Advertisement

ರಸ್ತೆ ಕಾಮಗಾರಿ ಸ್ಥಳಕ್ಕೆ ಸಚಿವ ಪ್ರಭು ಚವ್ಹಾಣ ಭೇಟಿ

05:39 PM Nov 04, 2020 | Suhan S |

ಬೀದರ: ಕೋರೆಕಲ್‌ ಗ್ರಾಮದ ಹತ್ತಿರ ನಡೆಯುತ್ತಿರುವ ಠಾಣಾಕುಶನೂರ- ದುಡಕನಾಳ ರಸ್ತೆ ಕಾಮಗಾರಿ ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ ಮಂಗಳವಾರ ಭೇಟಿ ನೀಡಿ ಪರಿಶೀಲಿಸಿದರು.

Advertisement

ಕಾಮಗಾರಿ ಸ್ಥಳದಲ್ಲಿ ಸಂಬಂಧಿಸಿದ ಅಧಿಕಾರಿಗಳು ಇಲ್ಲದಿರುವುದನ್ನು ಕಂಡು ಬೇಸರ ವ್ಯಕ್ತಪಡಿಸಿದ ಸಚಿವರು, ಮೊಬೈಲ್‌ ಮೂಲಕ ಅಧಿಕಾರಿಗಳನ್ನು

ಸಂಪರ್ಕಿಸಿ ಅಧಿಕಾರಿಗಳು ಕಾಮಗಾರಿ ಸ್ಥಳಕ್ಕೆ ಖುದ್ದಾಗಿ ಭೇಟಿ ನೀಡಿದ್ದಲ್ಲಿ ಕೆಲಸ ಯಾವ ಸ್ವರೂಪದಲ್ಲಿದೆ ಎಂದು ತಿಳಿಯಲು ಸಾಧ್ಯ. ಹಾಗಾಗಿ ಅಧಿಕಾರಿಗಳು ಕಡ್ಡಾಯವಾಗಿ ಸ್ಥಳಕ್ಕೆ ಭೇಟಿ ನೀಡಿ, ಕೆಲಸ ನಡೆಯುವ ಬಗ್ಗೆ ಮಾಹಿತಿ ಪಡೆಯಬೇಕು ಎಂದು ನಿರ್ದೇಶನ ನೀಡಿದರು. ಠಾಣಾಕುಶನೂರ, ದುಡಕನಾಳ ಗ್ರಾಮಸ್ಥರು ದಿನನಿತ್ಯ ಸಂಚಾರಕ್ಕೆ ಅನಾನುಕೂಲವಾಗುವುದನ್ನು ಗಮನಿಸಿ, ಸುಮಾರು 5 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಕಾಮಗಾರಿ ಆರಂಭಿಸಲಾಗಿದೆ. 5 ಕಿ.ಮೀವರೆಗೆ ಇರುವ ಈ ರಸ್ತೆ ಗುಣಮಟ್ಟದಿಂದ ಕೂಡಿರುವಂತೆ ನೋಡಿಕೊಳ್ಳಬೇಕು ಎಂದು ಸೂಚನೆ ನೀಡಿದರು.

ಕಾಮಗಾರಿ ನಿಗದಿತ ಅವಧಿಯೊಳಗಾಗಿ ಪೂರ್ಣಗೊಳಿಸಿ, ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು. ಗುತ್ತಿಗೆದಾರರು ತರಾತುರಿಯಲ್ಲಿ ಕೆಲಸ ಪೂರ್ಣಗೊಳಿಸಿ ವರದಿ ಸಲ್ಲಿಸುವ ಸಾಧ್ಯತೆಗಳಿರುತ್ತವೆ. ಆದ್ದರಿಂದ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕು. ಕಾಮಗಾರಿಯಲ್ಲಿ ಲೋಪಗಳು ಕಂಡುಬಂದಲ್ಲಿ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸುವುದಾಗಿ ಎಚ್ಚರಿಸಿದರು. ಈ ಸಂದರ್ಭದಲ್ಲಿ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.

