ಉಡುಪಿ: ಆರ್ಥಿಕತೆ, ತಂತ್ರಜ್ಞಾನ, ಡಿಜಿಟಲೈಜೇಶನ್ -ಹೀಗೆ ಎಲ್ಲ ಕ್ಷೇತ್ರಗಳಲ್ಲೂ ಭಾರತ ಗಣನೀಯ ಸಾಧನೆ ಮಾಡುತ್ತಿದೆ. ಯುವ ಜನತೆ ತಮ್ಮ ಕೌಶಲ, ಪ್ರತಿಭೆಯನ್ನು ಜಾಗತಿಕ ಕಾರ್ಯಕ್ಷೇತ್ರವಾಗಿ ಪರಿಗಣಿಸಿ ಮುನ್ನಡೆದರೆ ಅಮೃತ ಕಾಲದಲ್ಲಿ ಭಾರತ ವಿಶ್ವವನ್ನು ಮುನ್ನಡೆಸಲಿದೆ ಎಂದು ಕೇಂದ್ರ ವಿದೇಶಾಂಗ ಸಚಿವ ಡಾ| ಎಸ್. ಜೈಶಂಕರ್ ಹೇಳಿದರು.
ಮಾಹೆ ವಿ.ವಿ.ಯ ಟಿ.ಎ.ಪೈ ಮ್ಯಾನೇಜ್‌ಮೆಂಟ್ ಇನ್‌ಸ್ಟಿಟ್ಯೂಟ್ (ಟ್ಯಾಪ್ಮಿ) ವತಿಯಿಂದ ಅಂಬಲಪಾಡಿಯ ಅಮೃತ್ ಗಾರ್ಡನ್‌ನಲ್ಲಿ ರವಿವಾರ ಹಮ್ಮಿಕೊಂಡಿದ್ದ 29ನೇ ಲೀಡರ್‌ಶಿಪ್ ಉಪನ್ಯಾಸದಲ್ಲಿ “ಅಮೃತ ಕಾಲದಲ್ಲಿ ಭಾರತ’ ಎಂಬ ವಿಷಯದ ಮೇಲೆ ಅವರು ವಿಶೇಷ ಉಪನ್ಯಾಸ ನೀಡಿದರು.
ಕಳೆದ ಒಂದು ದಶಕದಲ್ಲಿ ದೇಶದಲ್ಲಿ ಬಡತನದ ಪ್ರಮಾಣ ಕುಸಿತವಾಗಿದೆ, ಮಾನವ ಅಭಿವೃದ್ಧಿ ಸೂಚ್ಯಂಕ ಹೆಚ್ಚಿದೆ. ಬೇಟಿ ಪಡಾವೊ-ಬೇಟಿ ಬಚಾವೋ, ಸ್ವತ್ಛಭಾರತ ಕಾರ್ಯಕ್ರಮಗಳ ಜತೆಗೆ ಆರೋಗ್ಯ, ಶಿಕ್ಷಣ ಮತ್ತು ಸುಸ್ಥಿರ ಸಮಾಜ ನಿರ್ಮಾಣದಲ್ಲಿ ಭಾರತ ತನ್ನದೇ ಮೈಲಿಗಲ್ಲು ಸಾಧಿಸುತ್ತಿದೆ. ಮುಂದಿನ 25 ವರ್ಷಗಳಲ್ಲಿ ಆಗ ಬೇಕಿರುವ (ಅಮೃತ ಕಾಲ) ಅಭಿವೃದ್ಧಿಗೆ ಹಿಂದಿನ ಒಂದು ದಶಕದ ಕಾರ್ಯಸಾಧನೆ ಮತ್ತು ಎದುರಿಸಿದ ಸವಾಲುಗಳು ಅಡಿಪಾಯವಾಗಿರಲಿವೆ ಎಂದರು.
ದೇಶದ ವಿದೇಶಾಂಗ ನೀತಿ ಮತ್ತು ಆರ್ಥಿಕತೆಗೆ ನೇರ ಸಂಬಂಧವಿದೆ. ವಿದೇಶಾಂಗ ನೀತಿಯಲ್ಲಿನ ಕೆಲವು ಬದ ಲಾವಣೆಗಳಿಂದ ಆರ್ಥಿಕತೆಗೆ ಹೆಚ್ಚು ಉತ್ತೇಜನ ಸಿಗಲಿದೆ. ರಫ್ತುದಾರರಿಗೆ ಅನುಕೂಲವಾದಂತೆ ಸ್ಥಳೀಯವಾಗಿ ಉದ್ಯೋಗಾವಕಾಶಗಳು ಲಭ್ಯವಾಗು ತ್ತವೆ ಎಂದರು.
