Advertisement

ಸಹಕಾರಿ ಕ್ಷೇತ್ರ ಸ್ವತಂತ್ರ ಕಾರ್ಯನಿರ್ವಹಣೆಗೆ ಸರಕಾರದಿಂದ ಒತ್ತು: ಶಿವರಾಮ ಹೆಬ್ಬಾರ್

07:42 PM May 15, 2022 | Team Udayavani |

ಭಟ್ಕಳ: ಸಹಕಾರಿ ರಂಗದಲ್ಲಿ ಯಾವತ್ತೂ ರಾಜಕೀಯ ಪ್ರವೇಶ ಮಾಡಬಾರದು, ರಾಜಕೀಯ ಚುನಾವಣೆಗಷ್ಟೇ ಸೀಮಿತವಾಗಿರಬೇಕು ರಾಜ್ಯ ಸರಕಾರದ ಕಾರ್ಮಿಕ ಸಚಿವರು, ಕೆ.ಡಿ.ಸಿ.ಸಿ. ಬ್ಯಾಂಕ್‍ನ ಅಧ್ಯಕ್ಷರೂ ಆದ ಶಿವರಾಮ ಹೆಬ್ಬಾರ್ ಹೇಳಿದರು.

Advertisement

ಅವರು ಇಲ್ಲಿನ ಬೆಳಕೆಯಲ್ಲಿ ಬೆಳಕೆ ಗ್ರಾಮೀಣ ವ್ಯವಸಾಯ ಸಹಕಾರಿ ಸಂಘದ ಕಚೇರಿಯ ನೂತನ ಕಟ್ಟಡದ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.

ಸರಕಾರಿ ಕ್ಷೇತ್ರದಲ್ಲಿ ರಾಜಕೀಯ ಹಸ್ತಕ್ಷೇಪ ಕಡಿಮೆ ಇರಬೇಕು ಎನ್ನುವ ಉದ್ದೇಶದಿಂದಲೇ ಸರಕಾರ ವೈದ್ಯನಾಥ ವರದಿಯ ನಂತರ ಸಹಕಾರಿ ಕ್ಷೇತ್ರ ಸ್ವತಂತ್ರ ಕಾರ್ಯನಿರ್ವಹಣೆಗೆ ಸರಕಾರ ಹೆಚ್ಚಿನ ಒತ್ತು ನೀಡಿದ್ದು ಇಂದು ಸಹಕಾರಿ ಕ್ಷೇತ್ರದಲ್ಲಿ ಉತ್ತಮ ಬದಲಾವಣೆಗಳಾಗಿವೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಸಹಕಾರಿ ಕ್ಷೇತ್ರ ಉತ್ತಮವಾಗಿ ಬೆಳೆದಿದ್ದು ಕೆ.ಡಿ.ಸಿ.ಸಿ. ಬ್ಯಾಂಕಿಗೆ 102 ವರ್ಷಗಳ ಇತಿಹಾಸ ಇದ್ದು ಜಿಲ್ಲೆಯ ಅನೇಕ ಧುರೀಣರು ಈ ಬ್ಯಾಂಕನ್ನು ಮುನ್ನಡೆಸಿದ್ದಾರೆ ಎಂದ ಅವರು ಜಿಲ್ಲೆಯ ಸಹಕಾರಿಗಳ ಸಹಕಾರವೂ ಕೂಡಾ ಕೆ.ಡಿ.ಸಿ.ಸಿ. ಬ್ಯಾಂಕಿನ ಬೆಳವಣಿಗೆಯಲ್ಲಿ ಮುಖ್ಯ ಪಾತ್ರ ವಹಿಸಿದೆ ಎಂದು ಹೇಳಿದರು.

ಸಹಕಾರಿ ಕ್ಷೇತ್ರ ಉತ್ತಮವಾಗಿ ಬೆಳವಣಿಗೆಯನ್ನು ಹೊಂದುವುದಕ್ಕೆ ಬೆಳಕೆ ವ್ಯವಸಾಯ ಸೇವಾ ಸಹಕಾರಿ ಸಂಘವು ಒಂದು ಉತ್ತಮ ಉದಾಹರಣೆಯಾಗಿದ್ದು ಇದರ ಹಿಂದೆ ಇರುವ ಅನೇಕ ಶಕ್ತಿಗಳನ್ನು ಸ್ಮರಿಸಿದರಲ್ಲದೇ ಮಾಜಿ ಅಧ್ಯಕ್ಷರುಗಳು, ನಿರ್ದೇಶಕರುಗಳು, ಶೇರುದಾರರನ್ನು ಅಭಿನಂದಿಸಿದರು.

