Advertisement

ಜಿಲ್ಲೆಯ 4-5 ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲುತ್ತೆ: ಸಚಿವ ಕೆ.ಸಿ.ನಾರಾಯಣಗೌಡ

04:24 PM May 07, 2022 | Team Udayavani |

ಮಂಡ್ಯ: “ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ವಿಚಾರವೇ ಇಲ್ಲ. ಇದು ಕೇವಲ ವಿರೋಧ ಪಕ್ಷದವರಷ್ಟೇ ಮಾತನಾಡುತ್ತಿದ್ದಾರೆ’ ಎಂದು ರೇಷ್ಮೆ ಹಾಗೂ ಕ್ರೀಡಾ ಸಚಿವ ಕೆ.ಸಿ.ನಾರಾಯಣಗೌಡ ತಿಳಿಸಿದರು.

Advertisement

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮಲ್ಲಿ ಯಾವುದೇ ಬದಲಾವಣೆ ಇಲ್ಲ. ನಮ್ಮ ಹೈಕಮಾಂಡ್‌ನ‌ಲ್ಲಿಯೂ ಬದಲಾವಣೆ ಕುರಿತು ಚರ್ಚೆ ನಡೆದಿಲ್ಲ ಎಂದರು. ನಾವು ಕೇವಲ ಅಭಿವೃದ್ಧಿ ಕಡೆ ಗಮನಹರಿಸುತ್ತಿದ್ದೇವೆ. ವಿರೋಧ ಪಕ್ಷದವರು ಟೀಕೆ ಟಿಪ್ಪಣಿ ಬಿಟ್ಟು, ಅಭಿವೃದ್ಧಿಗೆ ಕೈಜೋಡಿಸಬೇಕು. ಕಳ್ಳಕಾಕರ ಬಗ್ಗೆ ಮಾಹಿತಿ ಇದ್ದರೆ ಕೊಡಿ, ನಾವು ಅವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ. ನಮಗೆ 24 ಗಂಟೆ ಮಾಡಲು ಕೆಲಸವಿದೆ. ಆದರೆ, ವಿರೋಧ ಪಕ್ಷದವರಿಗೆ ಟೀಕೆ ಮಾಡೋದು ಬಿಟ್ಟರೆ ಬೇರೆ ಕೆಲಸ ಇಲ್ಲ ಎಂದು ಕಿಡಿಕಾರಿದರು.

ಪಿಎಸ್‌ಐ ಪ್ರಕರಣ ಮುಚ್ಚಿ ಹಾಕುವ ಪ್ರಶ್ನೆ ಇಲ್ಲ: ಪಿಎಸ್‌ಐ ನೇಮಕಾತಿ ಅಕ್ರಮ ವಿಚಾರದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಈ ಪ್ರಕರಣವನ್ನು ಮುಚ್ಚಿ ಹಾಕುವ ಪ್ರಶ್ನೆಯೇ ಇಲ್ಲ. ನಮ್ಮ ಪಕ್ಷದವರಾಗಲಿ, ಹೊರಗಿನವರಾಗಲಿ, ಈಗಾಗಲೇ ಬಂಧಿಸಲಾಗಿದೆ. ತನಿಖೆ ಕೂಡ ನಡೆಯುತ್ತಿದೆ. ಮುಚ್ಚಿ ಹಾಕುವುದಿದ್ದರೆ ಅವರನ್ನು ಬಂಧಿಸಿ ತನಿಖೆ ಮಾಡುತ್ತಿರಲಿಲ್ಲ. ಸುಮ್ಮನೆ ರಾಜಕಾರಣ ಮಾಡುವುದನ್ನು ಬಿಟ್ಟು ಅಭಿವೃದ್ಧಿಗೆ ಸಹಕರಿಸಬೇಕು. ಯಾರ ಮೇಲೆ ಆರೋಪ ಬಂದರೆ ಅಂಥವರನ್ನು ಕರೆದು ವಿಚಾರಣೆ ಮಾಡಲಾಗುತ್ತಿದೆ. ಭಾಗಿಯಾಗಿಲ್ಲದವರನ್ನು ಬಿಟ್ಟು ಕಳುಹಿಸಲೇಬೇಕು. ಇದರ ಬಗ್ಗೆ ದಾಖಲೆಗಳು ಇದ್ದರೆ ವಿರೋಧ ಪಕ್ಷದವರು ಕೊಡಲಿ ಎಂದು ಹೇಳಿದರು.

ಬಿಜೆಪಿ ಕೇಂದ್ರದ ನಿಯಂತ್ರಣದಲ್ಲಿದೆ: ಸಚಿವರಾದ ಅಶ್ವತ್ಥನಾರಾಯಣ್‌ ಆಗಲಿ, ನಾನಾಗಲಿ, ಬೇರೆ ಯಾರೆ ಆಗಲಿ, ಎಲ್ಲರಿಗೂ ಒಂದೇ ಕಾನೂನು. ಬಿಜೆಪಿ ಕೇಂದ್ರದ ಕಂಟ್ರೋಲ್‌ನಲ್ಲಿದೆ. ನಾವು ಏನು ಮಾಡುತ್ತಿದ್ದೇವೆ ಎಂದು ವರಿಷ್ಠರು ಕಣ್ಣಿಟ್ಟಿದ್ದಾರೆ. ಯಾವುದೇ ಕಾರಣಕ್ಕೂ ನಾವು ಅಂಥ ತಪ್ಪುಗಳನ್ನು ಮಾಡಲು ಬಿಡಲ್ಲ ಎಂದು ತಿಳಿಸಿದರು.

