Advertisement

25 ಸಾವಿರ ಕೋಟಿ ಬಂಡವಾಳ: ಸಚಿವ ನಿರಾಣಿ

08:45 AM Dec 04, 2022 | Team Udayavani |

ಬಾಗಲಕೋಟೆ: ನಾನು ಕೈಗಾರಿಕೆ ಇಲಾಖೆಯ ಜವಾಬ್ದಾರಿಯನ್ನು ವಿವಿಧ ಹಂತದಲ್ಲಿ ವಹಿಸಿಕೊಂಡಾಗ, ಸಮಗ್ರ ಕರ್ನಾಟಕದ ಪದವೀಧರ ಯುವಕ-ಯುವತಿಯರನ್ನು ಉದ್ಯಮಿಗಳನ್ನಾಗಿ ಮಾಡುವ ನಿಟ್ಟಿನಲ್ಲಿ ಕಾನೂನು ಸರಳೀಕರಣ, ಬಂಡವಾಳ ಹೂಡಿಕೆ ಹೀಗೆ ಹಲವು ರೀತಿಯ ಪ್ರಯತ್ನ ಮಾಡಿದ್ದೇನೆ. ಮುಖ್ಯವಾಗಿ ಬೀಳಗಿ ಕ್ಷೇತ್ರ, ಬಾಗಲಕೋಟೆ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ನನ್ನದೇ ಆದ ಪ್ರಯತ್ನ ಮಾಡುತ್ತಿರುವೆ ಎಂದು ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ ಸಚಿವ ಮುರುಗೇಶ ನಿರಾಣಿ ಹೇಳಿದರು.

Advertisement

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಜಿಲ್ಲೆ ಎಲ್ಲ ರಂಗದಲ್ಲೂ ಅಭಿವೃದ್ಧಿಯಾಗಬೇಕು. ಪದವೀಧರರು, ಐಟಿಐ ಕಲಿಕ ಯುವಕ-ಯುವತಿಯರಿಗೆ ಉದ್ಯೋಗ ಕಲ್ಪಿಸಬೇಕು ಇದು ನನ್ನ ಗುರಿ ಎಂದರು. ಕಳೆದ 2010ರಲ್ಲಿ ನಡೆದ ವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ರಾಜ್ಯಕ್ಕೆ 3.08 ಲಕ್ಷ ಕೋಟಿ, 2012ರಲ್ಲಿ 6.72 ಲಕ್ಷ ಕೋಟಿ ಬಂಡವಾಳ ರಾಜ್ಯಕ್ಕೆ ಬಂದಿತ್ತು. ಮೊನ್ನೆ ನಡೆದ ವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಸುಮಾರು 200 ಕಂಪನಿಗಳು, ಒಟ್ಟು 9.81 ಲಕ್ಷ ಕೋಟಿ ಬಂಡವಾಳ ಹೂಡಿಕೆ ಮಾಡಿವೆ. ಮುಖ್ಯಮಂತ್ರಿಗಳ ನೇತೃತ್ವದ ಹೈ ಲೇವಲ್‌ ಕಮೀಟಿಯಲ್ಲಿ ಚರ್ಚಿಸಿ, ಆ ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಈ ವರೆಗೆ ಬೆಂಗಳೂರು ನಗರ ಸಿಮೀತವಾಗಿ ಬಂಡವಾಳ ಹೂಡಿಕೆಯಾಗುತ್ತಿತ್ತು. ಈ ಬಾರಿ ಶೇ. 90ರಷ್ಟು 2ನೇ ದರ್ಜೆಯ ನಗರಗಳಿಗೆ ಬಂಡವಾಳ ಹೂಡಿಕೆಯಾಗಿದೆ ಎಂದು ಹೇಳಿದರು.

