ಮೈಸೂರು: ಮಹಾರಾಷ್ಟ್ರದಲ್ಲಿ ಒಂದು ಒಮಿಕ್ರಾನ್ ರೂಪಾಂತರ ಹೊಸ ತಳಿ ಪ್ರಕರಣ ಪತ್ತೆಯಾಗಿದ್ದು, ಗಡಿ ಜಿಲ್ಲೆಗಳಿಗೆ ಮಾರ್ಗಸೂಚಿ ನೀಡಲಾಗಿದೆ. ಕಟ್ಟೆಚ್ಚರ ವಹಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಹೀಗಾಗಿ ರಾಜ್ಯದಲ್ಲಿ ಯಾವುದೇ ಆತಂಕವಿಲ್ಲ ಎಂದು ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಸಚಿವ ಡಾ| ಕೆ. ಸುಧಾಕರ್ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಯಾವುದೇ ಆತಂಕವಿಲ್ಲ, ಅಗತ್ಯ ಮುನ್ನೆಚ್ಚರಿಕೆ ವಹಿಸಲಾಗಿದೆ. ಆದಷ್ಟು ಬೇಗ ಜನರು ಮೂರನೇ ಡೋಸ್ ಪಡೆಯುವುದು ಒಳ್ಳೆಯದು. ಮಾಸ್ಕ್ ಕಡ್ಡಾಯದ ಬಗ್ಗೆ ಇನ್ನೂ ನಿರ್ಧಾರವಾಗಿಲ್ಲ ಎಂದರು.
ಖಾಲಿ ಹುದ್ದೆ ಶೀಘ್ರ ಭರ್ತಿ :
ಆರೋಗ್ಯ ಇಲಾಖೆಯಲ್ಲಿ ಖಾಲಿಯಿರುವ ಹುದ್ದೆಗಳನ್ನು ಶೀಘ್ರದಲ್ಲೇ ಭರ್ತಿ ಮಾಡಿಕೊಳ್ಳಲಾಗುವುದು ಎಂದ ಸಚಿವರು, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳಿಗೆ ವೈದ್ಯರು, ಸಿಬಂದಿ ನೇಮಕಕ್ಕೆ ಈಗಾಗಲೇ ಅನುಮತಿ ನೀಡಲಾಗಿದೆ. ಕೆಲವು ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲಾಗುವುದು ಎಂದು ತಿಳಿಸಿದರು.
ತಮ್ಮ ವಿರುದ್ಧ ಮಾಜಿ ಸಿಎಂ ಸಿದ್ದರಾಮಯ್ಯ ಏಕವಚನದಲ್ಲಿ ವಾಗ್ಧಾಳಿ ನಡೆಸಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯ ಎಲ್ಲವನ್ನೂ ಕಲಿತಿದ್ದಾರೆ. ಆದರೆ ಬಹುವಚನ ಮಾತ್ರ ಕಲಿತಿಲ್ಲ. ಅವರು ಏಕವಚನದಲ್ಲಿ ಮಾತನಾಡುವುದರಲ್ಲಿ ಯಾವುದೇ ವಿಶೇಷ ಇಲ್ಲ ಎಂದರು.