ಧಾರವಾಡ: ಮಳೆಗಾಲದಲ್ಲಿ ತುಪ್ಪರಿ ಹಳ್ಳದ ನೀರನ್ನು ಸದ್ಬಳಕೆ ಮಾಡಿಕೊಳ್ಳಲು ಪ್ರವಾಹ ನಿಯಂತ್ರಣ ಯೋಜನೆ ರೂಪಿಸಿ ಧಾರವಾಡ ಹಾಗೂ ನವಲಗುಂದ ತಾಲೂಕಿನ 10 ಸಾವಿರ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಲು ವಿಸ್ತೃತ ಯೋಜನಾ ವರದಿಗೆ ಕರ್ನಾಟಕ ನೀರಾವರಿ ನಿಗಮದ ಆಡಳಿತ ಮಂಡಳಿ ಅನುಮೋದನೆ ದೊರೆತಿದೆ. 312 ಕೋಟಿ ರೂ. ಮಂಜೂರಾತಿಗೆ ಆರ್ಥಿಕ ಇಲಾಖೆಗೆ ಕಳಿಸಲಾಗಿದ್ದು, ಆಡಳಿತಾತ್ಮಕ ಒಪ್ಪಿಗೆ ಪಡೆದು ತ್ವರಿತವಾಗಿ ಕಾಮಗಾರಿ ಪ್ರಾರಂಭಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಹೇಳಿದರು.
ಸ್ವಾತಂತ್ರ್ಯೋತ್ಸವ ಭಾಷಣ ಮಾಡಿದ ಅವರು, ಜಿಲ್ಲೆಗೆ ಜಲಜೀವನ ಮಿಷನ್ ಅಡಿ ಮನೆ ಮನೆಗೆ ಗಂಗೆ ಯೋಜನೆಯಡಿ 355 ಕಾಮಗಾರಿಗಳಿಗೆ 363 ಕೋಟಿ ರೂ. ಅನುದಾನ ಹಂಚಿಕೆ ಮಾಡಲಾಗಿದೆ. ಇದಲ್ಲದೇ ಕಲಘಟಗಿ ಪಟ್ಟಣ ಸೇರಿದಂತೆ ಜಿಲ್ಲೆಯ ಎಲ್ಲಾ 388 ಗ್ರಾಮೀಣ ಜನವಸತಿ ಪ್ರದೇಶಗಳು ಹಾಗೂ ಮಾರ್ಗಮಧ್ಯದ ಸವದತ್ತಿ ತಾಲೂಕಿನ 8 ಗ್ರಾಮಗಳಿಗೆ ಮಲಪ್ರಭಾ ನದಿ ಮೂಲದಿಂದ ನೀರು ಒದಗಿಸಲು ರೂಪಿಸಿರುವ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಸರ್ಕಾರದಿಂದ 1032 ಕೋಟಿ ರೂ. ಮಂಜೂರಾಗಿದ್ದು, ಕಾಮಗಾರಿಯ ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ ಎಂದರು.
ಹು-ಧಾ ಮಹಾನಗರ ಪಾಲಿಕೆಯ ಎಲ್ಲಾ ವಾರ್ಡ್‌ಗಳಿಗೆ 24×7 ನಿರಂತರ ನೀರು ಸರಬರಾಜು ಯೋಜನೆಯನ್ನು 1,207 ಕೋಟಿ ರೂ. ವೆಚ್ಚದಲ್ಲಿ ಡಿಬಿಓಟಿ ಮಾದರಿಯಲ್ಲಿ ಅನುಷ್ಠಾನಗೊಳಿಸಲು ಎಲ್‌ಟಿ ಲಿಮಿಟೆಡ್ ಸಂಸ್ಥೆಗೆ ಕಾಮಗಾರಿ ಗುತ್ತಿಗೆ ವಹಿಸಿಕೊಡಲಾಗಿದೆ. ಅವಳಿ ನಗರದ 26 ವಾರ್ಡ್‌ಗಳಿಗೆ ಈಗಾಗಲೇ 24×7 ನಿರಂತರ ನೀರು ಪೂರೈಕೆ ವ್ಯವಸ್ಥೆ ಇದೆ. ಈ ಯೋಜನೆ ಅನುಷ್ಠಾನಕ್ಕಾಗಿ ಧಾರವಾಡ ಸಮೀಪದ ಅಮ್ಮಿನಬಾವಿಯಲ್ಲಿ ಈಗಾಗಲೇ 40 ಎಂಎಲ್‌ಡಿ ಸಾಮರ್ಥ್ಯದ ಜಲಶುದ್ಧೀಕರಣ ಘಟಕ ನಿರ್ಮಾಣವಾಗಿದೆ. ಇದಲ್ಲದೇ 43 ಎಂಎಲ್‌ಡಿ ಸಾಮರ್ಥ್ಯದ ಇನ್ನೊಂದು ಘಟಕದ ಕಾಮಗಾರಿ ನಡೆಯುತ್ತಿದೆ ಎಂದು ಹೇಳಿದರು.
ಮುಖ್ಯಮಂತ್ರಿ ಗ್ರಾಮ ವಿಕಾಸ ಯೋಜನೆಯಡಿ ಜಿಲ್ಲೆಯ ಗ್ರಾಮೀಣ ವಿಧಾನಸಭಾ ಮತ ಕ್ಷೇತ್ರಗಳ ವ್ಯಾಪ್ತಿಯ 23 ಗ್ರಾಮಗಳನ್ನು ಆಯ್ದುಕೊಂಡು ಪ್ರತಿಯೊಂದು ಗ್ರಾಮದ ಅಭಿವೃದ್ಧಿಗೆ ತಲಾ 1 ಕೋಟಿ ರೂ. ಅನುದಾನ ಮೀಸಲಿಡಲಾಗಿದೆ. ಈಗಾಗಲೇ 12 ಕೋಟಿ ರೂ.ಬಿಡುಗಡೆಯಾಗಿದ್ದು ರಸ್ತೆ ನಿರ್ಮಾಣ, ಸೌರ ವಿದ್ಯುತ್ ದೀಪ ಅಳವಡಿಸಲಾಗಿದೆ ಎಂದರು.