ಬೆಂಗಳೂರು: ಸಾರಿಗೆ ವ್ಯವಸ್ಥೆ ಸೌಲಭ್ಯವಿಲ್ಲದೇ ರಾಜ್ಯದಲ್ಲಿ ಯಾವುದೇ ಒಬ್ಬ ವಿದ್ಯಾರ್ಥಿಯೂ ಎಸ್‍ಎಸ್‍ಎಲ್‍ಸಿ ಪರೀಕ್ಷೆಗೆ ಗೈರುಹಾಜರಾಗದಂತೆ ಗಮನ ಹರಿಸಬೇಕೆಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಜಿಲ್ಲಾಡಳಿತಗಳಿಗೆ ಸೂಚನೆ ನೀಡಿದ್ದಾರೆ.
ಜೂ.25ರಿಂದ ಆರಂಭವಾಗಲಿರುವ ಎಸ್‍ಎಸ್‍ಎಲ್‍ಸಿ ಪರೀಕ್ಷೆಯ ಹಿನ್ನೆಲೆಯಲ್ಲಿ ಸೋಮವಾರ ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳು, ಜಿಪಂ ಸಿಇಒಗಳು, ಪೊಲೀಸ್ ವರಿಷ್ಠಾಧಿಕಾರಿಗಳು, ಜಿಲ್ಲಾಆರೋಗ್ಯಾಧಿಕಾರಿಗಳು, ಡಿಡಿಪಿಐಗಳೊಂದಿಗೆ ವಿಡಿಯೋ ಸಂವಾದದಲ್ಲಿ ಪರೀಕ್ಷೆಗೆ ಕೈಗೊಂಡ ಸಿದ್ಧತೆಗಳನ್ನು ಪರಿಶೀಲಿಸಿ, ಮಳೆಗಾಲವಾದ್ದರಿಂದ ಯಾವುದೇ ಒಂದೇ ಒಂದು ಮಗುವಿಗೂ ಪರೀಕ್ಷಾ ಕೇಂದ್ರಕ್ಕೆ ಬಂದು ಹೋಗಲು ಯಾವುದೇ ತೊಂದರೆಯಾಗದಂತೆ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದರು.
ಮಳೆಗಾಲದಲ್ಲಿ ಕರಾವಳಿ, ಮಲೆನಾಡು, ಮುಂಬೈ ಕರ್ನಾಟಕ ಪ್ರದೇಶದ ದೂರದ ಸಂಪರ್ಕರಹಿತ ಪ್ರದೇಶಗಳು, ನೆರೆ ರಾಜ್ಯದ ಗಡಿಭಾಗದ ವಿದ್ಯಾರ್ಥಿಗಳು ಹಾಗೆಯೇ ಮಳೆಯಿಂದ ರಸ್ತೆ ಸಂಪರ್ಕ ಕಡಿತಗೊಳ್ಳುವ ಸಾಧ್ಯತೆಯಿರುವ ಪ್ರದೇಶದ ಜನವಸತಿ ಪ್ರದೇಶದ ಮಕ್ಕಳಿಗೆ ಯಾವುದೇ ತೊಂದರೆಯಾಗದಂತೆ ಎಲ್ಲ ಕ್ರಮಗಳನ್ನೂ ಮತ್ತೊಮ್ಮೆ ಖಾತರಿ ಪಡಿಸಿಕೊಳ್ಳಬೇಕೆಂದರು. ಕೆಲ ಮಕ್ಕಳು ದೋಣಿ, ಬೋಟ್‍ಗಳು ಮತ್ತು ಲಾಂಚ್‍ಗಳನ್ನು ಅವಲಂಬಿಸಿದ್ದಾರೆ. ಅವರು ಪರೀಕ್ಷಾ ಸಮಯಕ್ಕೆ ಸರಿಯಾಗಿ ಬಂದು ಹೋಗಲು ಯಾವುದೇ ತೊಂದರೆಯಾಗದಂತೆ ಅವರಿಗೆ ಎಲ್ಲ ರೀತಿಯ ವ್ಯವಸ್ಥೆ ಕೈಗೊಳ್ಳಬೇಕಾಗಿದ್ದು, ಜಿಲ್ಲಾಡಳಿತಗಳು ಈಗಾಗಲೇ ಮಾಡಿರುವ ವ್ಯವಸ್ಥೆಯನ್ನು ಪುನಃ ಖಾತರಿಪಡಿಸಿಕೊಳ್ಳಬೇಕು. ಕಟ್ಟಕಡೆಯ ಮಗುವೂ ಸಹ ಪರೀಕ್ಷೆಯಿಂದ ವಂಚಿತವಾಗದಂತೆ ಪ್ರತಿಯೊಬ್ಬರೂ ವಿಶೇಷ ಕಾಳಜಿ ವಹಿಸಬೇಕು ಎಂದು ಸಚಿವರು ತಿಳಿಸಿದರು.