ಬಾಗಲಕೋಟೆ ಚಿತ್ರಣವೇ ಬದಲು: ಹಲಕುರ್ಕಿ ಬಳಿ ವಿಮಾನ ನಿಲ್ದಾಣ, ಗ್ಲಾಸ್‌ ಉತ್ಪಾದನೆ, ಹೈಬ್ರಿàಡ್‌ ವಿದ್ಯುತ್‌ ಉತ್ಪಾದನೆ (ನೀರಿನಿಂದ ವಿದ್ಯುತ್‌ ಉತ್ಪಾದನೆ, ಆಕ್ಸಿಜನ್‌ ಬೇರ್ಪಡಿಸುವಿಕೆ), ಎಲೆಕ್ಟ್ರಿಕಲ್‌ ವಾಹನ ತಯಾರಿ ಘಟಕ, ಪ್ರತಿನಿತ್ಯ ಬಳಕೆಯಾಗುವ ವಸ್ತುಗಳ ಉತ್ಪಾದನೆ, ಟೈಕ್ಸ್‌ಟೈಲ್‌ ಉದ್ಯಮ ಹೀಗೆ ಸುಮಾರು 6ಕ್ಕೂ ಹೆಚ್ಚು ಉದ್ಯಮ ಸ್ಥಾಪನೆಯಾಗಲಿವೆ. ಇದರಿಂದ ನೇರವಾಗಿ ಸುಮಾರು 25 ಸಾವಿರ ಜನರಿಗೆ ಉದ್ಯೋಗ ದೊರೆಯಲಿಎದ ಎಂದರು.

ಇದಕ್ಕಾಗಿ ಸುಮಾರು 2 ಸಾವಿರ ಎಕರೆ ಭೂಮಿ ಅವಶ್ಯಕತೆ ಇದ್ದು, ಈಗಾಗಲೇ ಖುಷ್ಕಿ ಭೂಮಿ ಗುರುತಿಸಿದ್ದು, ಈಗಾಗಲೇ ಸುಮಾರು 800 ಎಕರೆಯಷ್ಟು ಭೂಮಿ ಕೊಡಲು ರೈತರು ಸ್ವಯಂ ಪ್ರೇರಣೆಯಿಂದ ಒಪ್ಪಿಕೊಂಡಿದ್ದಾರೆ. ಇನ್ನು ಸುಮಾರು 600 ಎಕರೆಯಷ್ಟು ಸರ್ಕಾರಿ ಭೂಮಿ ಇದೆ. ಈಗಾಗಲೇ 1200ರಿಂದ 1400 ಎಕರೆ ಭೂಸ್ವಾಧೀನಕ್ಕೆ ಸಿದ್ಧವಿದ್ದು, ಇನ್ನೂ 600 ಎಕರೆ ಭೂಮಿಯನ್ನು ರೈತರ ಮನವೋಲಿಸಿಯೇ ಪಡೆಯಬೇಕು ಎಂಬುದು ನನ್ನ ಆಶಯ.

ಇದಕ್ಕಾಗಿ ರೈತರು, ರೈತ ಪ್ರಮುಖರೊಂದಿಗೆ ಮಾತನಾಡಿದ್ದೇನೆ ಎಂದು ಹೇಳಿದರು. ಹಲಕುರ್ಕಿ ಬಳಿ ಒಟ್ಟು 6 ಉದ್ಯಮ, 15ರಿಂದ 25 ಸಾವಿರ ಕೋಟಿ ಬಂಡವಾಳ ಬರಲಿದೆ. ಇದೆಲ್ಲವೂ ಶೀಘ್ರವೇ ಅನುಷ್ಠಾನಗೊಳಿಸಬೇಕು. ಅದಕ್ಕಾಗಿ ಭೂ ಸ್ವಾಧೀನ ಅಗತ್ಯವಿದೆ. ಅಭಿವೃದ್ಧಿ ವಿಷಯದಲ್ಲಿ ಯಾರೂ ರಾಜಕಾರಣ ಮಾಡುವುದು ಬೇಡ. ಎಲ್ಲರೂ ಪಕ್ಷಾತೀತವಾಗಿ ಉದ್ಯಮ ಸ್ಥಾಪನೆಗೆ ಸಹಕಾರ ನೀಡಬೇಕು. ಈ ಕಾರ್ಯ ಪೂರ್ಣಗೊಂಡರೆ, ಇಡೀ ಬಾಗಲಕೋಟೆ ಜಿಲ್ಲೆಯ ಚಿತ್ರಣವೇ ಬದಲಾಗಲಿದೆ. ಸುಮಾರು 125 ವರ್ಷಗಳ ಹಿಂದೆಯೇ ಮೈಸೂರು ಭಾಗದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ ಅವರು, ದಿನ ಬಳಕೆಯ ವಸ್ತುಗಳಿಂದ ಹಿಡಿದು ಎಲ್ಲ ರೀತಿಯ ವಸ್ತುಗಳ ಉದ್ಪಾದನೆ ಉದ್ಯಮ ಸ್ಥಾಪನೆ ಮಾಡಿದ್ದರು. ಅದೇ ಮಾದರಿಯಲ್ಲೂ ಉತ್ತರಕರ್ನಾಟಕ ಅಭಿವೃದ್ಧಿಯಾಗಬೇಕು. ಈ ನಿಟ್ಟಿನಲ್ಲಿ ಮಾದರಿ ಜಿಲ್ಲೆ, ಮಾದರಿ ಬೀಳಗಿ ಕ್ಷೇತ್ರ ಮಾಡುವ ಗುರಿ ಇದೆ. ಈಗಾಗಲೇ ಬೀಳಗಿ ಕ್ಷೇತ್ರದಲ್ಲಿ 1.25 ಲಕ್ಷ ಎಕರೆ ಭೂಮಿ ನೀರಾವರಿಗೆ ಒಳಪಡಿಸಲಾಗುತ್ತಿದೆ ಎಂದರು.

