Advertisement

ಅಟಲ್‌ ನಗರ ಪುನರುಜ್ಜೀವನ ಯೋಜನೆಗೆ ಸಂಪುಟ ಸಭೆ ಅಸ್ತು: ಮಾಧುಸ್ವಾಮಿ

09:54 PM May 12, 2022 | Team Udayavani |

ಬೆಂಗಳೂರು: ಕೇಂದ್ರ ಪುರಸ್ಕೃತ ಅಟಲ್‌ ನಗರ ಪುನರುಜ್ಜೀವನ ಯೋಜನೆಯಡಿ ಮುಂದಿನ ಐದು ವರ್ಷಗಳಲ್ಲಿ ರಾಜ್ಯದ 28 ಪಟ್ಟಣ ಪ್ರದೇಶಗಳಲ್ಲಿ ಕುಡಿಯುವ ನೀರು ಹಾಗೂ ಒಳಚರಂಡಿ ವ್ಯವಸ್ಥೆ ಕಲ್ಪಿಸಲು 9530 ಕೋಟಿ ರೂ. ಮೊತ್ತದ ಯೋಜನೆಗೆ ಸಚಿವ ಸಂಪುಟ ಒಪ್ಪಿಗೆ ನೀಡಿದೆ.

Advertisement

ಸಂಪುಟ ಸಭೆಯ ನಂತರ ಸುದ್ದಿಗಾರರ ಜತೆ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ, ಈ ಯೋಜನೆಗೆ ರಾಜ್ಯದ ಪಾಲು 4415 ಕೋಟಿ ರೂ., ಉಳಿದದ್ದು ಕೇಂದ್ರ ಹಾಗೂ ಸ್ಥಳೀಯ ಸಂಸ್ಥೆಗಳು ಭರಿಸಲಿವೆ ಎಂದು ಹೇಳಿದರು.

ಸ್ವತ್ಛ ಭಾರತ ಮಿಷನ್‌ ಯೋಜನೆಗೆ ರಾಜ್ಯದಲ್ಲಿ 3966 ಕೋಟಿ ರೂ. ಮೊತ್ತದ ಯೋಜನೆ ಅನುಷ್ಠಾನಕ್ಕೂ ಸಂಪುಟ ಒಪ್ಪಿಗೆ ನೀಡಿದ್ದು ಇದರಲ್ಲಿ ರಾಜ್ಯದ ಪಾಲು 1292 ಕೋಟಿ ರೂ.ಗಳು ಎಂದು ತಿಳಿಸಿದರು.

ಚಿಕ್ಕಮಗಳೂರು ಜಿಲ್ಲೆಯ ವಿವಿಧ ತಾಲೂಕುಗಳು ಹಾಗೂ ಹೊಸದುರ್ಗದ 346 ಹಳ್ಳಿಗಳಿಗೆ ಭದ್ರಾ ಮೇಲ್ದಂಡೆ ಯೋಜನೆಯಡಿ ಕೆರೆ ತುಂಬಿಸಲು 1829 ಕೋಟಿ ರೂ. ಮೊತ್ತದ ಯೋಜನೆಗೆ ಸಂಪುಟ ಒಪ್ಪಿಗೆ ನೀಡಿದೆ. ಜಲಜೀವನ್‌ ಮಿಷನ್‌ನಡಿ ಹೊನ್ನಾಳಿ, ಹರಿಹರ, ಚೆನ್ನಗಿರಿ ತಾಲೂಕುಗಳಲ್ಲಿ ಕುಡಿಯುವ ನೀರು ಪೂರೈಕೆಯ ಯೋಜನೆಗೂ ಸಂಪುಟ ಅನುಮೋದನೆ ನೀಡಿದೆ ಎಂದು ತಿಳಿಸಿದರು.

