Advertisement

ರಾಹುಲ್‌ ಗಾಂಧಿ ನಿರ್ಮಲಾ ವಾಗ್ವಾದ

12:30 AM Jan 07, 2019 | Team Udayavani |

ಹೊಸದಿಲ್ಲಿ: ರಫೇಲ್‌ ಡೀಲ್‌ಗೆ ಸಂಬಂಧಿಸಿದಂತೆ ಶುಕ್ರವಾರ ಲೋಕಸ ಭೆಯಲ್ಲಿ ಚರ್ಚೆ ನಡೆಸುವಾಗ ಎಚ್‌ಎಎಲ್‌ (ಹಿಂದುಸ್ಥಾನ್‌ ಏರೋ ನಾಟಿಕ್ಸ್‌ ಲಿಮಿಟೆಡ್‌)ಗೆ ಎನ್‌ಡಿಎ ಸರಕಾರವು 1 ಲಕ್ಷ ಕೋಟಿ ರೂ. ಮೌಲ್ಯದ ಒಪ್ಪಂದವನ್ನು ನೀಡಿದೆ ಎಂಬ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿಕೆ ಈಗ ಮತ್ತೂಂದು ವಾಗ್ವಾದಕ್ಕೆ ಕಾರಣವಾಗಿದೆ.

Advertisement

ಮಾಧ್ಯಮ ವರದಿಯನ್ನು ಉಲ್ಲೇಖೀಸಿ ರವಿವಾರ ಟ್ವೀಟ್‌ ಮಾಡಿರುವ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ, ಸಚಿವೆ ನಿರ್ಮಲಾ ಸುಳ್ಳು ಹೇಳುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. 

“ಸದನದಲ್ಲೇ ಸುಳ್ಳು ಹೇಳಿಕೆ ನೀಡಿರುವ ಸಚಿವೆ ನಿರ್ಮಲಾ ಅವರು, ಎಚ್‌ಎಎಲ್‌ಗೆ 1 ಲಕ್ಷ ಕೋಟಿ ರೂ.ಗಳ ಆರ್ಡರ್‌ ಕೊಟ್ಟಿದ್ದಕ್ಕೆ ಸೂಕ್ತ ದಾಖಲೆಗಳನ್ನು ನಾಳೆಯೇ ನೀಡಲಿ. ಇಲ್ಲವಾದರೆ ರಾಜೀನಾಮೆ ಕೊಡಲಿ’ ಎಂದು ರಾಹುಲ್‌ ಸವಾಲು ಹಾಕಿದ್ದಾರೆ. ಈವರೆಗೆ ಒಂದು ರೂಪಾಯಿಯೂ ಎಚ್‌ಎಎಲ್‌ಗೆ ಲಭ್ಯವಾಗಿಲ್ಲ. ಸಚಿವರು ಹೇಳುವಂತೆ ಒಂದು ಆರ್ಡರ್‌ಗೂ ಈವರೆಗೆ ಸಹಿ ಮಾಡಿಲ್ಲ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ ಎಂದು ರಾಹುಲ್‌ ಹೇಳಿದ್ದಾರೆ.

ಆದರೆ ಇದಕ್ಕೆ ತಿರುಗೇಟು ನೀಡಿದ ಸಚಿವೆ ನಿರ್ಮಲಾ, “26,570 ಕೋಟಿ ರೂ. ಒಪ್ಪಂದವನ್ನು ಎಚ್‌ಎಎಲ್‌ಗೆ ನೀಡಲಾಗಿದ್ದು, 73 ಸಾವಿರ ಕೋಟಿ ರೂ. ಒಪ್ಪಂದ ಮಾತುಕತೆ ಹಂತದಲ್ಲಿದೆ. ರಾಹುಲ್‌ ಈಗ ಕ್ಷಮೆ ಕೇಳಬೇಕು’ ಎಂದಿದ್ದಾರೆ.

ಬಿಜೆಪಿ ಸರಕಾರವು ಎಚ್‌ಎಎಲ್‌ ಬಲಪಡಿಸಲು ಪ್ರಯತ್ನಿಸುತ್ತಿದೆ ಎಂದು ನಿರ್ಮಲಾ ಹೇಳಿದ್ದಾರೆ. ಆದರೆ ಇದು ಸುಳ್ಳು. ಒಂದು ಸುಳ್ಳು ಹೇಳಿದರೆ, ಆ ಸುಳ್ಳನ್ನು ಮುಚ್ಚಿಕೊಳ್ಳಲು ಹೇಳಿದ ಇನ್ನೊಂದಷ್ಟು ಸುಳ್ಳುಗಳು ಹೊರಬರುತ್ತವೆ. ರಫೇಲ್‌ ಡೀಲ್‌ ಸಮರ್ಥನೆ ಮಾಡಿಕೊಳ್ಳುವಾಗ ಸಂಸತ್ತಿಗೆ ಅವರು ಸುಳ್ಳು ಹೇಳಿದ್ದಾರೆ ಎಂದು ರಾಹುಲ್‌ ಗಾಂಧಿ ಟ್ವೀಟ್‌ ಮಾಡಿದ್ದಾರೆ. ಎಚ್‌ಎಎಲ್‌ ಸಂಬಳವನ್ನು ಪಾವತಿ ಮಾಡಲು 1 ಸಾವಿರ ಕೋಟಿ ರೂ. ಸಾಲ ಮಾಡುತ್ತಿದೆ ಎಂದು ಕೂಡ ವರದಿಯಾಗಿತ್ತು.

Advertisement

ರಾಹುಲ್‌ ಕ್ಷಮೆ ಕೇಳಲಿ
ಆದರೆ ಇದಕ್ಕೆ ಪ್ರತಿಕ್ರಿಯಿಸಿದ ಸಚಿವೆ ನಿರ್ಮಲಾ, 2014 ರಿಂದ 2018ರ ಅವಧಿಯಲ್ಲಿ ಎಚ್‌ಎಎಲ್‌ 26570 ಕೋಟಿ ರೂ. ಮೊತ್ತದ ಒಪ್ಪಂದಗಳಿಗೆ ಸಹಿ ಹಾಕಿದೆ. ಇನ್ನೂ 73 ಸಾವಿರ ಕೋಟಿ ರೂ.ಒಪ್ಪಂದಗಳು ಮಾತುಕತೆ ಹಂತದಲ್ಲಿವೆ. ದೇಶವನ್ನು ರಾಹುಲ್‌ ಗಾಂಧಿ ತಪ್ಪು ದಾರಿಗೆಳೆಯುತ್ತಿದ್ದಾರೆ. ಈಗ ರಾಹುಲ್‌ ಸಂಸತ್ತಿನಲ್ಲಿ ಕ್ಷಮೆ ಕೇಳುತ್ತಾರೆಯೇ ಎಂದು ತಿರುಗೇಟು ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next