ಸಂಘದ ನೂತನ ಕಟ್ಟಡವನ್ನು ಉದ್ಘಾಟಿಸಿ ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಉಜಿರೆಯ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರು ಪ್ರತಿಯೋರ್ವರೂ ಕೂಡಾ ಧರ್ಮವನ್ನು ಪಾಲಿಸಿದರೆ, ಅಲ್ಲಿ ಸುಖ, ಸಂತೋಷ, ಅಭಿವೃದ್ಧಿಯಿರುತ್ತದೆ. ಇದು ಒಂದು ಹಣಕಾಸು ಸಂಸ್ಥೆಯಾಗಿದ್ದು ಇಲ್ಲಿ ಹಣಕಾಸು ಧರ್ಮ ಪಾಲನೆ ಮುಖ್ಯವಾಗಿದೆ ಎಂದರು.

Advertisement

ಹಿಂದೆ ಖಾಸಗೀ ಬ್ಯಾಂಕುಗಳು ಉಳ್ಳವರ ಪಾಲಾಗಿದ್ದುದರಿಂದ ಕೇಂದ್ರ ಸರಕಾರ ಬ್ಯಾಂಕುಗಳನ್ನು ರಾಷ್ಟ್ರೀಕರಣಗೊಳಿಸಿ ಎಲ್ಲರ ಬ್ಯಾಂಕಾಗಿಸಿತು. ನಂತರದ ದಿನಗಳಲ್ಲಿ ಅತ್ಯಂತ ವೇಗವಾಗಿ ಬೆಳವಣಿಗೆ ಹೊಂದಿದ  ಸಹಕಾರಿ ಕ್ಷೇತ್ರದಿಂದಾಗಿ  ಜನ ಸಾಮಾನ್ಯರು ತಮ್ಮ ತುರ್ತು ಅವಶ್ಯಕತೆಗೆ ಸಹಕಾರಿ ಬ್ಯಾಂಕುಗಳನ್ನು ನಂಬುವಂತಾಗಿದೆ. ಜನಸಾಮಾನ್ಯರಿಗೆ ತುರ್ತು ಅವಶ್ಯಕತೆಗೆ ಸ್ಪಂಧಿಸುವ ಸಹಕಾರಿ ಸಂಘಗಳು ಎಲ್ಲಾ ರೀತಿಯ ಸೇವೆಯನ್ನು ನೀಡುವ ಮೂಲಕ ಜನರನ್ನು ತಲುಪಲು ಯಶಸ್ವೀಯಾಗಿವೆ. ಸಹಕಾರಿ ಸಂಸ್ಥೆಗಳು ಜನತೆಗೆ ಅಗತ್ಯತೆ ಇದ್ದಾಗ ತುರ್ತು ಸಹಾಯ ಮಾಡಬೇಕು, ಅಲ್ಲಿ ಯಾವುದೇ ಪಕ್ಷ, ಪಂಗಡಗಳನ್ನು ನೋಡದೇ ಅವರವರ ಅಗತ್ಯತೆಗಳನ್ನು ಗಮನಿಸಬೇಕು. ಪ್ರತಿಯೋರ್ವರೂ ಕೂಡಾ ತಮ್ಮ ಸಂಘಕ್ಕೆ ಬರುವ ಗ್ರಾಹಕರ ಗೌರವನ್ನು ಅವರ ಮನಸ್ಥಿತಿಯನ್ನು ಗೌರವದಿಂದ ಕಂಡಾ ಮಾತ್ರ ಸಂಸ್ಥೆ ಇನ್ನಷ್ಟು ಬೆಳೆಯುತ್ತದೆ ಎನ್ನುವುದಕ್ಕೆ ಈ ಸಂಸ್ಥೇ ಬೆಳೆದಿರುವುದೇ ಉದಾಹರಣೆಯಾಗಿದೆ ಎಂದ ಅವರು ಸಂಘ ತನ್ನ ಲಾಭದ ಒಂದು ಅಂಶವನ್ನು ರೈತರಿಗೆ, ಬಡವರಿ ಒಳಿತಿಗಾಗಿ ಬಳಸಬೇಕು ಎಂದು ಸ್ವಾಮೀಜಿಯವರು ಕರೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೆಳಕೆ ಗ್ರಾಮೀಣ ವ್ಯವಸಾಯ ಸಹಕಾರಿ ಸಂಘದ ಅಧ್ಯಕ್ಷ ಮಂಜುನಾಥ ಎಲ್. ನಾಯ್ಕ ವಹಿಸಿದ್ದರು.

