Advertisement

ಸುಮ್ಮನೆ ನೀವು ಯಾಕೆ ಸಾಯ್ತೀರಾ, ಕಾರ್ಯಕರ್ತರನ್ಯಾಕೆ ಸಾಯಿಸ್ತೀರಾ?: ಕೈ ನಾಯಕರಿಗೆ ಈಶ್ವರಪ್ಪ

02:14 PM Jan 08, 2022 | Team Udayavani |

ಶಿವಮೊಗ್ಗ: “ಅಪ್ಪಾ ಸಾಯಬೇಡ್ರಿ ಅಂತೀವಿ, ಇಲ್ಲ ನಾವು ಸಾಯೋರೇ ಅಂತಾ ಚಂಡಿ ಹಠ ಹಿಡಿದ್ರೆ ಏನು ಮಾಡೋಣ..? ಇಬ್ಬರೇ ಯಾಕ್ ಹೋಗಿ ಸಾಯ್ತಿರಿ? ಸಿದ್ದರಾಮಯ್ಯ, ಡಿ ಕೆ ಶಿವಕುಮಾರ್ ಅವರಿಗೆ ಪ್ರಾರ್ಥನೆ ಮಾಡುತ್ತೇನೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೀವು ಇಬ್ಬರೇ ಪಾದಯಾತ್ರೆ ಹೋಗುತ್ತೇವೆ ಎನ್ನುತ್ತಿದ್ದೀರಿ, ಆದರೆ ನಿಮ್ಮ‌ ಕಾರ್ಯಕರ್ತರು ಬಿಡುವುದಿಲ್ಲ. ನಾಳೆ ತಾ.ಪಂ., ಜಿ.ಪಂ. ಅಸ್ಲೆಂಬಿ ಚುನಾವಣೆಯಿದೆ. ಇವರ ಎದುರಿಗೆ ಶೋ ಮಾಡಬೇಕೆಂದು ತುಂಬಾ ಜನ ಬರುತ್ತಾರೆ. ಸುಮ್ಮಸುಮ್ಮನೆ ನೀವು ಏಕೆ ಸಾಯುತ್ತೀರಿ, ಅವರನ್ನು ಏಕೆ ಸಾಯಿಸುತ್ತೀರಾ ಎಂದು ಸಿದ್ದರಾಮಯ್ಯ ಮತ್ತು ಡಿಕೆಶಿ ಗೆ ಕುಟುಕಿದರು.

ನಾವು- ನೀವು ಒಟ್ಟಿಗೆ ಸಂತೋಷವಾಗಿ ಜೀವನ ಮಾಡೋಣ ಎಂದು ಪ್ರಾರ್ಥನೆ ಮಾಡುತ್ತೇನೆ. ರಾಜಕಾರಣ ಮಾಡುವ ಸಲುವಾಗಿ ಪಾದಯಾತ್ರೆ ಮಾಡಲೇಬೇಕೆಂದು ಹಠ ಹಿಡಿದರೆ ನನ್ನ ಅಭ್ಯಂತರವೇನಿಲ್ಲ. ಪ್ರಜಾಪ್ರಭುತ್ವದಲ್ಲಿ ವಿರೋಧ ಪಕ್ಷಕ್ಕೆ ಹೋರಾಟ ಮಾಡುವ ಅವಕಾಶ ಇದೆ. ರಾಜಕಾರಣಕ್ಕೋಸ್ಕರ ಕಾಂಗ್ರೆಸ್ ಇದನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ರಾಜ್ಯದ ಜನ ಯೋಚನೆ ಮಾಡ್ತಿದ್ದಾರೆ ಎಂದರು.

ಇದನ್ನೂ ಓದಿ:ಕೋವಿಡ್ ಎಲ್ಲಿದೆ ? ನಾವು ರಿಯಾಲಿಟಿ ಚೆಕ್ ನಡೆಸಿದ್ದೇವೆ : ಡಿ.ಕೆ.ಶಿವಕುಮಾರ್

ಅಧಿಕಾರದಲ್ಲಿದ್ದಾಗ ಯಾಕೆ ಕೃಷ್ಣ, ಕಾವೇರಿ, ಮೇಕೆದಾಟು ಮರೆತು ಹೋಗಿತ್ತು. ಕೇಂದ್ರದಲ್ಲಿ ಸಾಕಷ್ಟು ವರ್ಷ ಅಧಿಕಾರದಲ್ಲಿ ಇದ್ದಿರಿ, ರಾಜ್ಯದಲ್ಲಿ ಆಡಳಿತ ನಡೆಸಿದವರು ನೀವೇ. ಆಗ ಯಾಕೆ ಕೃಷ್ಣ, ಕಾವೇರಿ, ಮೇಕೆದಾಟು ಮಾಡಲಿಲ್ಲ. ಕೇಂದ್ರದಲ್ಲಿ, ರಾಜ್ಯದಲ್ಲಿ ಬಿಜೆಪಿ ಸರಕಾರ ಬರುತ್ತಿದ್ದಂತೆ ನಿಮಗೆ ಕೃಷ್ಣ, ಕಾವೇರಿ, ಮೇಕೆದಾಟು ನೆನಪಾಗಿವೆ. ನೀವು ಹೋರಾಟ ಮಾಡಿ ನನ್ನ ಅಭ್ಯಂತರ ಇಲ್ಲ. ನೀವು ಹೋರಾಟ ಮಾಡುತ್ತಿರಬೇಕು, ನಾವು ಅಧಿಕಾರದಲ್ಲಿ ಇರಬೇಕು. ನೀವು ವಿರೋಧ ಪಕ್ಷದಲ್ಲಿ ಇರಬೇಕು ಎಂದರು.

