ಸಾಗರ: ಸ್ಥಳೀಯ ಶಾಸಕರು ತಾವು ನಡೆಸುತ್ತಿರುವ ಪ್ರಗತಿ ಪರಿಶೀಲನಾ ಸಭೆಯಲ್ಲಿ ಕಾಣುತ್ತಿಲ್ಲ ಎಂಬ ಪತ್ರಕರ್ತರ ಕುತೂಹಲದ ಪ್ರಶ್ನೆಗೆ ಅಸಮಾಧಾನಗೊಂಡ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ “ನೀವು ತಿಪ್ಪರಲಾಗ ಹಾಕಿದರೂ ಈ ಪ್ರಶ್ನೆಗೆ ಉತ್ತರ ಕೊಡುವುದಿಲ್ಲ’ ಎಂದು ಪ್ರತಿಕ್ರಿಯಿಸಿದ ಹಾಗೂ ಪತ್ರಕರ್ತರನ್ನು ಉದ್ದೇಶಿಸಿ ತುತ್ಛವಾಗಿ ಮಾತನಾಡಿದ ವಾರ್ತಾ ಧಿಕಾರಿಯ ವರ್ತನೆಯನ್ನು ಸಮರ್ಥಿಸಿಕೊಂಡ ಘಟನೆ ಸಾಗರದಲ್ಲಿ ಶುಕ್ರವಾರ ನಡೆದಿದೆ.
ಶುಕ್ರವಾರ ತಾಲೂಕಿನ ಪ್ರವಾಸಿ ಮಂದಿರದಲ್ಲಿ ನಡೆದ ಬರ ನಿರ್ವಹಣೆ ಮತ್ತು ಕುಡಿಯುವ ನೀರು ಸಮಸ್ಯೆ ಕುರಿತು ಕರೆಯಲಾಗಿದ್ದ ಸಭೆಯಲ್ಲಿ ಸ್ಥಳೀಯ ಶಾಸಕರ ಗೈರುಹಾಜರಿಯನ್ನು ಗಮನಿಸಿದ ವರದಿಗಾರರು, ಮಧು ಅವರಲ್ಲಿ ಈ ಬಗ್ಗೆ ಪ್ರಶ್ನಿಸಿದ್ದಾರೆ. ಆಗ ಮಧು, ಇದಕ್ಕೆಲ್ಲಾ ನಾನು ಉತ್ತರ ಕೊಡುವುದಿಲ್ಲ. ನಿಮ್ಮ ಬಳಿ ಬೇರೆ ಪ್ರಶ್ನೆ ಇಲ್ಲವೇ ಎಂದು ಏರಿದ ಧ್ವನಿಯಲ್ಲಿ ಪ್ರಶ್ನಿಸಿ, ನೀವು ತಿಪ್ಪರಲಾಗ ಹಾಕಿದರೂ ಈ ಪ್ರಶ್ನೆಗೆ ಉತ್ತರ ಕೊಡುವುದಿಲ್ಲ ಎಂದು ಕೋಪ ವ್ಯಕ್ತಪಡಿಸಿದ್ದಾರೆ.
ಈ ನಡುವೆ ತಾಲೂಕಿನ ಪತ್ರಕರ್ತರಿಗೆ ಸಭೆಯ ಮಾಹಿತಿ ಕೊಡದ ವಿಚಾರದಲ್ಲಿ ಸ್ಥಳದಲ್ಲಿದ್ದ ವಾರ್ತಾ ಇಲಾಖೆಯ ವಾರ್ತಾ ಧಿಕಾರಿಯನ್ನು ಪ್ರಶ್ನಿಸಿದಾಗ ಅವರು ಪತ್ರಕರ್ತರ ಅ ಧಿಕೃತತೆಯನ್ನೇ ಪ್ರಶ್ನಿಸಿದ್ದಾರೆ. ಆಗ ಪತ್ರಕರ್ತರೊಬ್ಬರು ರಾಜ್ಯ ಸರ್ಕಾರದ ಮಾನ್ಯತೆ ಪಡೆದಿರುವ ಕೆಯುಡಬ್ಲ್ಯೂ ಜೆ ಸಂಸ್ಥೆಯ ಮೀಡಿಯಾ ಕಾರ್ಡ್ ತೋರಿಸಿದಾಗಲೂ ವಾರ್ತಾಧಿಕಾರಿ ಮಾರುತಿ ಅದನ್ನು ಧಿಕ್ಕರಿಸಿ ಮಾತನಾಡಿದ್ದಾರೆ. ವಿಷಯವನ್ನು ಸಚಿವ ಮಧು ಅವರ ಗಮನಕ್ಕೆ ತಂದಾಗ ಅವರೂ ವಾರ್ತಾ ಧಿಕಾರಿಯನ್ನು ಸಮರ್ಥಿಸಿಕೊಂಡಂತಹ ಘಟನೆ ನಡೆದಿದೆ. ಈ ಘಟನೆಯನ್ನು ಸಾಗರದ ಕಾರ್ಯನಿರತ ಪತ್ರಕರ್ತರ ಸಂಘ ತೀವ್ರವಾಗಿ ಖಂಡಿಸಿದ್ದು, ಈ ಕುರಿತು ರಾಜ್ಯ ಮಟ್ಟದಲ್ಲಿ ಗಮನ ಸೆಳೆಯಲು ತೆಗೆದುಕೊಳ್ಳಬೇಕಾದ ಕ್ರಮಗಳನ್ನು ಚರ್ಚಿಸಲು ಶನಿವಾರ ತುರ್ತು ಸಭೆ ಕರೆದಿದೆ.
ಈ ನಡುವೆ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹಾಗೂ ಸಾಗರ ಶಾಸಕ ಗೋಪಾಲಕೃಷ್ಣ ಬೇಳೂರು ನಡುವಿನ ವೈಮನಸ್ಸು ದಿನದಿನಕ್ಕೆ ಏರುಮುಖವಾಗಿ ಸಾಗುತ್ತಿರುವಂತಿದೆ. ಶಾಸಕ ಗೋಪಾಲಕೃಷ್ಣ ಇತ್ತೀಚೆಗೆ ಹಲವಾರು ಬಾರಿ ಸಾರ್ವಜನಿಕವಾಗಿ ಜಿಲ್ಲಾ ಉಸ್ತುವಾರಿ ಸಚಿವರ ಕಾರ್ಯವೈಖರಿ ಖಂಡಿಸಿ ಮಾತನಾಡಿದ್ದಲ್ಲದೆ, ತಮಗಿರುವ ಅಸಮಾಧಾನವನ್ನು ಜನರೆದುರೇ ಬಹಿರಂಗಪಡಿಸಿದ್ದರು. ಹೀಗಾಗಿಯೇ ಸಾಗರ ತಾಲೂಕು ಕೇಂದ್ರದಲ್ಲಿ ನಡೆದ ಬರ ನಿರ್ವಹಣೆ ಮತ್ತು ಕುಡಿಯುವ ನೀರು ಸಮಸ್ಯೆ ಬಗ್ಗೆ ಕರೆಯಲಾಗಿದ್ದ ಅಧಿ ಕಾರಿಗಳ ಮಟ್ಟದ ಸಭೆಯಲ್ಲಿ ಶಾಸಕರ ಅನುಪಸ್ಥಿತಿ ಎದ್ದುಕಾಣುತ್ತಿತ್ತು.