Advertisement

ಜಿಪಂ ಮಾಜಿ ಅಧ್ಯಕ್ಷ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಹೂವಪ್ಪ ರಾಠೊಡ ಉಪಸ್ಥಿತರಿದ್ದರು.

9.81 ಲಕ್ಷ ಕೋಟಿ ಬಂಡವಾಳ: ಮೊನ್ನೆ ನಡೆದ ವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ 9.81 ಲಕ್ಷ ಕೋಟಿ ಬಂಡವಾಳ ರಾಜ್ಯಕ್ಕೆ ಹರಿದು ಬಂದಿದೆ. ಸುಮಾರು 200 ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಬಾಗಲಕೋಟೆ ಜಿಲ್ಲೆ ಒಂದಕ್ಕೇ 6 ಕಂಪನಿಗಳು ಬಂದಿದ್ದು, ಸುಮಾರು 25 ಸಾವಿರ ಕೋಟಿ ಬಂಡವಾಳ ಹೂಡಿಕೆಗೆ ಮುಂದೆ ಬಂದಿವೆ. ಬಾದಾಮಿ ತಾಲೂಕಿನ ಹಲಕುರ್ಕಿ ಬಳಿ ವಿಮಾನ ನಿಲ್ದಾಣ, ಗ್ಲಾಸ್‌ ಉತ್ಪಾದನೆ, ದಿನ ಬಳಕೆ ವಸ್ತುಗಳ ಉತ್ಪಾದನೆ ಸೇರಿದಂತೆ ಸುಮಾರು ನಾಲ್ಕು ವಿವಿಧ ರೀತಿಯ ಉದ್ಯಮ ಸ್ಥಾಪನೆಗೆ ಯೋಜನೆ ಹಾಕಿಕೊಳ್ಳಲಾಗಿದೆ. ಅಲ್ಲದೇ ಕಲಬುರಗಿ ಮತ್ತು ವಿಜಯಪುರದಲ್ಲಿ ಜವಳಿ ಉದ್ಯಮ ಸ್ಥಾಪನೆ ಮಾಡಲಾಗುವುದು. ಇದಕ್ಕಾಗಿ ತಲಾ ಒಂದು ಸಾವಿರ ಕೋಟಿ ಬಂಡವಾಳ ಹೂಡಿಕೆ ಮಾಡಲಾಗುತ್ತಿದೆ ಎಂದು ತಿಳಿಸಿದರು.

