ಗಂಗಾವತಿ: ಇತಿಹಾಸ ಪ್ರಸಿದ್ಧ ಕಿಷ್ಕಿಂದಾ ಅಂಜನಾದ್ರಿ ಕ್ಷೇತ್ರದ ಸಮಗ್ರ ಅಭಿವೃದ್ಧಿ ಹಾಗೂ ಪ್ರವಾಸಿಗರು ಭಕ್ತರಿಗೆ ಮೂಲಸೌಕರ್ಯ ಕಲ್ಪಿಸಲು ಏಪ್ರಿಲ್ ಮೊದಲ ವಾರ ಪ್ರವಾಸೋದ್ಯಮ, ಸಾಂಸ್ಕೃತಿಕ, ಅರಣ್ಯ ಇಲಾಖೆ ಅಧಿಕಾರಿಗಳ ಜತೆ ಕಿಷ್ಕಿಂದಾ ಅಂಜನಾದ್ರಿ ಬೆಟ್ಟ ಹತ್ತಿ ಅಂಜನಾದ್ರಿ ಅಗತ್ಯವಿರುವ ಕೆಲಸ ಕಾರ್ಯಗಳ ಕುರಿತು ಚರ್ಚೆ ಮಾಡಿ ಅಗತ್ಯವಿರುವ ಹಣ ಮತ್ತು ಆದೇಶಗಳನ್ನು ಮಾಡಲಾಗುತ್ತದೆ ಎಂದು ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ಯ ಇಲಾಖೆಯ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.
ಅವರು ಪತ್ನಿ ವಿಜಯಲಕ್ಷ್ಮಿ ಜತೆ ಕಿಷ್ಕಿಂದಾ ಅಂಜನಾದ್ರಿ ಬೆಟ್ಟಕ್ಕೆ ಭೇಟಿ ನೀಡಿ ಹೋಮ ಹವನ ಪೂಜೆ ನೆರವೇರಿಸಿ ಸುದ್ದಿಗಾರರ ಜತೆ ಮಾತನಾಡಿದರು.
ಇದನ್ನೂ ಓದಿ:ಸಿದ್ದಾರಮಯ್ಯ ಜೊತೆ ದಿಲ್ಲಿಗೆ ಹೋಗಿ ಡಿಕೆಶಿ ವಿರುದ್ಧ ದೂರು ನೀಡುತ್ತೇನೆ: ಅಖಂಡ ಶ್ರೀನಿವಾಸ
ಅಯೋಧ್ಯೆಯಷ್ಟೇ ಕಿಷ್ಕಿಂದಾ ಅಂಜನಾದ್ರಿ ಪವಿತ್ರ ಶ್ರದ್ದಾಕೇಂದ್ರವಾಗಿದ್ದು ಇಲ್ಲಿ ನಿತ್ಯವೂ ಸಾವಿರಾರು ಜನರು ಆಗಮಿಸುತ್ತಿದ್ದು ಇಲ್ಲಿ ಮೂಲಸೌಕರ್ಯ ಕಲ್ಪಿಸಲು ಕಳೆದ ಬಜೆಟ್ ನಲ್ಲಿ 20 ಕೋಟಿ ಮಂಜೂರಾಗಿದೆ. ಅಭಿವೃದ್ಧಿ ಕಾರ್ಯ ನಡೆದಿದ್ದು ಏಪ್ರಿಲ್ ಮೊದಲ ವಾರ ಪ್ರವಾಸೋದ್ಯಮ, ಕನ್ನಡ ಸಂಸ್ಕೃತಿ, ಅರಣ್ಯ ಇಲಾಖೆಯ ಸಚಿವರು ಅಧಿಕಾರಿಗಳ ಜತೆ ಅಂಜನಾದ್ರಿ ಹತ್ತಿ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಚರ್ಚೆ ನಡೆಸಲಾಗುತ್ತದೆ ಎಂದರು.
ತಾ.ಪಂ.ರದ್ದಿಲ್ಲ: ಎರಡು ಹಂತದಲ್ಲಿ ಪಂಚಾಯತ್ ರಾಜ್ಯ ಸ್ಥಳೀಯ ಸಂಸ್ಥೆಗಳ ಆಡಳಿತ ಇರಬೇಕೆಂಬ ಅಭಿಪ್ರಾಯ ವ್ಯಕ್ತವಾಗಿದೆ. ಆದ್ದರಿಂದ ತಾ.ಪಂ ರದ್ದು ಮಾಡುವ ಚಿಂತನೆ ಇತ್ತು. ಸೂಕ್ತ ಕಾಯ್ದೆ ಇಲ್ಲದ ಕಾರಣ ಪ್ರಸಕ್ತ ಸಂದರ್ಭದಲ್ಲಿ ತಾ.ಪಂ ಚುನಾವಣೆ ನಡೆಸಿ ಮುಂದೆ ಕಾಯ್ದೆ ತಿದ್ದುಪಡಿ ಮಾಡಿ ಮುಂದಿನ ಭಾರಿ ತಾ.ಪಂ ರದ್ದು ಮಾಡಲಾಗುತ್ತದೆ ಎಂದರು.
ಸಂಸದ ಕರಡಿ ಸಂಗಣ್ಣ, ಶಾಸಕರಾದ ಪರಣ್ಣ ಮುನವಳ್ಳಿ, ದಡೇಸೂಗೂರು ಬಸವರಾಜ, ಕಾಡಾ ಅಧ್ಯಕ್ಷ ತಿಪ್ಪೇರುದ್ರಸ್ವಾಮಿ, ಹಗರಿಬೊಮ್ಮನಹಳ್ಳಿ ಮಾಜಿ ಶಾಸಕ ನೇಮಿರಾಜನಾಯ್ಕ್ ಮುಖಂಡರಾದ ಎಚ್.ಗಿರೇಗೌಡ ,ವಿಠಲಾಪೂರ ಯಮನಪ್ಪ, ಸಣ್ಣಕ್ಕಿ ನೀಲಪ್ಪ, ಅಯ್ಯಾಳಿ ತಿಮ್ಮಪ್ಪ, ರಾಜೇಶ್ವರಿ, ಸಿದ್ದರಾಮ ಸ್ವಾಮಿ ಸಿಇಒ ರಘು ನಂದನ ಮೂರ್ತಿ, ಸಚಿವರ ಆಪ್ತಕಾರ್ಯದರ್ಶಿ ಮಂಜುನಾಥ, ಡಿಎಸ್ಪಿ ರುದ್ರೇಶ ಉಜ್ಜನ ಕೊಪ್ಪ, ಸಿಪಿಐ ಉದಯ ರವಿ, ಪಿಎಸ್ಐ ಜೆ.ದೊಡ್ಡಪ್ಪ, ಇಒ ಡಾ.ಮೋಹನ್, ತಹಸೀಲ್ದಾರ್ ಎಂ.ರೇಣುಕಾ ಇದ್ದರು.