನ್ನು ನೆಲಸಮಗೊಳಿಸಲು ಆದೇಶಿಸಲಾಗಿದೆಯೆಂದು ಪ್ರಾಥಮಿಕ ಶಿಕ್ಷಣ ಸಚಿವ ತನ್ವೀರ್ ಸೇಠ್ ವಿಧಾನಸಭೆಗಿಂದು ತಿಳಿಸಿದ್ದಾರೆ.
ಬುಧವಾರ ಪ್ರಶ್ನೋತ್ತರ ಕಲಾಪದಲ್ಲಿ ಶೃಂಗೇರಿ ಶಾಸಕ ಜೀವರಾಜ್ ಪ್ರಶ್ನೆಗೆ ಉತ್ತರ ನೀಡಿದ ಸಚಿವರು, ಬೀಳುವ ಹಂತದಲ್ಲಿರುವ ಶಾಲಾ ಕೊಠಡಿ ಕೆಡವಿ ಹೊಸ ಕೊಠಡಿ ನಿರ್ಮಾಣಕ್ಕೆ ಪ್ರತ್ಯೇಕ ಅನುದಾನ ಬಿಡುಗಡೆ ಮಾಡಲು ಸರ್ಕಾರ ಕ್ರಮ ತೆಗೆದುಕೊಳ್ಳಲಿದೆ ಎಂದು ಹೇಳಿದರು.
ಶಾಲಾ ಕೊಠಡಿ ನಿರ್ಮಾಣಕ್ಕೆ ಕಳೆದ ಹಲವಾರು ವರ್ಷಗಳಿಂದ ಬಳಕೆಯಾಗದೇ ಉಳಿದಿರುವ ಶಾಸಕರ ಕ್ಷೇತ್ರಾಭಿವೃದ್ಧಿ ನಿಧಿಯ 243 ಕೋಟಿ ರೂಪಾಯಿ ಹಣವನ್ನು ಸಹ ಕೊಠಡಿ ನಿರ್ಮಿಸಲು ಬಳಸಿಕೊಳ್ಳಲಾಗುತ್ತದೆ ಎಂದು ತಿಳಿಸಿದರು.
ಚವಿವರ ಈ ಉತ್ತರಕ್ಕೆ ಅತೃಪ್ತರಾದ ಶಾಸಕ ಜೀವರಾಜ್ ಶಾಲೆಗಳ ದುಃಸ್ಥಿತಿ ಕುರಿತು ಸಚಿವರ ಗಮನ ಸೆಳೆಯುತ್ತಾ,ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ಕೊಡುವುದರ ಜೊತೆಗೆ ವಿದ್ಯಾರ್ಥಿಗಳ ಜೀವಕ್ಕೆ ರಕ್ಷಣೆ ನೀಡಬೇಕಾಗಿದೆ ಎಂದರು. ತಲೆ ಮೇಲೆ ಹೆಂಚು ಬಿದ್ದು ವಿದ್ಯಾರ್ಥಿಗಳು ಜೀವ ಕಳೆದುಕೊಳ್ಳುವ ಸ್ಥಿತಿ ಎದುರಾಗಿದೆ, ಸರ್ಕಾರದ ಶಾಲೆಗಳಿಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳೇ ಹೆಚ್ಚಾಗಿ ಹೋಗುತ್ತಾರೆ ಅವರ ಬಗ್ಗೆ ಸರ್ಕಾರಕ್ಕೆ ಕಾಳಜಿ ಇಲ್ಲವೇ ಎಂದು ಪ್ರಶ್ನಿಸಿದರು.ಒಂದು ಕೊಠಡಿ ನಿರ್ಮಾಣಕ್ಕೆ 1ಲಕ್ಷ ದಿಂದ 1.50 ಲಕ್ಷ ರೂಪಾಯಿ ಅನುದಾನ ಸಾಲುತ್ತದೆಯೇ ..? ಈ ಹಣದಲ್ಲಿ ಕೊಠಡಿ ಕಟ್ಟುವ ಬದಲು ವಿದ್ಯಾರ್ಥಿಗಳಿಗೆ ಚಾಕಲೇಟ್ ಕೊಡುವುದು ಉತ್ತಮವೆಂದು ಸರ್ಕಾರಕ್ಕೆ ಚುಚ್ಚಿದರು.
ಶಾಲಾ ಕೊಠಡಿ ಕಟ್ಟಲು 546 ಕೋಟಿ ರೂಪಾಯಿ ಹಣ ಬಿಡುಗಡೆ ಮಾಡಲಾಗಿದೆ.ಕೇಂದ್ರ ಸರ್ಕಾರಕ್ಕೆ ಸಹ ಅನುದಾನ ನೀಡುವಂತೆ ಕೋರಿಕೊಳ್ಳಲಾಗಿದೆ .ಶಾಲಾಭಿವೃದ್ಧಿಗೆ ನೀಡಲಾಗುವ ಜಿಲ್ಲಾ ಅನುದಾನವನ್ನೂ ಸಹ ಕೊಠಡಿ ಕಟ್ಟಲು ಬಳಸಲಾಗುತ್ತದೆ ಎಂದು ಸಚಿವರು ತಿಳಿಸಿದರು.