Advertisement

ಶೋಷಿತರ ಶ್ರೇಯೋಭಿವೃದ್ಧಿಗೆ ನಾರಾಯಣ ಗುರುಗಳ ಕೊಡುಗೆ ಸ್ಮರಣೀಯ: ಸಚಿವ ನಾರಾಯಣ ಗೌಡ

08:07 PM Sep 11, 2022 | Team Udayavani |

ಬೆಂಗಳೂರು: ಹಿಂದುಳಿದ ವರ್ಗಗಳ ಮತ್ತು ಶೋಷಿತರ ಶ್ರೇಯೋಭಿವೃದ್ಧಿಗೆ ಬ್ರಹ್ಮಶ್ರೀ ನಾರಾಯಣ ಗುರುಗಳ ಕೊಡುಗೆ ಸ್ಮರಣೀಯ ಎಂದು ಸಚಿವ ಕೆ .ಸಿ.ನಾರಾಯಣ ಗೌಡ ಹೇಳಿದರು.

Advertisement

ಬಿಲ್ಲವ ಅಸೋಸಿಯೇಶನ್‌ ಬೆಂಗಳೂರು ವತಿಯಿಂದ ಹುಳಿಮಾವು ಬಿಲ್ಲವ ಭವನದಲ್ಲಿ ರವಿವಾರ ಹಮ್ಮಿಕೊಂಡಿದ್ದ “ಬ್ರಹ್ಮಶ್ರೀ ನಾರಾಯಣ ಗುರುಗಳ 168ನೇ ಜಯಂತಿ ಮತ್ತು ವಿದ್ಯಾರ್ಥಿ ವೇತನ ವಿತರಣೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಶೂದ್ರರಿಗೆ ದೇವಸ್ಥಾನ ಪ್ರವೇಶ ನಿರಾಕರಿಸಿದಾಗ ಅವರಿಗಾಗಿ ದೇವಾಲಯ ನಿರ್ಮಾಣ ಮಾಡಿದ ನಾರಾಯಣ ಗುರುಗಳು, ಎಲ್ಲ ವರ್ಗದವರಿಗೂ ದೇವಸ್ಥಾನ ಪ್ರವೇಶಕ್ಕೆ ಅವಕಾಶ ಕಲ್ಪಿಸಿದ ಮಹಾನ್‌ ಸಮಾಜ ಸುಧಾರಕ ಎಂದು ಬಣ್ಣಿಸಿದರು.

ಬಿಲ್ಲವರು ಉದ್ಯಮದಲ್ಲಿ ದೊಡ್ಡಮಟ್ಟದಲ್ಲಿ ತೊಡಗಿಸಿಕೊಂಡಿದ್ದಾರೆ. ಮುಂಬಯಿಯಲ್ಲಿ ಹೊಟೇಲ್‌ ಉದ್ಯಮದಲ್ಲಿ ಛಾಪು ಮೂಡಿಸಿದ್ದಾರೆ. ನಾನು ಕೂಡ ಮುಂಬಯಿಯಲ್ಲಿ ಹೊಟೇಲ್‌ ಉದ್ಯಮದಲ್ಲಿ ಬೆಳೆಯಲು ಬಿಲ್ಲವ ಸಮಾಜದ ಜಯ ಸುವರ್ಣ ಅವರ ನಂಟು ಕಾರಣ ಎಂದು ಸಚಿವರು ಹೇಳಿದರು.

ಲೇಖಕ ಮಮತೇಶ್‌ ಕಡೂರು ಮಾತನಾಡಿ, ನಾರಾಯಣ ಗುರುಗಳು ಕೇವಲ ಒಂದು ಸಮಾಜಕ್ಕೆ ಸೀಮಿತವಾದ ವ್ಯಕ್ತಿ ಅಲ್ಲ. ಅವರು ದಲಿತ, ಶೋಷಿತ ಮತ್ತು ಹಿಂದುಳಿದ ವರ್ಗಗಳ ಸಾಮಾಜಿಕ ಮತ್ತು ಶೈಕ್ಷಣಿಕ ಪ್ರಗತಿಗೆ ಕೊಡುಗೆ ನೀಡಿದ್ದಾರೆ. ಆ ಹಿನ್ನೆಲೆಯಲ್ಲಿ ಅವರನ್ನು ಕೇವಲ ಒಂದು ಸಾಮಾಜಕ್ಕೆ ಸೀಮಿತ ಗೊಳಿಸಬಾರದು ಎಂದು ತಿಳಿಸಿದರು.