ವೇದಿಕೆಯಲ್ಲಿ ಶಾಸಕ ಸುನೀಲ ನಾಯ್ಕ, ಮಾಜಿ ಶಾಸಕ ಮಂಕಾಳ ವೈದ್ಯ, ಕೆ.ಡಿ.ಸಿ.ಸಿ. ಬ್ಯಾಂಕ್ ಉಪಾಧ್ಯಕ್ಷ ಮೋಹನದಾಸ ನಾಯ್ಕ, ಬೆಳಕೆ ಗ್ರಾ.ಪಂ ಅಧ್ಯಕ್ಷೆ ಶಾಂತಿ ಮೊಗೇರ, ಕುಮಟಾ ಸಹಕಾರ ಸಂಘಗಳ ಸಹಾಯಕ ನಿಬಂಧಕ ನಾಗಭೂಷಣ ಕಲ್ಮನೆ, ಉಪಾಧ್ಯಕ್ಷ ನಾರಾಯಣ ಜೆ. ನಾಯ್ಕ, ನಿರ್ದೇಶಕರಾದ ವಾಸು ನಾಯ್ಕ, ಕೃಷ್ಣ ಮೊಗೇರ, ಪಾಂಡುರಂಗ ನಾಯ್ಕ,  ದೇವಯ್ಯ ನಾಯ್ಕ, ದೇವಾನಂದ ಮೊಗೇರ, ರಮೇಶ ಗೊಂಡ, ಮಹಾದೇವ ನಾಯ್ಕ, ನಾಗೇಶ ನಾಯ್ಕ, ವೆಂಕಟೇಶ ನಾಯ್ಕ, ಲಲಿತಾ ನಾಯ್ಕ, ಜ್ಯೋತಿ ನಾಯ್ಕ ಮುಂತಾದವರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಈ ಹಿಂದೆ ಸುಧೀರ್ಘ ಸೇವೆ ಸಲ್ಲಿಸಿದ್ದ ದಿ. ಎಂ.ಎಸ್.ನಾಯ್ಕ ಬೆಳಕೆ ಅವರ ಹೆಸರಿನ ಸಭಾ ಭವನವನ್ನು ಸಹ ಉದ್ಘಾಟಿಸಲಾಯಿತು.  ಮಾಜಿ ಅಧ್ಯಕ್ಷರುಗಳು, ನಿರ್ದೇಶಕರುಗಳು ಹಾಗೂ ಹಾಲಿ ಅಧ್ಯಕ್ಷ ಮಂಜುನಾಥ ನಾಯ್ಕ, ಮುಖ್ಯ ಕಾರ್ಯನಿರ್ವಾಹಕ ಅಣ್ಣಪ್ಪ ನಾಯ್ಕ ಅವರನ್ನು ಸಹ ಸನ್ಮಾನಿಸಲಾಯಿತು.

ಸಂಘದ ಅಧ್ಯಕ್ಷ ಮಂಜುನಾಥ ಲಚ್ಮಯ್ಯ ನಾಯ್ಕ ಸ್ವಾಗತಿಸಿದರು. ಮುಖ್ಯ ಕಾರ್ಯನಿರ್ವಾಹಕ ಅಣ್ಣಪ್ಪ ನಾಯ್ಕ ಸಂಘದ ವರದಿ ವಾಚಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next