Related Articles
ಜಾಗತಿಕ ಕಾರ್ಯಕ್ಷೇತ್ರ
ಕೌಶಲ, ಪ್ರತಿಭೆಯ ನೆಲೆಯಲ್ಲಿ ಭಾರತವನ್ನು ಯುವಜನತೆ ಜಾಗತಿಕ ಕಾರ್ಯ ತತ್ಪರತೆಯ ಕ್ಷೇತ್ರವಾಗಿ ಪರಿ ಗಣಿಸಿ ದುಡಿದರೆ ಅಮೃತ ಕಾಲದಲ್ಲಿ ಉಜ್ವಲ ಭವಿಷ್ಯ ನಿರ್ಮಾಣ ಸಾಧ್ಯವಿದೆ. ಜಾಗತಿಕವಾಗಿ ಸೆಮಿ ಕಂಡಕ್ಟರ್, ಚಿಪ್ ವಿನ್ಯಾಸಕಾರರು, ಎಂಜಿನಿಯರ್‌ಗಳ ಸಹಿತ ಉತ್ಪಾದನೆಯಲ್ಲಿ ತೀವ್ರ ಕೊರತೆಯಿದೆ. 40 ಸಾವಿರ ಭಾರತೀಯರು ಚಿಪ್ ವಿನ್ಯಾಸ ಕ್ಷೇತ್ರದಲ್ಲಿ ದ್ದರೂ ಸಾಕಾಗುತ್ತಿಲ್ಲ. ದೇಶೀಯ ನೆಲೆಯಲ್ಲಿ ಮಾತ್ರವಲ್ಲದೆ ಜಾಗತಿಕ ಸವಾಲುಗಳಿಗೂ ಸ್ಪಂದಿಸಿ, ಪರಿಹಾರ ಕಂಡುಕೊಳ್ಳಬೇಕು ಎಂದು ಕರೆ ನೀಡಿದರು.
ದೇಶದಲ್ಲಿ ಆ್ಯಪಲ್ ಮೊಬೈಲ್ ಉತ್ಪಾ ದನೆ ಆರಂಭವಾಗಿದೆ. ಜಾಗತಿಕ ವೇದಿಕೆಯಲ್ಲಿ ಒಂದೇ ದಿನದಲ್ಲಿ ಉನ್ನತಿ ಸಾಧಿಸಲು ಸಾಧ್ಯವಿಲ್ಲ. ತಲತಲಾಂತರದ ಸಾಧನೆ, ಕಾರ್ಯ ತತ್ಪರತೆ ಬೇಕಾಗುತ್ತದೆ. ಜಾಗತಿಕವಾದ ಹಲವು ಸಮಸ್ಯೆಗಳಿಗೆ ಸಾಂಸ್ಕೃತಿಕವಾಗಿಯೂ ಸ್ಪಂದಿಸ ಬೇಕಾಗುತ್ತದೆ. ಅಮೃತ ಕಾಲದ ಸಾಧನೆಯಲ್ಲಿ ಯುವ ಜನರ ತೊಡಗಿಸಿ ಕೊಳ್ಳುವಿಕೆಯೂ ಮುಖ್ಯವಾಗುತ್ತದೆ ಎಂದು ವಿಶ್ಲೇಷಿಸಿದರು.
ಮಾಹೆ ಸಹ ಕುಲಾಧಿಪತಿ ಡಾ| ಎಚ್.ಎಸ್. ಬಲ್ಲಾಳ್, ಕುಲಸಚಿವ ಡಾ| ಗಿರಿಧರ್ ಕಿಣಿ ಉಪಸ್ಥಿತರಿದ್ದರು.
ವಿ.ವಿ. ಕುಲಪತಿ ಲೆ| ಜ| ಡಾ| ಎಂ.ಡಿ. ವೆಂಕಟೇಶ್ ಸ್ವಾಗತಿಸಿದರು. ಸಹ ಕುಲಪತಿ ಹಾಗೂ ಟ್ಯಾಪ್ಮಿ ನಿರ್ದೇ ಶಕ ಡಾ| ಮಧು ವೀರರಾಘವನ್ ಕೇಂದ್ರ ಸಚಿವರ ಪರಿಚಯ ಮಾಡಿ ದರು. ಟ್ಯಾಪ್ಮಿ ಪ್ರಾಧ್ಯಾಪಕ ರಾದ ಪ್ರೊ| ಪೂರ್ಣಿಮಾ ವೆಂಕಟ್ ವಂದಿಸಿ, ಡಾ| ಜೀವನ್ ಜೆ. ಅರಕಳ ನಿರೂಪಿಸಿದರು.