ಸಂಸದ ಖೂಬಾ ಹೇಳಿಕೆ ಖಂಡನೀಯ :

Advertisement

ಬಸವಕಲ್ಯಾಣ: ನಗರಸಭೆಯಲ್ಲಿ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಪಕ್ಷಗಳು ಎಂಐಎಂ ಪಕ್ಷದ ಅಭ್ಯರ್ಥಿಗೆ ಉಪಾಧ್ಯಕ್ಷ ಸ್ಥಾನ ದೊರಕಿಸಲು ಬೆಂಬಲಿಸಿದ್ದು, ಇದೇ ಒಪ್ಪಂದ ಉಪ ಚುನಾವಣೆಯಲ್ಲಿಯೂ ಮುಂದುವರಿಯುವ ಶಂಕೆ ಇರುವುದರಿಂದ ಮತದಾರರು ಜಾಗೃತರಾಗಿ ಈ ಎರಡೂ ಪಕ್ಷಗಳನ್ನು ದೂರವಿಟ್ಟು ಬಿಜೆಪಿ ಗೆಲ್ಲಿಸಬೇಕು ಎನ್ನುವ ಸಂಸದ ಭಗವಂತ ಖೂಬಾ ಹೇಳಿಕೆ ಖಂಡನೀಯ ಎಂದು ಜೆಡಿಎಸ್‌ ತಾಲೂಕು ಅಧ್ಯಕ್ಷ ಶಬ್ಬೀರ ಪಾಶಾ ಹೇಳಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದಅವರು, ಈಚೆಗೆ ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆ ಸಮಯದಲ್ಲಿ ಸಂಸದ ಭಗವಂತ ಖೂಬಾ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಎರಡೂ ಪಕ್ಷಗಳ ಬಗ್ಗೆ ಆರೋಪ ಮಾಡಿದ್ದರು. ಆದರೆ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಒಪ್ಪಂದ ಮಾಡಿಕೊಂಡಿವೆ ಎಂಬ ಅವರ ಆರೋಪ ಸುಳ್ಳಾಗಿದೆ.

ಬಿಜೆಪಿ ಪಕ್ಷದಂತೆ ಆಪರೇಷನ್‌ ಹಾಗೂ ಮೋಸ ಮಾಡುವ ಪಕ್ಷ ನಮ್ಮದಲ್ಲ. ಜೆಡಿಎಸ್‌ ಜಾತ್ಯತೀತ ಮತ್ತು ವಿಶ್ವಾಸದ ಪಕ್ಷ. ಹೀಗಾಗಿ ಎಂಐಎಂ ಪಕ್ಷದ ತಾಲೂಕು ಅಧ್ಯಕ್ಷ ಹಾಗೂ ಪ್ರಮುಖರು ಉಪಾಧ್ಯಕ್ಷ ಸ್ಥಾನಕ್ಕೆ ಬೆಂಬಲ ನೀಡುವಂತೆ ಮನವಿ ಪತ್ರ ಸಲ್ಲಿಸಿದ್ದರಿಂದ ಬೆಂಬಲ ನೀಡಿದ್ದೇವೆಯೇ ಹೊರತು ಯಾವುದೇ ಒಪ್ಪಂದ ಮಾಡಿಕೊಂಡಿಲ್ಲ ಎಂದರು.

ನಗರಸಭೆ ಚುನಾವಣೆಗೂ ಉಪ ಚುನಾವಣೆಗೂ ಯಾವುದೇ ಸಂಬಂಧವಿಲ್ಲ. ವಿಧಾನಸಭೆಚುನಾವಣೆಯಲ್ಲಿ ಜೆಡಿಎಸ್‌ ಸ್ವತಂತ್ರವಾಗಿ ಸ್ಪರ್ಧೆ ಮಾಡಲಿದೆ. ಈಗಾಗಲೇ ಆಕಾಂಕ್ಷಿಗಳ ಪಟ್ಟಿ ಸಿದ್ಧಗೊಂಡಿದೆ. ಶೀಘ್ರ ಪಕ್ಷದ ಹೈಕಮಾಂಡ್‌ ಗಮನಕ್ಕೆತರಲಾಗುವುದು. ನಂತರ ಅವರು ಹೇಳಿದ ಅಭ್ಯರ್ಥಿ ಗೆಲುವಿಗೆ ಶ್ರಮಿಸುತ್ತೇವೆ ಎಂದರು.

ಈ ವೇಳೆ ಜೆಡಿಎಸ್‌ ಕಾರ್ಯಾಧ್ಯಕ್ಷ ರಾಜಕುಮಾರ ಸುಗರೆ, ಪ್ರಧಾನ ಕಾರ್ಯದರ್ಶಿ ಸುಶೀಲ ಅವಸ್ಥಿ, ಪ್ರದೀಪ ಬೇಂದ್ರೆ, ಆಕಾಶ ಖಂಡಾಳೆ, ಜ್ಞಾನೇಶ್ವರ ಮುಳೆ, ಸಂಭಾಜಿ ಜಗತಾಪ, ಬ್ರಹ್ಮರೆಡ್ಡಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next