ರಾಯಚೂರು: ಎಷ್ಟು ಜನರು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂಬುದರ ಬಗ್ಗೆ ಪ್ರಧಾನಿ ಕಚೇರಿಯಿಂದ ಶಿಷ್ಟಾಚಾರ ಬಂದಿರುತ್ತದೆ. ಯಾದಗಿರಿ ಹಾಗೂ ಕಲಬುರಗಿಯಲ್ಲಿ ನಡೆಯುತ್ತಿರುವ ಪ್ರಧಾನಿ ಮೋದಿ ಕಾರ್ಯಕ್ರಮಕ್ಕೆ ನನಗೆ ಆಹ್ವಾನ ಬಂದಿಲ್ಲ. ಆ ಕಾರಣದಿಂದ ನಾನು ತೆರಳಿಲ್ಲ ಎಂದು ಸಾರಿಗೆ ಖಾತೆ ಸಚಿವ ಬಿ. ಶ್ರೀರಾಮುಲು ಸ್ಪಷ್ಟಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಳ್ಳಾರಿ ಜಿಲ್ಲೆಯಲ್ಲಿ ಯಾವುದೇ ದಾಳಿಯಾದರೂ ಅದನ್ನು ರಾಮುಲು ಅವರಿಗೆ ಸಂಬಂಧ ಕಲ್ಪಿಸುವುದು ಸರಿಯಲ್ಲ. ಬಳ್ಳಾರಿಯಲ್ಲಿ ಸಾಕಷ್ಟು ಜನರು ಪರಿಚಿತರಿದ್ದಾರೆ. ಆ ಕಾರಣಕ್ಕೆ ನನ್ನನ್ನು ಎಳೆಯುವುದು ಸರಿಯಲ್ಲ. ಆ ದಾಳಿಗೂ ನನಗೂ ಯಾವುದೇ ಸಂಬಂಧವಿಲ್ಲ, ಅದು ವ್ಯಾಪಾರಸ್ಥರ ಮೇಲೆ ನಡೆದ ದಾಳಿಯಾಗಿದ್ದು, ಕಾನೂನು ಪ್ರಕಾರ ಕ್ರಮವಾಗುತ್ತದೆ ಎಂದರು.
ಜನಾರ್ದನ ರೆಡ್ಡಿ ಕಾರ್ಯಕ್ರಮದ ಕುರಿತು ನನ್ನ ಟ್ವಿಟರ್ ಖಾತೆಯಿಂದ ಸಂದೇಶ ಹೋಗಿರುವ ವಿಚಾರವನ್ನು ಈಗಾಗಲೇ ಸಂಬಂ ಧಿಸಿದವರೊಂದಿಗೆ ಚರ್ಚಿಸಲಾಗಿದ್ದು, ಖಾತೆ ಹ್ಯಾಕ್ ಆಗಿರುವುದರ ಬಗ್ಗೆ ತಿಳಿಸಿದ್ದಾರೆ. ಈ ವಿಚಾರವನ್ನು ಪೊಲೀಸರ ಗಮನಕ್ಕೆ ತರಲಾಗಿದೆ. ರಹಸ್ಯವಾಗಿ ಜನಾರ್ದನ ರೆಡ್ಡಿ ಅವರನ್ನು ಭೇಟಿ ಮಾಡುವ ಅಗತ್ಯ ನನಗಿಲ್ಲ. ಭೇಟಿಯಾಗುವುದಾದರೆ ಬಹಿರಂಗವಾಗಿ ಭೇಟಿಯಾಗುವೆ. ರೆಡ್ಡಿ ಪಕ್ಷ ಬಿಜೆಪಿ ಬಿ ಟೀಮ್ ಎನ್ನುವ ಆರೋಪ ಸತ್ಯಕ್ಕೆ ದೂರ ಎಂದರು.