ಯಲ್ಲಾಪುರ: ಜನಾರ್ಧನ ರೆಡ್ಡಿ ಯಾವುದೇ ಕಾರಣಕ್ಕೂ ಬೇರೆ ಪಕ್ಷ ಕಟ್ಟುವುದಿಲ್ಲ. ಪರಮ ಸ್ನೇಹಿತನ ಬಗ್ಗೆ ನನಗೆ ಅರಿವಿದೆ. ನಾನೂ ಕೂಡಾ ಅವರನ್ನು ನಮ್ಮ ಜೊತೆಗೆ ಉಳಿಸಿಕೊಳ್ಳಲು ಪ್ರಯತ್ನಿಸುವೆ. ಇಷ್ಟಾಗಿಯೂ ಬೇರೆ ಪಕ್ಷ ಕಟ್ಟಿದರೂ ನಮ್ಮಿಬ್ಬರ ಸ್ನೇಹದಲ್ಲಿ ಮಾತ್ರ ಯಾವುದೇ ಬದಲಾವಣೆಯಾಗುವುದಿಲ್ಲ. ಸ್ನೇಹವೇ ಬೇರೆ ರಾಜಕಾರಣವೇ ಬೇರೆ ಎಂದು ಸಾರಿಗೆ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವ ಬಿ. ಶ್ರೀರಾಮುಲು ಹೇಳಿದರು.
ಅವರು ಶುಕ್ರವಾರ ಮಾಗೋಡಗೆ ಬುಡಕಟ್ಟುಗಳೊಂದಿಗೆ ಸಂವಾದ ಮತ್ತು ಸರಕು ಸವಲತ್ತು ವಿತರಿಸಲು ಬಂದ ಸಂದರ್ಭದಲ್ಲಿ ಮಾತನಾಡಿದರು.
ಜನಾರ್ಧನ ರೆಡ್ಡಿ ನಮ್ಮ ಭಾಗದಲ್ಲಿ ಬಿಜೆಪಿಯನ್ನು ಕಟ್ಟಿ ಬೆಳೆಸಿದವರು. ಅವರು ಬಿಜೆಪಿಯನ್ನು ಹಾಗೆ ಬಿಡುವುದಿಲ್ಲ ಎಂಬ ವಿಶ್ವಾಸವಿದೆ ಎಂದ ಹೇಳಿದರು.
ಪರಿಶಿಷ್ಟರ ಅಭಿವೃಧ್ದಿಯನ್ನು ಮೂಲವಾಗಿಟ್ಟುಕೊಂಡೇ ಸರಕಾರ ಈ ಪ್ರದೇಶಕ್ಕೆ ಬಂದಿದೆ. ಅವರು ಶಿಕ್ಷಣ ವಂಚಿತರಾಗಿದ್ದು, ಅವರನ್ನು ಮುಖ್ಯವಾಹಿನಿಗೆ ತರುವ ಪ್ರಯತ್ನವಾಗಬೇಕಿದೆ. ಬುಡಕಟ್ಟುಗಳ ಸಮಸ್ಯೆಯನ್ನು ಈ ಗ್ರಾಮ ವಾಸ್ತವ್ಯದ ಮೂಲಕ ಅರಿತಿದ್ದೇನೆ. ಬುಡಕಟ್ಟುಗಳಿಗೆ ಅನುಕೂಲ ಕಲ್ಪಿಸುವ ದೃಷ್ಠಿಯಿಂದ ಈ ಪ್ರದೇಶದಲ್ಲಿ ವಸತಿ ಶಾಲೆಯೊಂದನ್ನು ತೆರೆಯಲಾಗುವುದು ಎಂದು ಹೇಳಿದ ಅವರು ಸಿದ್ದಿಗಳ ಮಕ್ಕಳು ಅಪೌಷ್ಠಿಕತೆಯಿಂದ ಬಳಲುತ್ತಾರೆನ್ನುವ ದೂರುಗಳು ಬಂದಿವೆ. ಹೆಚ್ಚಿನ ಮತ್ತು ವಿಶೇಷ ಸವಲತ್ತುಗಳನ್ನು ಅವರಿಗಾಗಿಯೇ ನೀಡುವುದಕ್ಕೆ ಸರಕಾರ ಬದ್ದವಾಗಿದೆ ಎಂದರು.