ನನ್ನ ಮಗ ರಾಜಕೀಯಕ್ಕೆ ಬರಲ್ಲ

ನಿರಾಣಿ ಕುಟುಂಬದಿಂದ ನಾನು ಮತ್ತು ಎಂಎಲ್‌ಸಿ ಹನಮಂತ ನಿರಾಣಿ ಮಾತ್ರ ರಾಜಕೀಯದಲ್ಲಿ ಇರುತ್ತೇವೆ. ನನ್ನ ಸಹೋದರ ಸಂಗಮೇಶ ನಿರಾಣಿ ಅಥವಾ ನನ್ನ ಪುತ್ರನಾಗಲಿ ರಾಜಕೀಯಕ್ಕೆ ಬರಲ್ಲ. ನನ್ನ ಸಹೋದರ ರಾಜಕೀಯಕ್ಕೆ ಬಂದರೆ, ನಾನು ರಾಜಕೀಯ ನಿವೃತ್ತಿ ಪಡೆದು, ಕಾರ್ಖಾನೆ ಕೆಲಸ ನೋಡಿಕೊಳ್ಳುತ್ತೇನೆ. ಅಲ್ಲದೇ ನನ್ನ ಮಗನಿಗೆ ರಾಜಕೀಯ ಇಷ್ಟವಿಲ್ಲ. ಆತನಿಗೆ 101 ಕಾರ್ಖಾನೆ ಸ್ಥಾಪಿಸಬೇಕು. ಎಥೆನಾಲ್‌, ಸಕ್ಕರೆ ಉತ್ಪಾದನೆಯಲ್ಲಿ ಇಡೀ ವಿಶ್ವಕ್ಕೆ ನಿರಾಣಿ ಉದ್ಯಮ ಸಮೂಹ ನಂ. 1 ಮಾಡಬೇಕು ಎಂಬ ಗುರಿ ಇದೆ ಎಂದು ಸಚಿವ ನಿರಾಣಿ ಹೇಳಿದರು.

ಮುಧೋಳದಲೇ ಏಕೆ ಹೋರಾಟ

ಪ್ರಸಕ್ತ ವರ್ಷ ಸಕ್ಕರೆ ಕಾರ್ಖಾನೆಗಳು, ಕಬ್ಬು ನುರಿಸುವ ಹಂಗಾಮು ಆರಂಭಿಸಲು ಸುಮಾರು 52 ದಿನಗಳ ವಿಳಂಬವಾಯಿತು. ಸುಮಾರು ಎರಡು ತಿಂಗಳ ಸೀಜನ್‌ ಸಿಗಲಿಲ್ಲ. ಈ ವಿಳಂಬದಿಂದ ಕಾರ್ಖಾನೆಗಳಿಗಿಂತ, ರೈತರಿಗೇ ಹೆಚ್ಚು ಹಾನಿಯಾಗಿದೆ. ಇದಕ್ಕೆ ರೈತರೂ ಅರ್ಥ ಮಾಡಿಕೊಂಡಿದ್ದಾರೆ. ಕೆಲವರು ಬೇಕಂತಲೇ, ಕೆಲವರನ್ನು ಹೋರಾಟಕ್ಕೆ ಪ್ರಚೋದನೆ ಕೊಡುತ್ತಿದ್ದಾರೆ. ಅವರು ಯಾರು ಎಂದು ನಾನೂ ತನಿಖೆ ಮಾಡುತ್ತಿದ್ದೇನೆ. ಭಾವನೆ ಶುದ್ದವಿದ್ದರೆ, ಭಗವತ ಎಲ್ಲವೂ ಒಳ್ಳೆಯದನ್ನೇ ಮಾಡುತ್ತಾನೆ. ನಮ್ಮ ಕಾರ್ಖಾನೆಗಿಂತಲೂ ಕಡಿಮೆ ಕಬ್ಬಿನ ದರ ಕೊಡುವ ಕಾರ್ಖಾನೆಗಳೂ ಇವೆ. ಅವುಗಳ ವಿರುದ್ಧ ಅಥವಾ ಮುಧೋಳ ಹೊರತುಪಡಿಸಿ, ಯಾವ ಕಡೆಯೂ ಹೋರಾಟ ನಡೆಯಲ್ಲ. ಮುಧೋಳದಲ್ಲೇ ಏಕರೆ ಹೋರಾಟ ನಡೆಯುತ್ತವೆ. ಇದರ ಹಿಂದೆ ಯಾರಿದ್ದಾರೆ ಎಂಬುದು ಹುಡುಕುತ್ತಿದ್ದೇನೆ ಎಂದು ನಿರಾಣಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next