ತುಮಕೂರು, ಚಿತ್ರದುರ್ಗ, ಬಳ್ಳಾರಿ, ರಾಯಚೂರು, ಯಾದಗಿರಿ ಜಿಲ್ಲೆಗಳಿಗೆ ಆಂಧ್ರಪ್ರದೇಶ, ತೆಲಂಗಾಣ ರಾಜ್ಯಗಳಿಂದ ಚಾಮರಾಜನಗರ, ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಯ ಕೆಲ ಕೇಂದ್ರಗಳಿಗೆ ತಮಿಳುನಾಡು ಮತ್ತು ಕೇರಳ ರಾಜ್ಯಗಳಿಂದ ಹಾಗೆಯೇ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ಮತ್ತು ಕಾಗವಾಡ ತಾಲೂಕುಗಳು ಪರೀಕ್ಷಾ ಕೇಂದ್ರಗಳಿಗೆ ಮಹಾರಾಷ್ಟ್ರದಿಂದ ಬರುವ ಮಕ್ಕಳಿಗೆ ತೊಂದರೆಯಾಗದಂತೆ ನೆರೆ ರಾಜ್ಯದ ಜಿಲ್ಲಾಡಳಿತಗೊಂದಿಗೆ ವ್ಯವಹರಿಸಿ ಗಡಿಭಾಗದವರೆಗೆ ಅವರಿಗೆ ಬರಲು ವ್ಯವಸ್ಥೆ ಮಾಡಿ ನಮ್ಮ ಗಡಿಭಾಗದಿಂದ ಅವರಿಗೆ ಸುರಕ್ಷಿತ ವಾತಾವರಣದಲ್ಲಿ ನಮ್ಮ ಪರೀಕ್ಷಾ ಕೇಂದ್ರಗಳಿಗೆ ಕರೆತಂದು ಸಂಜೆ ವಾಪಾಸು ಕಳಿಸಲು ಅಗತ್ಯ ವ್ಯವಸ್ಥೆ ಮಾಡುವುದು. ಹಾಗೆಯೇ ಹೊರರಾಜ್ಯಗಳಿಂದ ಬಂದು ಹೋಗಲು ತೊಂದರೆಯಾಗುವ ವಿದ್ಯಾರ್ಥಿಗಳಿಗೆ ಅಗತ್ಯಬಿದ್ದರೆ ಆಯಾ ತಾಲೂಕಿನ ಹಾಸ್ಟೆಲ್‍ಗಳಲ್ಲಿ ಊಟ ವಸತಿಗೆ ಕ್ರಮ ವಹಿಸಬೇಕು. ಆ ಹಾಸ್ಟೆಲ್‍ನಿಂದ ಪರೀಕ್ಷಾ ಕೇಂದ್ರಕ್ಕೆ ಸಮಯಕ್ಕೆ ಸರಿಯಾಗಿ ಬಸ್ ಇಲ್ಲವೇ ಜೀಪ್ ವ್ಯವಸ್ಥೆ ಮಾಡಬೇಕೆಂದು ಸುರೇಶ್ ಕುಮಾರ್ ತಿಳಿಸಿದರು.
ಪ್ರತ್ಯೇಕ ಕೊಠಡಿ ಪರೀಕ್ಷೆ: ಹೊರ ರಾಜ್ಯಗಳಿಂದ ಬರುವ ಪರೀಕ್ಷಾರ್ಥಿಗಳಿಗೆ ಪ್ರತ್ಯೇಕ ಕೊಠಡಿಗಳಲ್ಲಿ ಪರೀಕ್ಷೆಗೆ ಅವಕಾಶ ಕಲ್ಪಿಸಬೇಕು. ಕಂಟೈನ್‍ಮೆಂಟ್ ಪ್ರದೇಶದಿಂದ ಬರುವ ಮಕ್ಕಳು ಮತ್ತು ಶೀತ, ನೆಗಡಿ, ಜ್ವರದಂತಹ ಲಕ್ಷಣವಿರುವ ಮಕ್ಕಳನ್ನು ಸಹ ಪ್ರತ್ಯೇಕ ಕೊಠಡಿಗಳಲ್ಲಿ ಪರೀಕ್ಷೆಗೆ ಅವಕಾಶ ಕಲ್ಪಿಸಬೇಕೆಂದು ಸುರೇಶ್ ಕುಮಾರ್ ತಿಳಿಸಿದರು.
ಕೇರಳದ ಕಾಸರಗೋಡು ಜಿಲ್ಲೆಯಿಂದ ಪ್ರತಿದಿನ 367 ವಿದ್ಯಾರ್ಥಿಗಳು ಕೇವಲ 5 ಕಿ.ಮೀ. ಅಂತರದ ಪರೀಕ್ಷಾ ಕೇಂದ್ರಗಳಿಗೆ ಬಂದು ಹೋಗುವುದರಿಂದ ಅವರಿಗೆ ಗಡಿಯಿಂದ ಪರೀಕ್ಷಾ ಕೇಂದ್ರಕ್ಕೆ ವಿಶೇಷ ಬಸ್ ವ್ಯವಸ್ಥೆ ಮಾಡಲಾಗಿದೆ. ಮಾರ್ಗದ ಬಸ್‍ಗಳನ್ನು ಹೊರತು ಪಡಿಸಿ ವಿಶೇಷವಾಗಿ ತೆಗೆದುಕೊಂಡ ಎಲ್ಲ ಬಸ್‍ಗಳಿಗೆ ಸಾರಿಗೆ ಇಲಾಖೆ ನಿಗಿದಿಪಡಿಸಿದ ದರದಲ್ಲಿ ಹಣ ಮತ್ತು ಖಾಸಗಿ ಸಂಸ್ಥೆಗಳ ನೀಡಿದ ಬಸ್‍ಗಳಿಗೆ ಇಂಧನ ವೆಚ್ಚ ನೀಡಲು ಸಚಿವರು ಇನ್ನೆರಡು ದಿನದೊಳಗೆ ಹಣ ಪಾವತಿ ಮಾಡಲು ಸಚಿವರು ಅಧಿಕಾರಿಗಳಿಗೆ ಆದೇಶ ನೀಡಿದರು.
ವಿಡಿಯೋ ಕಾನ್ಫರೆನ್ಸ್ ನಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಸ್. ಆರ್. ಉಮಾಶಂಕರ್, ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಡಾ. ಕೆ.ಜಿ. ಜಗದೀಶ್ ಸೇರಿದಂತೆ ಇಲಾಖೆಯ ಹಿರಿಯ ಅಧಿಕಾರಿಗಳು ಹಾಜರಿದ್ದರು.