Advertisement

ಪ್ರತಿಭಟನೆ ಹೆಸರಿನಲ್ಲಿ ದಾಂಧಲೆ ಸರಿಯಲ್ಲ: ಕಾಂಗ್ರೆಸ್‌ ವಿರುದ್ಧ ಗುಡುಗಿದ ಸಚಿವ ಸುಧಾಕರ್‌

06:57 PM Jun 13, 2022 | Team Udayavani |

ಬೆಂಗಳೂರು: ಪ್ರತಿಭಟನೆ ಹೆಸರಿನಲ್ಲಿ ಕಾಂಗ್ರೆಸ್‌ ನಾಯಕರು ಈ ನೆಲದ ಕಾನೂನನ್ನು ಧಿಕ್ಕರಿಸಿದ್ದಾರೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ಕರೆಯುವುದೇ ತಪ್ಪಾ? ಉನ್ನತ ಸ್ಥಾನದಲ್ಲಿ ಇದ್ದವರಿಗೆ ಒಂದು ಕಾನೂನು ಶ್ರೀಸಾಮಾನ್ಯನಿಗೆ ಮತ್ತೊಂದು ಕಾನೂನು ಇಲ್ಲ. ಕಾನೂನಿನ ಕಣ್ಣಿನಲ್ಲಿ ಎಲ್ಲರೂ ಒಂದೇ ಎಂಬ ಸಾಮಾನ್ಯ ಜ್ಞಾನ ಅವರಿಗೆ ಇದ್ದಂತಿಲ್ಲ ಎಂದು ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದರು.

ಈ ನೆಲದ ಕಾನೂನು ಗೌರವಿಸುವುದು ಪ್ರತಿಯೊಬ್ಬ ನಾಗರೀಕನ ಕರ್ತವ್ಯ ಮತ್ತು ಜವಾಬ್ದಾರಿ. ಇದನ್ನು ಉನ್ನತ ಸ್ಥಾನಗಳನ್ನು ಅಲಂಕರಿಸಿರುವವರು ಪಾಲಿಸುವ  ಮೂಲಕ ಮೇಲ್ಪಂಕ್ತಿ ಹಾಕಿಕೊಡಬೇಕು. ಅದನ್ನು ಬಿಟ್ಟು ಅವರೇ ಕಾನೂನು ಉಲ್ಲಂಘನೆ ಮಾಡುವ ಮೂಲಕ ಕೆಟ್ಟ ಸಂಪ್ರದಾಯಕ್ಕೆ ನಾಂದಿ ಹಾಡಿದ್ದಾರೆ ಎಂದು ಆರೋಪಿಸಿದರು.

 ಇದನ್ನೂ ಓದಿ: ಕೋವಿಡ್‌, ಡೆಂಗಿ ಪ್ರಕರಣ ಹೆಚ್ಚಳದ ಬಗ್ಗೆ ಆತಂಕ ಬೇಡ: ಸಚಿವ ಸುಧಾಕರ್‌

ಈ ಹಿಂದೆ ಪ್ರಧಾನಿ ಹುದ್ದೆ ಅಲಂಕರಿಸಿದ್ದವರೇ ವಿಚಾರಣೆಗಳಿಗೆ ಹಾಜರಾಗಿದ್ದ ನಿದರ್ಶನಗಳಿವೆ. ಪ್ರತಿಭಟಿಸಿದ ಕಾಂಗ್ರೆಸ್‌ ನಾಯಕರು ಅದನ್ನು ಮರೆತಂತಿದೆ.  ಯಾವುದೇ ಸಂವಿಧಾನಬದ್ಧ  ಹುದ್ದೆಗಳನ್ನೂ ಅಲಂಕರಿಸದವರೇ ಕಾನೂನು ಗೌರವಿಸುವುದಿಲ್ಲ ಎಂದರೆ ಹೇಗೆ? ಇದು ಕಾಂಗ್ರೆಸ್ಸಿಗರ ಸಂಸ್ಕೃತಿ ಮತ್ತು ಮನೋಭಾವ. ಕಾಂಗ್ರೆಸ್ಸಿಗರಲ್ಲಿ ದೊಡ್ಡವರಿಗೊಂದು ಜನಸಾಮಾನ್ಯರಿಗೆ ಒಂದು ಕಾನೂನು ಮಾಡುವ ಯೋಚನೆ ಹೊಂದಿದ್ದರೂ ಇರಬಹುದು ಎಂದು ಲೇವಡಿ ಮಾಡಿದರು.

Advertisement

ಪ್ರತಿಭಟನೆ ಹೆಸರಿನಲ್ಲಿ ಇಂದು ಕಾಂಗ್ರೆಸ್‌ ಮುಖಂಡರು ನಡೆಸಿರುವ ದಾಂಧಲೆಯಿಂದ ನಗರದಲ್ಲಿ ಸಾರ್ವಜನಿಕರ ಚಟುವಟಿಕೆಗಳಿಗೆ ತೀವ್ರ ತೊಂದರೆಯಾಗಿದೆ. ಫ್ರೀಡಂಪಾರ್ಕಿನ ಬಳಿ ಅನುಮತಿ ಪಡೆದು ಪ್ರತಿಭಟನೆ ನಡೆಸಬೇಕು ಎಂಬ ಕೋರ್ಟ್‌ ನಿರ್ದೇಶನವನ್ನೂ ಉಲ್ಲಂಘಿಸಿದ್ದಾರೆ. ಸರ್ಕಾರ ಇದನ್ನು ಸಹಿಸುವುದಿಲ್ಲ. ಕಾನೂನು ತನ್ನದೇ ಆದ ಕ್ರಮ ಜರುಗಿಸಲಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next