ಮಲ್ಪೆ: ನಮ್ಮ ಜನರಿಗೆ ಅತ್ಯಂತ ಕಡಿಮೆ ದರದಲ್ಲಿ ಬೇಕಾದಷ್ಟು ಮರಳು ಸಿಗಬೇಕೆನ್ನುವುದು ನಮ್ಮ ಇಚ್ಛೆಯಾಗಿದ್ದು ಸಮರ್ಪಕ ವ್ಯವಸ್ಥೆ ಮಾಡಲು ನಾವು ಕಟಿಬದ್ಧರಾಗಿದ್ದೇವೆ, ಪಡುತೋನ್ಸೆಯಲ್ಲಿ ಮರಳುಗಾರಿಕೆ ಆರಂಭಿಸಲಾಗಿದೆ ಎಂದು ಮೀನುಗಾರಿಕಾ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದರು.
ತೆಂಕನಿಡಿಯೂರು ಗ್ರಾಮ ಪಂಚಾಯತ್ ಸಮುದಾಯ ಭವನದಲ್ಲಿ ಶುಕ್ರವಾರ ನಡೆದ ಕೆಳಾರ್ಕಳಬೆಟ್ಟು ಗ್ರಾಮ ಮಟ್ಟದ ಜನಸಂಪರ್ಕ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮರಳು ಸಮಸ್ಯೆಯಿಂದ ಬಹಳಷ್ಟು ಜನರಿಗೆ ತೊಂದರೆಯಾಗಿದೆ. ಮರಳನ್ನು ನಿಲ್ಲಿಸಿದ್ದು ಸರಕಾರ ಅಲ್ಲ. ಒಂದೂವರೆ ವರ್ಷ ಹಿಂದೆ ಯಾರೋ ಒಬ್ಬರು ಈ ಬಗ್ಗೆ ಕೋರ್ಟಿಗೆ ಹೋಗಿದ್ದರು. ಸುಪೀÅಂ ಕೋರ್ಟ್ ಹಸಿರು ನ್ಯಾಯಪೀಠ ಸಿಆರ್‌ಝಡ್ ವ್ಯಾಪ್ತಿಯಲ್ಲಿ ಕೊಟ್ಟ ಅನುಮತಿಯನ್ನು ಸು. ಕೋರ್ಟ್ ಕೊಟ್ಟ ನ್ಯಾಯದಂತೆ ರದ್ದಾಗಿತ್ತು. ಈಗ ನ್ಯಾಯಾಲಯವು ಮರಳುಗಾರಿಕೆ ಆರಂಭಿಸುವಂತೆ ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡಿದೆ. ಹೊಸದಾಗಿ ಅನುಮತಿಯನ್ನು ನೀಡುವಾಗ ಅನೇಕ ನಿಯಮವನ್ನು ಪಾಲನೆ ಮಾಡಬೇಕಾಗಿದೆ. ಅದರಂತೆ ಮುಂದೆ ವ್ಯವಸ್ಥಿತವಾಗಿ ಮರಳು ಸಿಗಲಿದೆ ಎಂದು ಸಚಿವರು ಹೇಳಿದರು.
ನಗರಪ್ರಾಧಿಕಾರದ ಅಧ್ಯಕ್ಷ ನರಸಿಂಹ ಮೂರ್ತಿ, ತಾ.ಪಂ. ಕಾರ್ಯ ನಿರ್ವಹಣಾಧಿಕಾರಿ ಮೋಹನ್‌ರಾಜ್, ಉಡುಪಿ ತಹಶೀಲ್ದಾರ ಪ್ರದೀಪ್ ಕುರುಡೇಕರ್, ಉಡುಪಿ ಜಿ.ಪಂ. ಸದಸ್ಯ ಜನಾರ್ದನ ತೋನ್ಸೆ, ತೆಂಕನಿಡಿಯೂರು ಗ್ರಾ.ಪಂ. ಅಧ್ಯಕ್ಷ ಜಯ ಕುಮಾರ್ ಬೆಳ್ಕಳೆ, ತಾ.ಪಂ. ಸದಸ್ಯ ಧನಂಜಯ ಕುಂದರ್, ತೆಂಕನಿಡಿಯೂರು ಗ್ರಾ.ಪಂ.ನ ಮಾಜಿ ಉಪಾಧ್ಯಕ್ಷ ಪ್ರಖ್ಯಾತ್ ಶೆಟ್ಟಿ , ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸತೀಶ್ ಅಮೀನ್ ಪಡುಕರೆ, ಯತೀಶ್ ಕರ್ಕೇರ, ಪ್ರಥ್ವಿರಾಜ್ ಶೆಟ್ಟಿ, ಸದಸ್ಯರಾದ ವೆಂಕಟೇಶ್ ಕುಲಾಲ್, ಸತೀಶ್ ನಾಯ್ಕ, ಮೀನಾ ಲೊರಿನೋ ಪಿಂಟೋ, ಪ್ರಮೀಳಾ, ಕಲ್ಪನಾ ಸುರೇಶ್, ಕೃಷ್ಣ ಶೆಟ್ಟಿ, ಗೀತಾ ಶೆಟ್ಟಿ, ವೆಂಕಟೇಶ್ ಕುಲಾಲ್, ಗ್ರಾಮಲೆಕ್ಕಾಧಿಕಾರಿ ಉಪೇಂದ್ರ ಮೊದಲಾದವರು ಉಪಸ್ಥಿತರಿದ್ದರು.
