Advertisement

ಜಿಲ್ಲೆಯ ಕಾಂಗ್ರೆಸ್‌ ಶಾಸಕರಲಿ ಸೋಲಿನ ಭಯ

03:28 PM Jan 14, 2023 | Team Udayavani |

ಕೋಲಾರ: ಜಿಲ್ಲೆಯ ಕಾಂಗ್ರೆಸ್‌ ಶಾಸಕರು ಸೋಲುವ ಭಯದಿಂದ ಸಿದ್ದರಾಮಯ್ಯರನ್ನು ಕರೆತರುತ್ತಿದ್ದಾರೆ. ಆದರೆ, ಕೋಲಾರ ಕ್ಷೇತ್ರದಲ್ಲಿ ಕಾಂಗ್ರೆಸ್‌ ಪಕ್ಷ ಲೆಕ್ಕಕ್ಕೆ ಇಲ್ಲ. ಬಿಜೆಪಿ ಹಾಗೂ ಜೆಡಿಎಸ್‌ ನಡುವೆ ಸ್ಪರ್ಧೆ ನಡೆಯಲಿದ್ದು, ಈ ಬಾರಿ ಬಿಜೆಪಿ ಗೆಲುವು ನಿಶ್ಚಿತ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ ಆತ್ಮವಿಶ್ವಾಸ ವ್ಯಕ್ತಪಡಿಸಿದರು.

Advertisement

ನಗರದಲ್ಲಿಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕೋಲಾರ ಶಾಸಕರು ಹಾಗೂ ಕಾಂಗ್ರೆಸ್‌ನ ಸ್ಥಳೀಯ ಮುಖಂಡರು ಸಿದ್ದರಾಮಯ್ಯ ಅವರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಹೇಗಾದರೂ ಮಾಡಿ ಸೋಲಿಸಬೇಕು ಎಂದು ಒಳಸಂಚು ರೂಪಿಸುತ್ತಿದ್ದಾರೆ. ಒಳ ಜಗಳದ ಸೂಕ್ಷ್ಮವನ್ನು ಸಿದ್ದರಾಮಯ್ಯ ಅರ್ಥ ಮಾಡಿಕೊಂಡರೆ ತಮ್ಮ ನಿಜವಾದ ಹಿತೈಷಿಗಳು ಯಾರು ಎಂಬುದು ಗೊತ್ತಾಗುತ್ತದೆ ಎಂದರು. ಜಿಲ್ಲೆಯ ಕಾಂಗ್ರೆಸ್‌ ಶಾಸಕರು ತಮ್ಮ ಕ್ಷೇತ್ರಗಳಲ್ಲಿ ಸೋಲುವ ಭಯದಿಂದ ಅವರನ್ನು ಕರೆತರುತ್ತಿದ್ದಾರೆ. ಸಿದ್ದರಾಮಯ್ಯ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು ಎಂದು ಸಲಹೆ ನೀಡಿದರು.

ಮುಸ್ಲಿಮರ 40 ಸಾವಿರ ಓಟು ಇವೆ ಎಂಬ ಕಾರಣಕ್ಕೆ ಸಿದ್ದರಾಮಯ್ಯ ಕೋಲಾರ ಆಯ್ಕೆ ಮಾಡಿಕೊಂಡಿದ್ದಾರೆ. ಪ್ರತಿ ಚುನಾವಣೆಯಲ್ಲೂ ಒಂದೊಂದು ಸ್ಥಳದಲ್ಲಿ ಸ್ಪರ್ಧೆ ಮಾಡುತ್ತಲೇ ಇರುತ್ತಾರೆ. ವರುಣಾ, ಚಾಮುಂಡೇಶ್ವರಿ, ಬಾದಾಮಿ ಮುಗಿಸಿ ಈಗ ಕೋಲಾರಕ್ಕೆ ಬಂದಿದ್ದಾರೆ. ರಾಜಕೀಯದಲ್ಲಿ ಒಂದು ಕ್ಷೇತ್ರರದಲ್ಲಿ ಗಟ್ಟಿಯಾಗಿ ನೆಲೆಯೂರಬೇಕು. ಆ ಕ್ಷೇತ್ರಕ್ಕೆ ನಮ್ಮ ಕೊಡುಗೆ ಹೆಚ್ಚಾಗಿರಬೇಕು. ಆ ಕ್ಷೇತ್ರದ ಜನರ ವಿಶ್ವಾಸ ಗಳಿಸಿದಾಗ ಕ್ಷೇತ್ರ ಬದಲಾವಣೆ ಮಾಡುವ ಪ್ರಶ್ನೆಯೇ ಬರಲ್ಲ. ಹಲವರು ಒಂದೊಂದು ಕ್ಷೇತ್ರದಲ್ಲಿ ಏಳೆಂಟು ಬಾರಿ ಗೆದ್ದ ಉದಾಹರಣೆಗಳಿವೆ. ಸಿದ್ದರಾಮಯ್ಯ ಏಕೆ ಆಗಾಗ ಕ್ಷೇತ್ರ ಬದಲಾಯಿಸುತ್ತಾರೋ ನಮಗೆ ಅರ್ಥವಾಗಿಲ್ಲ. ಇದು ಒಳ್ಳೆಯ ಸಂದೇಶವಂತೂ ಅಲ್ಲ. ಅವರದ್ದು ತಪ್ಪು ನಿರ್ಧಾರ ಎಂದು ಹೇಳಿದರು.

