Advertisement

ಕ್ರೀಡೆಗೆ ದೇಶದ ಜಿಡಿಪಿಯ ಒಂದರಷ್ಟು ಅನುದಾನ ಮೀಸಲಿಡಬೇಕು: ಸಚಿವ ಡಾ.ನಾರಾಯಣಗೌಡ

12:49 PM Jun 24, 2022 | Team Udayavani |

ಕೆವಾಡಿಯಾ: ಯುವ ಸಬಲೀಕರಣ ಮತ್ತು ಕ್ರೀಡೆಗೆ ದೇಶದ ಜಿಡಿಪಿಯ ಒಂದರಷ್ಟು ಅನುದಾನವನ್ನು ಮೀಸಲಿಡುವಂತೆ ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವ ಡಾ.ನಾರಾಯಣಗೌಡ ಸಲಹೆ ನೀಡಿದ್ದಾರೆ.

Advertisement

ಗುಜರಾತ್ ನ ಕೆವಾಡಿಯಾದಲ್ಲಿ ನಡೆಯುತ್ತಿರುವ ಎರಡು ದಿನಗಳ ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವರುಗಳ ರಾಷ್ಟ್ರೀಯ ಸಮ್ಮೇಳನದಲ್ಲಿ ಸಚಿವ ಡಾ.ನಾರಾಯಣಗೌಡ ಪಾಲ್ಗೊಂಡಿದ್ದಾರೆ. ಈ ಸಮ್ಮೇಳನದಲ್ಲಿ ದೇಶದಲ್ಲಿ ಕ್ರೀಡೆ   ಅಭಿವೃದ್ಧಿ ಹಾಗೂ ಕ್ರೀಡಾ ಚಟುವಟಿಕೆಗಳ ಉತ್ತೇಜನ ಸೇರಿದಂತೆ ಹಲವು ವಿಚಾರಗಳ ಕುರಿತು ಸಮಗ್ರವಾಗಿ ಚರ್ಚಿಸಲಾಗುತ್ತಿದೆ.

ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಸುಧಾರಣೆಗೆ ಸಂಬಂಧಿಸಿದಂತೆ ಹಲವು ವಿಚಾರಗಳ ಬಗ್ಗೆ ಪ್ರಸ್ತಾಪಿಸಿದರು. ಜೊತೆಗೆ ಯುವ ಸಬಲೀಕರಣ ಮತ್ತು ಕ್ರೀಡೆಗೆ ದೇಶದ ಜಿಡಿಪಿಯ ಒಂದರಷ್ಟು ಅನುದಾನವನ್ನು ಮೀಸಲಿಡುವಂತೆ ಸಚಿವರು ಸಲಹೆ ನೀಡಿದರು.

ಇದರ ಜೊತೆಗೆ ರಾಜ್ಯದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಲ್ಲಿ ಕೈಗೊಂಡಿರುವ ಹಲವು ಯೋಜನೆಗಳ ಬಗ್ಗೆಯೂ ಕ್ರೀಡಾ ಸಚಿವರುಗಳ ರಾಷ್ಟ್ರೀಯ ಸಮ್ಮೇಳನದಲ್ಲಿ ಪ್ರಸ್ತಾಪಿಸಿದರು. ರಾಜ್ಯದಲ್ಲಿ ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್ ಕ್ರೀಡಾಕೂಟವನ್ನು ಯಶಸ್ವಿಯಾಗಿ ನೆರವೇರಿಸಿದ್ದು, ಇದಕ್ಕೆ ರಾಜ್ಯ ಸರ್ಕಾರದಿಂದ ಕೈಗೊಂಡಿದ್ದ ಕ್ರಮಗಳ ಬಗ್ಗೆ ವಿವರಿಸಿದರು. ಇದಲ್ಲದೇ, ಅಮೃತ ಕ್ರೀಡಾ ದತ್ತು ಯೋಜನೆ, ಕ್ರೀಡಾ ಅಂಕಣ ಯೋಜನೆ ಸೇತಿದಂತೆ ಕ್ರೀಡೆ ಹಾಗೂ ಕ್ರೀಡಾಪಟುಗಳಿಗೆ ಪ್ರೋತ್ಸಾಹಿಸಲು ರೂಪಿಸಿರುವ ಯೋಜನೆಗಳ ಬಗ್ಗೆ ರಾಷ್ಟ್ರೀಯ ಸಮ್ಮೇಳನದಲ್ಲಿ ಸಚಿವ ಡಾ.ನಾರಾಯಣಗೌಡ ಅವರು ಮಾಹಿತಿ ನೀಡಿದರು.

