ದಾಂಡೇಲಿ : ಕೋವಿಡ್ ಮೂರನೇ ಅಲೆಯ ಹಿನ್ನಲೆಯಲ್ಲಿ ರಾಪ್ಟಿಂಗ್, ಬೋಟಿಂಗ್ ಹಾಗೂ ಜಲಕ್ರೀಡೆಯನ್ನು ಸ್ಥಗಿತಗೊಳಿಸಿರುವುದರಿಂದ ಪ್ರವಾಸೋದ್ಯಮ ತೀವ್ರ ಸಂಕಷ್ಟವನ್ನು ಎದುರಿಸುತ್ತಿದ್ದು, ಪ್ರವಾಸೋದ್ಯಮವನ್ನೆ ನಂಬಿರುವ ದಾಂಡೇಲಿ-ಜೊಯಿಡಾ ತಾಲೂಕಿನ ಸಾವಿರಾರು ಜನರ ಬದುಕು ದುಸ್ತರಗೊಂಡಿದ್ದಲ್ಲದೇ, ಪ್ರವಾಸೋದ್ಯಮಿಗಳು ಸಹ ಸಂಕಷ್ಟದಲ್ಲಿದ್ದಾರೆ.
ಜಲಕ್ರೀಡೆಯನ್ನು ಸ್ಥಗಿತಗೊಳಿಸಿರುವುದರಿಂದ ಪ್ರವಾಸೋದ್ಯಮ ಚಟುವಟಿಕೆ ಸಂಪೂರ್ಣ ನೆಲಕಚ್ಚಿದ್ದು, ಈ ನಿಟ್ಟಿನಲ್ಲಿ ಮತ್ತೇ ರಾಪ್ಟಿಂಗ್, ಬೋಟಿಂಗ್ ಮತ್ತು ಜಲಕ್ರೀಡೆಯನ್ನು ನಡೆಸಲು ಅನುಮತಿಯನ್ನು ನೀಡಿ ಪ್ರವಾಸೋದ್ಯಮವನ್ನು ಬೆಳೆಸುವಂತೆ ದಾಂಡೇಲಿ-ಜೋಯಿಡಾ ಹೋಂ ಸ್ಟೇ / ರೆಸಾರ್ಟ್ಸ್ ಗಳ ಸಂಘದ ನಿಯೋಗವು ಇಂದು (ಮಂಗಳವಾರ, ಆಗಸ್ಟ್ 24) ಬೆಳಿಗ್ಗೆ ರಾಜ್ಯದ ಕಂದಾಯ ಸಚಿವರಾದ ಆರ್.ಅಶೋಕ್ ಅವರನ್ನು ಬೆಂಗಳೂರಿನ ಪದ್ಮನಾಭನಗರದಲ್ಲಿರುವ ಅವರ ಕಚೇರಿಯಲ್ಲಿ ಭೇಟಿಯಾಗಿ ಲಿಖಿತ ಮನವಿ ನೀಡಿ ವಿನಂತಿಸಲಾಗಿದೆ.
ಇದನ್ನೂ ಓದಿ : ಇನ್ಮುಂದೆ ವಾಟ್ಸ್ಯಾಪ್ ಮೂಲಕವೂ ಲಸಿಕೆಯ ಸ್ಲಾಟ್ ಬುಕ್ ಮಾಡಬಹುದು : ಕೇಂದ್ರ
ಮನವಿ ಸ್ವೀಕರಿಸಿದ ಸಚಿವ ಆರ್.ಅಶೋಕ ಅವರು ರಾಪ್ಟಿಂಗ್, ಬೋಟಿಂಗ್ ಮತ್ತು ಜಲಕ್ರೀಡೆಗೆ ಸಂಬಂಧಿಸಿದಂತೆ ಟಾಸ್ಕ್ ಪೋರ್ಸ್ ಸಭೆಯಲ್ಲಿ ಚರ್ಚಿಸಿ, ಶೀಘ್ರದಲ್ಲೆ ಅನುಮತಿಯನ್ನು ನೀಡುವುದಾಗಿ ನಿಯೋಗಕ್ಕೆ ಭರವಸೆ ನೀಡಿದ್ದಾರೆ.
ಇನ್ನು, ಸಚಿವ ಆರ್. ಅಶೋಕ್ ಅವರು ದಾಂಡೇಲಿ-ಜೊಯಿಡಾ ತಾಲೂಕಿನ ಪ್ರವಾಸೋದ್ಯಮ ಬೆಳವಣಿಗೆಯ ಬಗ್ಗೆ ನಿಯೋಗದ ಜೊತೆ ಮಾಹಿತಿಯನ್ನು ಪಡೆದುಕೊಂಡು, ಕೋವಿಡ್ ಮುನ್ನೆಚ್ಚರಿಕೆಯೊಂದಿಗೆ ಪ್ರವಾಸೋದ್ಯಮ ಚಟುವಟಿಕೆಯನ್ನು ನಡೆಸುವಂತೆ ಸೂಚನೆ ನೀಡಿದ್ದಾರೆಂದು ನಿಯೋಗವು ಮಾದ್ಯಮಕ್ಕೆ ತಿಳಿಸಿದೆ. ಸರಳ ಸಹೃದಯಿಯಾಗಿ ಉಭಯ ಕುಶಲೋಪರಿ ನಡೆಸಿದ ಸಚಿವರ ನಡವಳಿಕೆಯ ಬಗ್ಗೆ ಹಾಗೂ ತಕ್ಷಣವೆ ಸ್ಪಂದಿಸಿದ ಕಾರ್ಯವೈಖರಿಯ ಬಗ್ಗೆ ನಿಯೋಗ ಮೆಚ್ಚುಗೆ ವ್ಯಕ್ತಪಡಿಸಿದೆ.
ನಿಯೋಗದಲ್ಲಿ ದಾಂಡೇಲಿ-ಜೋಯಿಡಾ ಹೋಂ ಸ್ಟೇ/ರೆಸಾರ್ಟ್ಸ್ ಗಳ ಸಂಘದ ಅಧ್ಯಕ್ಷ ವಿಷ್ಣುಮೂರ್ತಿ ರಾವ್ ಹಾಗೂ ಸಂಘದ ಪದಾಧಿಕಾರಿಗಳಾದ ಅರುಣಾದ್ರಿ ರಾವ್, ನರಸಿಂಗ ರಾಠಿ ಮತ್ತು ಶ್ರೀಷಾ ರಾವ್ ಉಪಸ್ಥಿತರಿದ್ದರು. ಇದೇ ನಿಯೋಗ ರಾಜ್ಯ ಸರಕಾರದ ಪ್ರಧಾನ ಕಾರ್ಯದರ್ಶಿಯವರನ್ನು ಭೇಟಿಯಾಗಿ ಮನವಿ ಮಾಡಿದೆ.
ಇದನ್ನೂ ಓದಿ : ಕೋವಿಡ್ ಅಶಿಸ್ತಿನ ಸುಸ್ತು ದಾಟಿದ ವಿದ್ಯಾರ್ಥಿ ವೃಂದ