Advertisement

ಈ ಹೋರಾಟವನ್ನು ಕೋವಿಡ್ ಆದ ಮೇಲೆ ಮಾಡಿ, ನೀವು ಬದುಕಿರಿ. ಸ್ನೇಹಿತರಾಗಿ ಹೇಳುತ್ತಿದ್ದೇನೆ. ದೇಶದಲ್ಲಿ, ರಾಜ್ಯದಲ್ಲಿ ವಿರೋಧ ಪಕ್ಷ ಇರಬೇಕು. ಇವತ್ತು ವಿರೋಧ ಪಕ್ಷವೇ ಇಲ್ಲದ ಹಾಗಾಗಿದೆ. ಅಧಿಕೃತವಾಗಿ ಕೇಂದ್ರದಲ್ಲಿ ವಿಪಕ್ಷ ಇಲ್ಲ. ರಾಜ್ಯದಲ್ಲಿ ನಾಳೆ ಚುನಾವಣೆ ಎದುರಾದರೆ ಅಧಿಕೃತವಾಗಿ ಕಾಂಗ್ರೆಸ್ ಪಕ್ಷ ವಿಪಕ್ಷದಲ್ಲಿ ಇರುವ ಪರಿಸ್ಥಿತಿ ಇಲ್ಲ ಎಂದು ಈಶ್ವರಪ್ಪ ಕುಟುಕಿದರು.

ನೀವು ಜೈಲಿಗೆ ಬೇಕಾದರೂ ಕಳುಹಿಸಿ, ನಾವು ಮಾಡೇ ಮಾಡುವವರು ಎಂದಿದ್ದೀರಿ. ಇಂತಹ ಪದಗಳನ್ನು ನಾವು ಬಹಳ‌ ಕೇಳಿದ್ದೀವಿ. ಇದು ಪೌರುಷದ ಮಾತುಗಳು. ಕೋವಿಡ್ ಸಂದರ್ಭದಲ್ಲಿ ಪೌರುಷದ ಮಾತು ಬೇಡ. ಕೋವಿಡ್ ಹೋದ ಮೇಲೆ ಪೌರುಷದ ಮಾತು ಹೇಳಿ ನಾವು ಬೇಡ ಅನ್ನುವುದಿಲ್ಲ ಎಂದರು.

ನನ್ನ ಮಾತು ಅವರಿಗೆ ಎಷ್ಟರ ಮಟ್ಟಿಗೆ ಹಿಡಿಸಿತ್ತೋ, ಬೇಜಾರು ಆಗುತ್ತದೋ‌ ಗೊತ್ತಿಲ್ಲ. ಎಲ್ಲಾ ಹಿರಿಯರು ನಮ್ಮ ರಾಜ್ಯದ ಆಸ್ತಿ, ದೇವೇಗೌಡರು, ಯಡಿಯೂರಪ್ಪ, ಸಿದ್ದರಾಮಯ್ಯ ಇವರೆಲ್ಲಾ ನಮ್ಮ ರಾಜ್ಯದ ಆಸ್ತಿ. ಇವರು ಯಾರೂ ಕೂಡಾ ಜನರ ವಿರೋಧ ಮಾಡಿದವರು ಅಲ್ಲ. ನಮ್ಮ ರಾಜ್ಯದ ಆಸ್ತಿ ಕಳೆದುಕೊಳ್ಳಲು ನಮಗೆ ಇಷ್ಟವಿಲ್ಲ. ಕೋವಿಡ್ ಸಂದರ್ಭದಲ್ಲಿ ನಿಮ್ಮ ಹೋರಾಟ ನಿಲ್ಲಿಸಿ ಎಂದು ಕೈ ಮುಗಿದು ಪ್ರಾರ್ಥನೆ ಮಾಡುತ್ತೇನೆ. ಚುನಾವಣೆ ಬರುವವರೆಗು ಹೋರಾಟ ಮಾಡ್ತೀವಿ, ಆಮೇಲೆ ಜನರಿಗೆ ಏನಾದರೂ ಆಗಲಿ ಎನ್ನುವುದು ನಿಮ್ಮ ಮನೋಭಾವನೆ. ಜನರ ಬಗ್ಗೆ, ಮತದಾರರ ಬಗ್ಗೆ ನಿಮಗೆಷ್ಟು ಆಸಕ್ತಿ ಇದೆಯೋ, ನಮಗೆ ಅದಕ್ಕಿಂತ 10 ಪಟ್ಟು ಆಸಕ್ತಿಯಿದೆ ಎಂದು ಈಶ್ವರಪ್ಪ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next