ಅನುರಾಗ್ ಠಾಕೂರ್ ಶ್ಲಾಘನೆ: ಇದೇ ವೇಳೆ ಕೇಂದ್ರ ಸಚಿವ ಅನುರಾಗ್ ಠಾಕೂರ್ ಅವರು ಕರ್ನಾಟಕ ಸರ್ಕಾರದ ಕ್ರೀಡಾ ಇಲಾಖೆಯ ಕಾರ್ಯವೈಖರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್ 2021ನ್ನು ಬಹಳ ಅದ್ಭುತವಾಗಿ ಆಯೋಜಿಸಿದ್ದರು. ಇದರ ಜೊತೆಗೆ ಕರ್ನಾಟಕ ಸರ್ಕಾರ ಕ್ರೀಡೆಗೆ ಬಹಳ ಮಹತ್ವವನ್ನು ನೀಡಿದೆ ಎಂದು ಅನುರಾಗ್ ಸಿಂಗ್ ಠಾಕೂರ್ ಅವರು ರಾಜ್ಯ ಸರ್ಕಾರವನ್ನು ಶ್ಲಾಘಿಸಿದರು.

Advertisement

ಇದನ್ನೂ ಓದಿ:ರಾಷ್ಟ್ರಪತಿ ಹುದ್ದೆಯಲ್ಲಿ ಜಾತಿ ನೋಡಿ ಬಿಜೆಪಿ ಸಂವಿಧಾನಕ್ಕೆ ಅಗೌರವ ತೋರಿದೆ: ಮಹಾದೇವಪ್ಪ

ಎರಡು ರಾಷ್ಟ್ರೀಯ ಸಮ್ಮೇಳನಕ್ಕೆ ಕೇಂದ್ರ ಸರ್ಕಾರದ ವಾರ್ತಾ, ಯುವ ವ್ಯವಹಾರ ಮತ್ತು ಕ್ರೀಡಾ ಸಚಿವರಾದ ಅನುರಾಗ್ ಠಾಕೂರ್, ಕೇಂದ್ರ ಕ್ರೀಡಾ ಖಾತೆ ರಾಜ್ಯ ಖಾತೆ ಸಚಿವ ನಿಶಿತ್ ಪ್ರಮಾಣಿಕ್ ಚಾಲನೆ ನೀಡಿದ್ದು, ದೇಶದ ಎಲ್ಲಾ ರಾಜ್ಯಗಳ ಕ್ರೀಡಾ ಸಚಿವರು ಹಾಗೂ ಅಧಿಕಾರಿಗಳು ಪಾಲ್ಗೊಂಡಿದ್ದಾರೆ.

ಕರ್ನಾಟಕದಿಂದ ಸಚಿವ ಡಾ.ನಾರಾಯಣಗೌಡ ಅವರೊಂದಿಗೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಆಯುಕ್ತರಾದ ಗೋಪಾಲಕೃಷ್ಣ ಹಾಗೂ ಸಚಿವರ ಆಪ್ತ ಕಾರ್ಯದರ್ಶಿ ಪ್ರಭಾಕರ್ ಅವರು ಸಮ್ಮೇಳನದಲ್ಲಿ ಭಾಗವಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next