Advertisement

ಸಚಿವ, ಶಾಸಕರ ವೇತನಕ್ಕೆ ಕತ್ತರಿ?

11:51 PM Apr 08, 2020 | Sriram |

ಬೆಂಗಳೂರು: ಸಂಸತ್‌ ಸದಸ್ಯರ ಒಂದು ವರ್ಷದ ವೇತನ ಶೇ.30 ಮತ್ತು ಎರಡು ವರ್ಷಗಳ ಸ್ಥಳೀಯ ಕ್ಷೇತ್ರಾಭಿವೃದ್ಧಿ ನಿಧಿ ಕಡಿತ ಮಾದರಿಯಲ್ಲೇ ರಾಜ್ಯದಲ್ಲೂ ಶಾಸಕರು ಮತ್ತು ವಿಧಾನಪರಿಷತ್‌ ಸದಸ್ಯರ ವೇತನ ಕಡಿತ ಮಾಡಬಹುದಾ ಎಂಬ ಬಗ್ಗೆ ಉನ್ನತ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ. ಆದರೆ ಇದಕ್ಕೆ ಜನ ಪ್ರತಿನಿಧಿಗಳು ಭಿನ್ನರಾಗ ಹಾಡುತ್ತಿದ್ದಾರೆ.

Advertisement

ಶಾಸಕರು, ವಿಧಾನಪರಿಷತ್‌ ಸದಸ್ಯರಿಗೆ 25 ಸಾವಿರ ರೂ. ವೇತನ, 1.15 ಲಕ್ಷ ರೂ. ಭತ್ತೆ, ಸಚಿವರು 40 ಸಾವಿರ ರೂ. ವೇತನ, 4.50 ಲಕ್ಷ ರೂ. ಭತ್ತೆ ಪಡೆಯುತ್ತಿದ್ದಾರೆ. ಬಿಜಿಪಿ ಆಡಳಿತದಲ್ಲಿರುವ ರಾಜ್ಯಗಳಲ್ಲಿ ಕೇಂದ್ರದ ಮಾದರಿಯಲ್ಲಿ ವೇತನ ಕಡಿತ ಮತ್ತು ಕ್ಷೇತ್ರಾಭಿವೃದ್ಧಿ ನಿಧಿ ಕಡಿತಕ್ಕೆ ಬಿಜೆಪಿ ಹೈಕಮಾಂಡ್‌ನಿಂದಲೂ ಸೂಚನೆ ಇದೆ. ಈಗಾಗಲೇ ಗುಜರಾತ್‌ನಲ್ಲಿ ಶಾಸಕರ ವೇತನ ಒಂದು ವರ್ಷದ ಮಟ್ಟಿಗೆ ಶೇ.30ರಷ್ಟು ಕಡಿತ ಮಾಡಲು ನಿರ್ಧಾರ ಕೈಗೊಳ್ಳಲಾಗಿದೆ. ಬೇರೆ ರಾಜ್ಯಗಳಲ್ಲೂ ಈ ನಿಟ್ಟಿನಲ್ಲಿ ಚರ್ಚೆ ನಡೆದಿದೆ.

ಸದ್ಯ ರಾಜ್ಯದ ಶಾಸಕರು ಮತ್ತು ವಿಧಾನಪರಿಷತ್‌ ಸದಸ್ಯರು ವೇತನ ಕಡಿತ ಮಾಡಿಕೊಳ್ಳಲು ಸಮ್ಮತಿ ಸೂಚಿಸಿದ್ದಾರೆ. ಆದರೆ ಭತ್ತೆ ಮತ್ತು ವಾರ್ಷಿಕ ಕ್ಷೇತ್ರಾಭಿವೃದ್ಧಿ ನಿಧಿ ರೂಪದಲ್ಲಿನ ಎರಡು ಕೋ. ರೂ. ಕಡಿತಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಅಂದ ಹಾಗೆ ಸರಕಾರವೇ ವೇತನ ಕಡಿತ ನಿರ್ಧಾರ ಮಾಡಿದರೆ ಕರ್ನಾಟಕ ಶಾಸಕರ ವೇತನ, ನಿವೃತ್ತಿ ವೇತನ ಮತ್ತು ಭತ್ತೆಗಳ ಕಾಯ್ದೆಗೆ ತಿದ್ದುಪಡಿ ತರಬೇಕು. ಪ್ರಸ್ತುತ ಸಂಪುಟ ಸಭೆ ಕರೆದು ಅಧ್ಯಾದೇಶ ಸಹ ಹೊರಡಿಸಬಹುದು. ಅಂಥ ಸಾಧ್ಯತೆಯೂ ಇಲ್ಲದಿಲ್ಲ ಎಂದು ಅಧಿಕಾರಿಗಳು ತಿಳಿಸಿದರು.

ಶಾಸಕರ ವಾದ
ಕೋವಿಡ್ 19 ಹಿನ್ನೆಲೆಯಲ್ಲಿ ಎರಡು ವರ್ಷಗಳ ಕಾಲ ಬೇರೆ ಬೇರೆ ಯೋಜನೆಗಳಡಿ ಕ್ಷೇತ್ರದ ಅಭಿವೃದ್ಧಿಗೆ ಅನುದಾನ ಸಿಗುವುದು ಅನುಮಾನ. ಹೀಗಿರುವಾಗ ಕ್ಷೇತ್ರಾಭಿವೃದ್ಧಿ ನಿಧಿಗೂ ಕತ್ತರಿ ಬಿದ್ದರೆ ಕಷ್ಟವಾಗಬಹುದು ಎಂಬುದು ಶಾಸಕರ ವಾದ. ಜತೆಗೆ ಕೇಂದ್ರ ಕೇವ ಲ ವೇತನವನ್ನಷ್ಟೇ ಕಡಿತ ಮಾಡಿದೆ, ಭತ್ತೆಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ ಎಂಬುದು ಕೆಲವು ಶಾಸಕರ ಅಭಿಪ್ರಾಯ.

Advertisement

Udayavani is now on Telegram. Click here to join our channel and stay updated with the latest news.

Next