Advertisement

ಸಮ ಸಮಾಜದ ನಿರ್ಮಾಣದ ಬಗ್ಗೆ ಹೋರಾಟ ನಡೆಸಿದ ಗುರುಗಳ ತತ್ವ ಸಂದೇಶಗಳನ್ನು ನಮ್ಮ ಮಕ್ಕಳಿಗೆ ತಿಳಿಸಿಕೊಡುವ ಕೆಲಸ ಆಗಬೇಕು. ನಾರಾಯಣ ಗುರುಗಳು ಸಾರಿರುವ ಸಂದೇಶಗಳು ಸಾರ್ವಕಾಲಿಕವಾಗಿದ್ದು, ಅವುಗಳನ್ನು ನಮ್ಮ ಯುವ ಸಮುದಾಯಕ್ಕೆ ತಲುಪಿಸಲು ಗುರುಗಳ ಜೀವನ ಚರಿತ್ರೆಯನ್ನು ಕೃತಿ ಹೊರತಂದಿರುವುದಾಗಿ ಹೇಳಿದರು.

ಬಿಲ್ಲವ ಅಸೋಸಿಯೇಶನ್‌ ಅಧ್ಯಕ್ಷ ಎಂ. ವೇದಕುಮಾರ್‌ ಮಾತನಾಡಿ, ಪ್ರತಿ ವರ್ಷ ನಾರಾಯಣ ಗುರುಗಳ ಜಯಂತಿ ವೇಳೆ ಸಾಧಕ ವಿದ್ಯಾರ್ಥಿಗಳ ಜತೆಗೆ ಹಲವು ಕ್ಷೇತ್ರಗಳ ಸಾಧಕರನ್ನೂ ಅಸೋಸಿಯೇಶನ್‌ ಗೌರವಿಸುತ್ತಾ ಬಂದಿದೆ. ಜತೆಗೆ ತಂದೆ-ತಾಯಿ ಇಲ್ಲದ ಮಕ್ಕಳನ್ನು ದತ್ತು ತೆಗೆದುಕೊಂಡು ಅವರ ಶಿಕ್ಷಣಕ್ಕಾಗಿ ದುಡಿಯುತ್ತಿದೆ. ಈಗಾಗಲೇ ದತ್ತು ಪಡೆದಿರುವ ವಿದ್ಯಾರ್ಥಿಗಳು ವೈದ್ಯಕೀಯ ಮತ್ತು ಎಂಜಿನಿಯರಿಂಗ್‌ ಪದವಿ ಪೂರೈಸುವ ಹಂತದಲ್ಲಿದ್ದಾರೆ. ಅಸೋಸಿಯೇಶನ್‌ ವತಿಯಿಂದ ಸಮಾಜದ ಬಡ ಮಕ್ಕಳಿಗಾಗಿ ವಸತಿ ಶಾಲೆ ತೆರೆಯಲಾಗಿದೆ. ಇದರ ಜತೆಗೆ ಹೆಣ್ಣು ಮಕ್ಕಳಿಗಾಗೂ ಕೂಡ ವಸತಿ ಶಾಲೆ ಈ ವರ್ಷ ಕಾರ್ಯಾರಂಭ ಮಾಡಿದೆ. ಮುಂದಿನ ದಿನಗಳಲ್ಲಿ ವೃದ್ಧಾಶ್ರಮ ಸ್ಥಾಪಿಸುವ ಆಲೋಚನೆಯೂ ಇದೆ ಎಂದರು.

ಡಾ| ಮಮತೇಶ್‌ ಕಡೂರು ಅವರ ಶ್ರೀನಾರಾಯಣ ಗುರುಗಳ ಕುರಿತ ಪುಸ್ತಕ “ದಿವ್ಯಚೇತನ’ವನ್ನು ಬಿಡುಗಡೆಗೊಳಿಸಲಾಯಿತು.

ಕರ್ನಾಟಕ ಪ್ರದೇಶ ಆರ್ಯ ಈಡಿಗರ ಸಂಘದ ಅಧ್ಯಕ್ಷ ಡಾ| ಎಂ.ತಿಮ್ಮೇಗೌಡ, ಗೋವಿಂದ ಪೂಜಾರಿ, ಬಿಲ್ಲವ ಅಸೋಸಿಯೇಶನ್‌ ಪದಾಧಿಕಾರಿಗಳಾದ ಭಾಸ್ಕರ್‌ ಸಿ. ಅಮೀನ್‌, ಕೇಶವ ಪೂಜಾರಿ, ಉದಯಕುಮಾರ್‌, ಭಾಸ್ಕರ ಪೂಜಾರಿ, ಸಂಪತ್‌ಕುಮಾರ್‌ ಮತ್ತಿತರರು ಉಪಸ್ಥಿತರಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next