ಬೆಂಗಳೂರು: ಖ್ಯಾತ ಜಾನಪದ ಸಂಗ್ರಹಕಾರ ದಿ.ಎಲ್.ಆರ್. ಹೆಗಡೆಯವರ ಅಪ್ರಕಟಿತ ಆರು ಸಂಗ್ರಹಗಳ ಡಿಜಿಟಲ್ ಪುಸ್ತಕಗಳನ್ನು ಕನ್ನಡ ಮತ್ತು ಸಂಸ್ಕೃತಿ ಹಾಗೂ ಇಂಧನ ಸಚಿವ ಸುನಿಲ್ ಕುಮಾರ್ ಶುಕ್ರವಾರ ಬಿಡುಗಡೆ ಮಾಡಿದರು.
ಈ ಪ್ರಕಟಣೆಗಳು ಮಿತ್ರ ಮಾಧ್ಯಮ ಸಂಸ್ಥೆಯಿಂದ ಪ್ರಕಟವಾಗುತ್ತಿರುವ ಈ ಸರಣಿಯ ಎರಡನೇ ಕಂತಿನ ಪುಸ್ತಕಗಳಾಗಿವೆ. ಇಂದು ಎಲ್.ಆರ್. ಹೆಗಡೆಯವರ ಭಾಷಣಗಳು, ಪತ್ರಿಕೆಗಳಲ್ಲಿ ಬಂದ ಜನಪದ ಕಥೆಗಳು, ಸಮ್ಮಿಶ್ರ ಕಥನಗೀತಗಳು, ಜನಪದ ವೈದ್ಯ ಲೇಖನಗಳು, ಜಾನಪದ ಲೇಖನಗಳು, ಎಲ್ ಆರ್ ಹೆಗಡೆ ರಚಿಸಿದ ಪದಗಳು, ಹಾಸ್ಯ ಲೇಖನಗಳು, ಕಥೆ, ನಾಟಕ ಪುಸ್ತಕ ಬಿಡುಗಡೆಗೊಂಡಿದೆ.
ಇದನ್ನೂ ಓದಿ:ಅರಸುರವರ ಬೆನ್ನಿಗೆ ಚೂರಿ ಹಾಕಿದವರು ನೀವು : ಎಚ್.ವಿಶ್ವನಾಥ್ ವಿರುದ್ದ ಶ್ರೀನಿವಾಸ ಪ್ರಸಾದ್ ಕಿಡಿ
ಒಟ್ಟು 1100 ಪುಟಗಳ ಈ ಆರು ಪುಸ್ತಕಗಳು ಸೇರಿದಂತೆ ಈವರೆಗೆ 1800 ಪುಟಗಳ ಜಾನಪದ ಸಂಗ್ರಹಗಳನ್ನು ಪ್ರಕಟಿಸಿದಂತಾಗಿದೆ. ಮೊದಲ ಕಂತಿನ ಆರೂ ಪುಸ್ತಕಗಳನ್ನು ಕರ್ನಾಟಕ ಸರ್ಕಾರದ ಕಣಜ ಜಾಲತಾಣದಲ್ಲಿ ಮತ್ತು ಭಾರತ ಸರ್ಕಾರದ ಭಾರತವಾಣಿ ಜಾಲತಾಣದಲ್ಲಿ ಮುಕ್ತವಾಗಿ ಪ್ರಕಟಿಸಲಾಗಿದ್ದು ಈ ಹೊಸ ಪುಸ್ತಕಗಳನ್ನೂ ಸಾಫ್ಟ್ ಪ್ರತಿಗಳೊಂದಿಗೆ ಈ ಜಾಲತಾಣಗಳಿಗೆ ಮುಕ್ತವಾಗಿ ನೀಡಲಾಗುತ್ತಿದೆ. ಇದು ಸಂಪೂರ್ಣವಾಗಿ ಸ್ವಯಂಸೇವಾ ಕಾರ್ಯಕರ್ತರಿಂದ ಮತ್ತು ಸ್ವಯಂಸೇವಾ ಸಂಘಟನೆಗಳಿಂದ ನಡೆಯುತ್ತಿರುವ ಸಾರ್ವಜನಿಕ ಹಿತದ ಸಾಂಸ್ಕೃತಿಕ ಕಾಯಕವಾಗಿದೆ. ಫೇಸ್‌ಬುಕ್ ನಲ್ಲಿ ಇರುವ ಹಲವು ನಾಗರಿಕರು ಉಚಿತವಾಗಿ ಡಿಟಿಪಿ ಸೇವೆಯನ್ನು ನೀಡಿದ್ದಾರೆ; ಮುಖಪುಟ ಬರೆದುಕೊಟ್ಟಿದ್ದಾರೆ.
ಈ ಎಲ್ಲ ಪುಸ್ತಕಗಳನ್ನೂ ಎಲ್ ಆರ್ ಹೆಗಡೆಯವರ ಪುತ್ರಿ ರೇಣುಕಾ ರಾಮಕೃಷ್ಣ ಭಟ್ ಅವರು ಸಂಗ್ರಹಿಸಿ, ಸಂಪಾದಿಸಿ ಕೊಟ್ಟಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನೂ 15 ಪುಸ್ತಕಗಳು ಪ್ರಕಟವಾಗಲಿವೆ.