ಮೌನ ಕ್ರಾಂತಿ
ಕೋವಿಡ್ ಕಾಲದಲ್ಲಿ ದೇಶದ 80 ಕೋಟಿ ಜನರಿಗೆ ಆಹಾರ ಒದಗಿಸಿರುವುದು ಮತ್ತು ಅದರ ಮುಂದುವರಿಕೆ, ಸಾಮಾಜಿಕ ಪಿಂಚಣಿ ಯೋಜನೆ, ಬಡವರಿಗೆ 3 ಕೋಟಿ ಮನೆ ನಿರ್ಮಾಣ ಸಹಿತ ಮೂಲ ಸೌಲಭ್ಯ ಅಭಿವೃದ್ಧಿಯ ಜತೆಗೆ ಸೋರಿಕೆ ತಡೆದು, ಆಡಳಿತದಲ್ಲಿ ಸುಧಾರಣೆ, ಬದಲಾವಣೆಗೆ ಡಿಜಿಟಲ್ ಇಂಡಿಯಾ ವೇದಿಕೆಯಾಗಿದೆ. ಮೂಲಸೌಕರ್ಯದಲ್ಲಿ ಆಗುತ್ತಿರುವ ಬದಲಾವಣೆಗಳು ದಿನೇದಿನೆ ಕಾಣಸಿಗುತ್ತಿವೆ. ಇವೆಲ್ಲವೂ ಪ್ರಜಾಪ್ರಭುತ್ವದಲ್ಲಿ ಮೌನ ಕ್ರಾಂತಿ ಎಂದು ಸಚಿವರು ಹೇಳಿದರು.
ಪಾಸ್‌ಪೋರ್ಟ್ ಕೇಂದ್ರ ಹೆಚ್ಚಳ
ಹಿಂದೆಲ್ಲ ಪಾಸ್‌ಪೋರ್ಟ್ ಪಡೆಯಲು ಎಷ್ಟು ಕಷ್ಟ ಇತ್ತು ಎಂಬುದು ಬಹುತೇಕರಿಗೆ ಅರಿವಿದೆ. ಈಗ ವ್ಯವಸ್ಥೆ ಸಂಪೂರ್ಣ ಬದಲಾಗಿದೆ. ಪಾಸ್‌ಪೋರ್ಸ್‌ಗೆ ಅರ್ಜಿ ಸಲ್ಲಿಸಿದ ಕೆಲವೇ ದಿನಗಳಲ್ಲಿ ಪಾಸ್‌ಪೋರ್ಟ್ ಸಿಗುತ್ತದೆ. ಅಂಚೆ ಕಚೇರಿಯಲ್ಲಿ ಪಾಸ್‌ಪೋರ್ಟ್ ಕೇಂದ್ರ ತೆರೆಯಲಾಗಿದೆ ಎಂದು ಸಚಿವ ಜೈಶಂಕರ್ ಹೇಳಿದರು.
ಮೇಕ್ ಇನ್ ಇಂಡಿಯಾ ಪರಿಕಲ್ಪನೆ ಭಾರತೀಯರ ಮನೋಭಾವವನ್ನು ಬದಲಿಸಿದೆ. ಉತ್ಪಾದನ ಕ್ಷೇತ್ರದಲ್ಲಿ ದೇಶ ಹೊಸ ಮೈಲಿಗಲ್ಲು ಸಾಧಿಸಿದೆ. ಮೇಕ್ ಇನ್ ಇಂಡಿಯಾ ಪರಿಕಲ್ಪನೆಯನ್ನು ರಾಜಕೀಯದಲ್ಲೂ ಅಳವಡಿಸಿಕೊಳ್ಳುವ ಆಂತರಿಕ ಚಿಂತನೆಯಿದೆ. ಭಾರತ ಸಮಗ್ರ ಶಕ್ತಿಯಾದರೆ ಜಾಗತಿಕವಾಗಿ ಅನ್ಯ ರಾಷ್ಟ್ರಗಳ ಮಾನ್ಯತೆ ತಾನಾಗಿಯೇ ಸಿಗಲಿದೆ.
– ಡಾ| ಜೈಶಂಕರ್, ಕೇಂದ್ರ ವಿದೇಶಾಂಗ ಸಚಿವ