ಮುಜುಗರವೇಕೆ?: ಅನುದಾನ ಕೇಳಲು ಏಕೆ ಮುಜುಗರ ಪಡಬೇಕು. ಬಂದು ಕೇಳಲಿ, ತಾಲೂಕುಗಳನ್ನು ಅಭಿವೃದ್ಧಿ ಮಾಡೋಣ. ಅದನ್ನು ಬಿಟ್ಟು ಸುಮ್ಮನೆ ಟೀಕೆ ಟಿಪ್ಪಣಿ ಮಾಡೋದನ್ನು ನಿಲ್ಲಿಸಬೇಕು. ಮುಂದಿನ ಬಾರಿ ಜಿಲ್ಲೆಯ 4-5 ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲುತ್ತೆ. ಅಷ್ಟೇ ಅಲ್ಲ ಲೋಕಸಭಾ ಚುನಾವಣೆಯನ್ನೂ ಗೆಲ್ಲುತ್ತೇವೆ. ಮಂಡ್ಯ ಜಿಲ್ಲೆಯನ್ನು ಮಾದರಿ ಜಿಲ್ಲೆಯನ್ನಾಗಿ ಮಾಡುತ್ತೇವೆ ಎಂದರು.

Advertisement

ಬಿಜೆಪಿಗೆ ಹೆಸರು ಬರುತ್ತದೆಂದು ಅನುದಾನ ಕೇಳುತ್ತಿಲ್ಲ: ಕೆ.ಆರ್‌.ಪೇಟೆ ಕ್ಷೇತ್ರಕ್ಕೆ ಮಾತ್ರ ಅನುದಾನ ನೀಡಲಾಗುತ್ತಿದೆ ಎಂಬ ಜೆಡಿಎಸ್‌ ಶಾಸಕರ ಆರೋಪಕ್ಕೆ ಸಚಿವ ನಾರಾಯಣಗೌಡ ತಿರುಗೇಟು ನೀಡಿದರು. ಮಗು ಅಳದೆ ಯಾರೂ ಹಾಲನ್ನು ಕೊಡಲ್ಲ. ನಾನು ಬಿಜೆಪಿ ಶಾಸಕನಾಗಿ ಕ್ಷೇತ್ರದ ಅಭಿವೃದ್ಧಿಗೆ ಟಾರ್ಗೆಟ್‌ ಇಟ್ಟುಕೊಂಡು ಕೆಲಸ ಮಾಡುತ್ತಿದ್ದೇನೆ. ಬೇರೆ ಕ್ಷೇತ್ರದ ಶಾಸಕರೂ ಹೋರಾಟ ಮಾಡ ಬೇಕು. ಅವರು ಹೋರಾಟ ಮಾಡದೇ ಅನುದಾನ ಸಿಗಲ್ಲ ಎಂದರು.

ಬಿಜೆಪಿಯವರ ಬಳಿ ಅನುದಾನ ಕೇಳಲು ಜಿಲ್ಲೆಯ ಜೆಡಿಎಸ್‌ ಶಾಸಕರಿಗೆ ಮುಜುಗರವಾಗುತ್ತಿದೆ. ಇವರು ಮುಖ್ಯಮಂತ್ರಿ ಬಳಿ ಹೋಗಿ ಅನುದಾನ ಕೇಳುತ್ತಿಲ್ಲ. ನಾನು ತಾಲೂಕು ಅಭಿವೃದ್ಧಿ ಕನಸಿಟ್ಟುಕೊಂಡು ರಾಜಕಾರಣಕ್ಕೆ ಬಂದಿದ್ದೇನೆ. ಆದರೆ, ಅದು ಸಹಕಾರ ಆಗದಿದ್ದಕ್ಕೆ ಪಕ್ಷಾಂತರ ಮಾಡಿದ್ದೇನೆ. ಜೆಡಿಎಸ್‌ ಶಾಸಕರಿಗೆ ರಾಜಕಾರಣ ಮಾಡುವುದು ಬಿಟ್ಟರೆ ಅಭಿವೃದ್ಧಿ ಮಾಡುವ ಯೋಚನೆ ಇಲ್ಲ. ಅಭಿವೃದ್ಧಿಯಾದರೆ ಬಿಜೆಪಿಗೆ ಹೆಸರು ಬರುತ್ತೆ ಅಂತ ಸರ್ಕಾರದ ಬಳಿ ಅನುದಾನ ಕೇಳುತ್ತಿಲ್ಲ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next