Advertisement

ಡಿಕೆಶಿ ಶೋ ಬಿಟ್ಟು ಕೆಲಸ ಮಾಡಲಿ

06:00 AM Oct 22, 2018 | |

ಕೂಡ್ಲಿಗಿ: ಜಾರಕಿಹೊಳಿ ಬ್ರದರ್ಸ್‌ ಹಾಗೂ ಸಚಿವ ಡಿ.ಕೆ. ಶಿವಕುಮಾರ್‌ ನಡುವಿನ ಮುನಿಸು ಮುಗಿದ ಅಧ್ಯಾಯ ಎಂದುಕೊಳ್ಳುತ್ತಿರುವ ಬೆನ್ನಲ್ಲೇ ಸಚಿವ ರಮೇಶ್‌ ಜಾರಕಿಹೊಳಿ ಮತ್ತೆ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.

Advertisement

ಬಳ್ಳಾರಿ ಜಿಲ್ಲೆ ಕೂಡ್ಲಿಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರಮೇಶ್‌ ಜಾರಕಿಹೊಳಿ “”ಜಲಸಂಪನ್ಮೂಲ ಮತ್ತು ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ. ಶಿವಕುಮಾರ್‌ ಅವರು ಶೋ ಮಾಡುವುದನ್ನು ಬಿಟ್ಟು, ಮಾಡಬೇಕಾದ ಕೆಲಸ ಮಾಡಲಿ” ಎಂದಿದ್ದಾರೆ.

ಬಳ್ಳಾರಿ ಉಪಚುನಾವಣೆಯಲ್ಲಿ ಶಾಸಕ ನಾಗೇಂದ್ರ ಸಹೋದರ ವೆಂಕಟೇಶ್‌ ಪ್ರಸಾದ್‌ಗೆ ಪಕ್ಷದ ಟಿಕೆಟ್‌ ನೀಡುವಂತೆ ಒತ್ತಾಯಿಸಲಾಗಿತ್ತು. ಆದರೆ, ಟಿಕೆಟ್‌ ಕೈತಪ್ಪಲು ಸಿಎಂ ಕುಮಾರಸ್ವಾಮಿ ಕಾರಣರಲ್ಲ. ಯಾರ ಕುತಂತ್ರದಿಂದ ಕೈ ತಪ್ಪಿತೋ ಗೊತ್ತಿಲ್ಲ. ಆದರೂ ಸಹ ಪಕ್ಷ ನನಗೆ ಸೂಚಿಸಿದ ಜವಾಬ್ದಾರಿ ನಿಭಾಯಿಸುವೆ. ಹೀಗೆಯೇ ಡಿ.ಕೆ. ಶಿವಕುಮಾರ್‌ ಸಹ ಶೋ ಮಾಡೋದನ್ನು ಬಿಟ್ಟು ಅವರಿಗೆ ವಹಿಸಿದ ಕೆಲಸ ಮಾಡಲಿ ಎಂದರು.

ಈಗ ಹೇಳಿಕೆ ನೀಡಿದ್ದು ಸರಿಯಲ್ಲ: ವೀರಶೈವ-ಲಿಂಗಾಯತ ಪ್ರತ್ಯೇಕ ಧರ್ಮದ ಬಗ್ಗೆ ಕ್ಯಾಬಿನೆಟ್‌ ಚರ್ಚೆ ವೇಳೆ ಆಕ್ಷೇಪಿಸದ ಡಿ.ಕೆ.ಶಿವಕುಮಾರ್‌, ಇದೀಗ ಬಹಿರಂಗವಾಗಿ ಹೇಳಿಕೆ ನೀಡಿದ್ದು ಸಮಂಜಸವಲ್ಲ. ಮಾಜಿ ಸಿಎಂ ಸಿದ್ದರಾಮಯ್ಯರ ಮೇಲೆ ಗೂಬೆ ಕೂರಿಸಲು ಈ ರೀತಿ ಹೇಳಿಕೆ ನೀಡುತ್ತಿದ್ದಾರೆ ಎಂದರು.

ಲಿಂಗಾಯತ ಸ್ವತಂತ್ರ ಧರ್ಮದ ವಿಚಾರಕ್ಕೆ ಸಂಬಂಧಿಸಿ ಮಾತನಾಡಿ ನಂತರ ಕ್ಷಮೆಯಾಚಿಸಿದ್ದು ಅವರ ವೈಯಕ್ತಿಕ. ಆದರೂ, ಈ ವಿಷಯಕ್ಕೆ ಸಂಬಂಧಿಸಿದಂತೆ ಯಾವುದೇ ಆಕ್ಷೇಪಗಳಿದ್ದಲ್ಲಿ ಕ್ಯಾಬಿನೆಟ್‌ನಲ್ಲಿ ಚರ್ಚೆ ನಡೆಯುತ್ತಿದ್ದಾಗ ಹೇಳಬಹುದಿತ್ತು. ಅವರ ಹಿಂಬಾಲಕರಾದ ಲಕ್ಷ್ಮೀ ಹೆಬ್ಟಾಳ್ಕರ್‌ ಅವರು ಸಹ ಪ್ರತ್ಯೇಕ ಧರ್ಮದ ಬಗ್ಗೆ ಮಾತನಾಡುವಾಗ ಡಿ.ಕೆ. ಶಿವಕುಮಾರ್‌ ಎಲ್ಲಿಗೆ
ಹೋಗಿದ್ದರು? ಪ್ರತಿ ಸಭೆಯಲ್ಲೂ ಧರ್ಮದ ವಿಚಾರವಾಗಿ ಮಾತನಾಡುವಾಗ ಹೆಬ್ಟಾಳ್ಕರ್‌ ತಡೆ ಯಲು ಏಕೆ ಪ್ರಯತ್ನಿಸಲಿಲ್ಲ ಎಂದು ಪ್ರಶ್ನಿಸಿದರು.ಮಾಜಿ ಸಚಿವ ಎಂ.ಬಿ. ಪಾಟೀಲ್‌ ಡಿಕೆಶಿ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿದ್ದು ಅವರಿಗೆ ನಮ್ಮಸಂಪೂರ್ಣ ಬೆಂಬಲವಿದೆ ಎಂದರು.

Advertisement

ಪಕ್ಷದ ಸಭೆಯ ಮಾಹಿತಿ ಇಲ್ಲ: ನನಗೆ ಕೂಡ್ಲಿಗಿ ವಿಧಾನಸಭಾ ಕ್ಷೇತ್ರದ ಉಸ್ತುವಾರಿ ನೀಡಿದ್ದಾರೆ. ಆ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತೇನೆ ಎಂದ ಅವರು ಹೊಸಪೇಟೆಯಲ್ಲಿ ಭಾನುವಾರ ಸಂಜೆ ನಡೆದ ಕಾಂಗ್ರೆಸ್‌ ಸಭೆಯ ಬಗ್ಗೆ ನನಗೆ ಮಾಹಿತಿ ಇಲ್ಲ. ಹಾಗಾಗಿ ಆ ಸಭೆಗೆ ನಾನು ಹೋಗಿಲ್ಲ. ಪಕ್ಷದ ಹೈಕಮಾಂಡ್‌ ನೀಡಿದ ಕೆಲಸವನ್ನು ನಿಭಾಯಿಸುತ್ತೇನೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next