ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರು ಏನು ಮಾಡುತ್ತಾರೆ ಎಂದು ಅವರ ಮಂತ್ರಿ ಮಂಡಲಕ್ಕೆ ಗೊತ್ತಾಗುದಿಲ್ಲ.ಲೇಹ್ ಗೆ ಮೊದಲು ರಾಜನಾಥ್ ಹೋಗುತ್ತಾರೆ ಅಂತ ಇತ್ತು.ಆದರೆ ಮೊದಿಯವರೇ ಹೋಗಿ ಬಂದಿದ್ದಾರೆ. ಹೋಗಿ ನೋಡಿ ಬಂದಾದ ನಂತರವೂ ವಸ್ತುಸ್ಥಿತಿ ತಿಳಿಸಬೇಕಲ್ಲ ಎಂದು ರಾಜ್ಯಸಭಾ ಸಂಸದ ಮಲ್ಲಿಕಾರ್ಜುನ ಖರ್ಗೆ ಆಗ್ರಹಿಸಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಜೂನ್ 15 ರಂದು ಗಾಲ್ವಾನ್ ನಲ್ಲಿ ನಡೆದಿರುವ ವಿಚಾರ ಜನರಿಗೆ ತಿಳಿಸಬೇಕು. ಮೊದಲಿನಿಂದಲೂ ನಾವು ಇದನ್ನೇ ಕೇಳ್ತಿದ್ದೇವೆ. ಈಗ ಭೇಟಿ ನೀಡಿದ ನಂತರ ಯಾವ ಯಾವ ವಿಚಾರಗಳನ್ನು ಜನರ ಮುಂದಿಡುತ್ತಾರೆ ನೊಡೋಣ ಎಂದರು.
ನಾವು ಏನೇ ಮಾಡಿದ್ರೂ ದೇಶದ್ರೋಹಿಗಳು. ಒಳ್ಳೆಯ ಸಲಹೆ ಕೊಟ್ಟರೂ ನಮ್ಮನ್ನು ದೇಶದ್ರೋಹಿಗಳು ಎಂದು ಬಿಂಬಿಸುತ್ತಾರೆ. ತಪ್ಪು ಖಂಡಿಸಿದರೂ ದೇಶದ್ರೋಹಿಗಳು ಎನ್ನುತ್ತಾರೆ. ಈಗ ಸತ್ಯಾಂಶವನ್ನ ಅವರೇ ತಿಳಿಸಲಿ ಎಂದರು.
ದೇಶ ಒಟ್ಟಾಗಿರಬೇಕು. ಸೈನಿಕರಿಗೆ ಬೆಂಬಲ ಕೊಡಬೇಕು. ದೇಶವ್ನು ನಾವು ಉಳಿಸಿಕೊಳ್ಳಬೇಕಿದೆ. ಒಂದಿಂಚೂ ಭೂಮಿ ಬೇರೆಯವರಿಗೆ ಹೋಗಬಾರದು. ಅದಕ್ಕೆ ನಾವು ಬೆಂಬಲ ಕೊಡುತ್ತೇವೆ. ಒಂದು ಕಡೆ ಕೋವಿಡ್, ಇನ್ನೊಂದೆಡೆ ಚೀನಾ ಉಪಟಳ. ಈಗ ಒಗ್ಗಟ್ಟಾಗಿರಬೇಕಾದ ದಿನಗಳು. ವಾಸ್ತವಾಂಶವನ್ನು ಜನರಿಗೆ ತಿಳಿಸಬೇಕು ಎಂದು ಆಗ್ರಹಿಸಿದರು.
ರಾಜ್ಯದಲ್ಲಿ ಮೆಡಿಕಲ್ ಕಿಟ್ ಖರೀದಿಯಲ್ಲಿ ಅವ್ಯವಹಾರ ವಿಚಾರವಾಗಿ ಮಾತನಾಡಿದ ಅವರು, ಅವ್ಯವಹಾರದ ಬಗ್ಗೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ. ಹೆಚ್.ಕೆ.ಪಾಟೀಲರು ಇದರ ಬಗ್ಗೆ ಧ್ವನಿ ಎತ್ತಿದ್ದಾರೆ. ಪಿಪಿಎ ಕಿಟ್ ಸೇರಿ ಎಲ್ಲವೂ ತನಿಖೆಯಾಗಬೇಕು ಅದಕ್ಕೆ ಹಣ ಎಷ್ಟು ಖರ್ಚಾಗಿದೆ, ಕಿಟ್ ಮೌಲ್ಯವೇನು, ಇದರ ಬಗ್ಗೆ ಸಮಿತಿ ತನಿಖೆ ಮಾಡಬೇಕು. ತನಿಖೆ ಮಾಡಿ ಸತ್ಯಾಂಶವನ್ನ ಹೊರಹಾಕಲಿ ಎಂದು ಮಲ್ಲಿಕಾರ್ಜುನ ಖರ್ಗೆ ಒತ್ತಾಯ ಮಾಡಿದರು.