ಬೆಂಗಳೂರಿಗೆ ಹತ್ತಿರವಿರುವ ಕೋಲಾರದ ಯಾವುದಾದರೂ ಕ್ಷೇತ್ರ ಅಭಿವೃದ್ಧಿಯಾಗಿದೆಯೇ ಎಂದು ಪ್ರಶ್ನಿಸಿದ ಅವರು ಸಾರ್ವಜನಿಕರು ಬುದ್ಧಿವಂತರಿದ್ದಾರೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಗೆಲ್ಲಿಸಿದ್ದಾರೆ ಎಂದರು.

ಯಾವುದೇ ನಿಮಿಷದಲ್ಲಿಚುನಾವಣೆ ಬಂದರೂ ನಾವು ಸಿದ್ಧವಾಗಿದ್ದೇವೆ. ಮುಂಬರುವ ಚುನಾವಣೆಯಲ್ಲಿ ಗೆಲ್ಲಲು ವ್ಯವಸ್ಥೆ ಮಾಡಿಕೊಳ್ಳುತ್ತಿದ್ದೇವೆ. ನಮ್ಮಲ್ಲಿ ಯಾವುದೇ ಗೊಂದಲ ಇಲ್ಲ ಎಂದು ನುಡಿದರು. ಕೋಲಾರದ ಅಭಿವೃದ್ಧಿಕೆಲಸ ನಡೆಯದ ಕುರಿತು, ಎಲ್ಲಾ ಶಾಸಕರಿಗೆ ಸರಕಾರ ಅನುದಾನ ನೀಡುತ್ತಿದೆ. ಕೋಲಾರಕ್ಕೆ ಎಷ್ಟು ಅನುದಾನ ಬಂದಿದೆ ಎಂಬುದನ್ನು ಬೇಕಾದರೆ ಪಟ್ಟಿ ಮಾಡಲಿ. ಉಳಿದೆಲ್ಲಾ ಕ್ಷೇತ್ರಗಳಿಗೆ ಹೆಚ್ಚು ಅನುದಾನ ಈ ಕೋಲಾರಕ್ಕೆ ಸಿಕ್ಕಿದೆ. ಅದು ಸರಿಯಾಗಿ ಅನುದಾನ ಬಳಕೆ ಆಗಿದೆಯೇ? ಎಲ್ಲೂ ಅಭಿವೃದ್ಧಿ ಕಾಣುತ್ತಿಲ್ಲ. ಇದಕ್ಕೆ ನೇರ ಹೊಣೆ ಕ್ಷೇತ್ರದ ಶಾಸಕರು ಎಂದು ಶ್ರೀನಿವಾಸಗೌಡರ ನಿರ್ಲಕ್ಷ್ಯದ ವಿರುದ್ದ ಟೀಕಿಸಿದರು.

Advertisement

ಬಿಟ್ಟುಹೋಗುವ ಉದ್ದೇಶ ಗೊತ್ತಿಲ್ಲ : ಮುಳಬಾಗಿಲು ಪಕ್ಷೇತರ ಶಾಸಕ ಎಚ್‌.ನಾಗೇಶ್‌ ಕಾಂಗ್ರೆಸ್‌ ಸೇರುತ್ತಿರುವ ಕುರಿತ ಪ್ರಶ್ನೆಗೆ, ನಾಗೇಶ್‌ ನಮ್ಮ ಪಕ್ಷದ ಚಿಹ್ನೆ ಮೇಲೆ ಸ್ಪರ್ಧೆ ಮಾಡಿ ಗೆದ್ದವರಲ್ಲ. ಪಕ್ಷೇತರ ಶಾಸಕರಾಗಿ ಬಿಜೆಪಿ ಜತೆ ಗುರುತಿಸಿಕೊಂಡಿದ್ದರು. ಪಕ್ಷಕ್ಕೆ ಬೆಂಬಲ ನೀಡಿದ್ದ ಸಂದರ್ಭದಲ್ಲಿ ಅವರನ್ನು ಸಚಿವರನ್ನಾಗಿ ಮಾಡಿದ್ದೆವು, ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೀಡಿದ್ದೆವು. ಯಾವ ಉದ್ದೇಶದಿಂದ ನಮ್ಮನ್ನು ಬಿಟ್ಟು ಹೋಗುತ್ತಿದ್ದಾರೆ ಎಂಬುದು ಗೊತ್ತಿಲ್ಲ ಎಂದು ಸಚಿವ ಮುನಿರತ್ನ ಉತ್ತರ ನೀಡಿದರು.

ಡಿ.ಕೆ.ಶಿವಕುಮಾರ್‌ ಮನೆ ದೇವರ ಪ್ರಕಾರ ಸಿದ್ದರಾಮಯ್ಯ ಒಂದು ಕಡೆ ನಿಂತರೆ ಮಾತ್ರ ಗೆಲ್ಲುತ್ತಾರೆ. ಆದರೆ, ಸಿದ್ದರಾಮಯ್ಯ ಅವರ ಮನೆ ದೇವರು ಎರಡು ಕಡೆ ನಿಂತುಕೊಳ್ಳಬೇಕೆಂದು ಹೇಳು ತ್ತಿದೆ. ಶಿವಕುಮಾರ್‌ ಅವರ ಮನೆ ದೇವರ ಮಾತಿ ನಂತೆ ಕೋಲಾರ ಕ್ಷೇತ್ರ ಬಿಟ್ಟರೆ ಬಹಳ ಒಳ್ಳೆಯದು. -ಮುನಿರತ್ನ, ಜಿಲ್ಲಾ ಉಸ್ತುವಾರಿ ಸಚಿವ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next