ವಿವಿಧ ಸವಲತ್ತು ವಿತರಣೆ
18 ಬಸವ ವಸತಿ ಯೋಜನೆಯ ಮಂಜೂರಾತಿ ಪತ್ರ, 5 ಅಂಬೇಡ್ಕರ್ ವಸತಿ ಯೋಜನೆ, ಪಶು ಸಂಗೋಪನ, ಸಂಧ್ಯಾ ಸುರಕ್ಷಾ, ವಿಧವಾ ವೇತನ, ಮಹಿಳಾ ಮತ್ತು ಶಿಶು ಅಭಿವೃದ್ದಿ ಯೋಜನೆ ಸೇರಿದಂತೆ ವಿವಿಧ ಯೋಜನೆಗಳನ್ನು ಫಲಾನುಭವಿಗಳಿಗೆ ವಿತರಿಸಲಾಯಿತು.
ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗೋಪಾಲ ಸ್ವಾಗತಿಸಿದರು. ಪ್ರಶಾಂತ ಶೆಟ್ಟಿ ಹಾವಂಜೆ ಕಾರ್ಯಕ್ರಮ ನಿರೂಪಿಸಿದರು. ಕಂದಾಯ ನಿರೀಕ್ಷಕ ಸುಧಾಕರ ಶೆಟ್ಟಿ ವಂದಿಸಿದರು.
ಜಿಲ್ಲೆಯ ಮರಳು ಜಿಲ್ಲೆಗೆ ಮಾತ್ರ
ನಾನು ಮಂತ್ರಿಯಾದ ಮೇಲೆ ನಮ್ಮ ಉಡುಪಿ ಜಿಲ್ಲೆಯ ಮರಳು ಬರೇ ಉಡುಪಿ ಜಿಲ್ಲೆಗೆ ಮಾತ್ರ ಸಿಗುವಂತಾಗಬೇಕು, ಬೇರೆ ಎಲ್ಲಿಗೂ ಹೋಗಬಾರದು ಎಂಬ ನಿಮಯ ಮಾಡಿದ್ದೇನೆ. ಬೆಂಗಳೂರಿನಲ್ಲಿ ಒಂದು ಲೋಡ್ ಮರಳಿಗೆ ಒಂದು ಲಕ್ಷ ರೂಪಾಯಿ ಇದೆ. ಇಲ್ಲಿಂದ ಮರಳು ಹೊರಹೋದರೆ ಇಲ್ಲಿನ ಜನರಿಗೆ ತೊಂದರೆಯಾಗುತ್ತಿತ್ತು. ಹಾಗಾಗಿ ಅದನ್ನು ತಡೆಯುವ ಕೆಲಸವನ್ನು ಮಾಡಿದ್ದೇವೆ. ವಿರೋಧಿಗಳು ವಿನಾಕಾರಣ ಇಲ್ಲ ಸಲ್ಲದ ಆರೋಪವನ್ನು ಮಾಡಿ ಸರಕಾರಕ್ಕೆ ಕೆಟ್ಟ ಹೆಸರು ತರುವ ಹುನ್ನಾರವನ್ನು ನಡೆಸುತ್ತಿದ್ದಾರೆ ಎಂದು ಸಚಿವರು ಹೇಳಿದರು.