ಡಯಾಲಿಸಿಸ್‌ ಸೇವೆ: ರಾಜ್ಯದಲ್ಲಿ ಬೆಂಗಳೂರಿನ ಐದು ಆಸ್ಪತ್ರೆ, 22 ಜಿಲ್ಲಾ  ಆಸ್ಪತ್ರೆ, 146 ತಾಲೂಕು ಆಸ್ಪತ್ರೆ, 67 ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಖಾಸಗಿ ಸಹಭಾಗಿತ್ವದಡಿ ಡಯಾಲಿಸಿಸ್‌ ಕೇಂದ್ರ ಸ್ಥಾಪನೆ ಸಂಬಂಧ 82.80 ಕೋಟಿ ರೂ. ಮೊತ್ತದ ಯೋಜನೆಗೆ ಸಂಪುಟದಲ್ಲಿ ಒಪ್ಪಿಗೆ ನೀಡಲಾಗಿದೆ ಎಂದು ಹೇಳಿದರು.

Advertisement

ಬೆಳಗಾವಿ ಜಿಲ್ಲೆ ಗೋಕಾಕ್‌ ತಾಲೂಕಿನ ಗಟ್ಟಿ ಬಸವಣ್ಣ  ಯೋಜನೆಗೆ 990 ಕೋಟಿ ರೂ. ಅನುದಾನ ಒದಗಿಸಲು ಸಂಪುಟ ಒಪ್ಪಿಗೆ ನೀಡಲಾಯಿತು. ಕಂದಾಯ ಇಲಾಖೆಯ ಮನೆ ಬಾಗಿಲಿಗೆ ದಾಖಲೆ ಯೋಜನೆಗೆ ಅಗತ್ಯವಾದ  15 ಕೋಟಿ ರೂ. ಭರಿಸಲು, ಬೆಂಗಳೂರಿನ ಹಳೇ ವಿಮಾನ ನಿಲ್ದಾಣದ ಓ ಫಾರಂ ಜಂಕ್ಷನ್‌ನಿಂದ ಕುಂದಲಹಳ್ಳಿ ವರ್ತೂರು ವರೆಗೆ ಸಿಗ್ನಲ್‌ ಫ್ರೀ ಕಾರಿಡಾರ್‌ ನಿರ್ಮಾಣದ 150 ಕೋಟಿ ರೂ. ಯೋಜನೆ, ಚನ್ನಪಟ್ಟಣದ ಕಣ್ವ ಜಲಾಶಯ ಮಾರ್ಗದ ರಸ್ತೆ ನಿರ್ಮಾಣಕ್ಕೆ 28 ಕೋಟಿ ರೂ., ಬೆಂಗಳೂರಿನ ಆನಂದ್‌ರಾವ್‌ ವೃತ್ತದಲ್ಲಿ ಅವಳಿ ಗೋಪುರ ನಿರ್ಮಾಣಕ್ಕೆ ಸಂಪುಟ ಒಪ್ಪಿಗೆ ನೀಡಿತು ಎಂದು ವಿವರಿಸಿದರು.

ಆದಾಯ ಹಂಚಿಕೆ ಒಪ್ಪಂದ :

ಬೆಂಗಳೂರು ನಗರದ ಬಸವನಗುಡಿಯ ಕಾರಂಜಿ ಆಂಜನೇಯಸ್ವಾಮಿ ದೇವಾಲಯಕ್ಕೆ ಸೇರಿದ ಜಾಗದಲ್ಲಿರುವ ಕಲ್ಯಾಣ ಮಂಟಪ ಶೃಂಗೇರಿ ಶಾರದಾ ಪೀಠದ ಸಹಭಾಗಿತ್ವದಲ್ಲಿ ಪೂರ್ಣಗೊಳಿಸಿ 30 ವರ್ಷಗಳ ಲೀಸ್‌ ಹಾಗೂ 50:50 ಆದಾಯ ಹಂಚಿಕೆ ಒಪ್ಪಂದಕ್ಕೆ ಸಂಪುಟ ಒಪ್ಪಿಗೆ ನೀಡಿದೆ. ಅದೇ ರೀತಿ ಮೈಸೂರು ನಗರದ ಕೆಆರ್‌ಎಸ್‌ ರಸ್ತೆ ಆಂಜನೇಯ ಸ್ವಾಮಿ ದೇವಸ್ಥಾನ ಉತ್ತರಾದಿ ಮಠಕ್ಕೆ ದೀರ್ಘಾವಧಿಗೆ ಗುತ್ತಿಗೆ ನೀಡಲು ಸಂಪುಟದಲ್ಲಿ ನಿರ್ಧರಿಸಲಾಗಿದೆ.

ಸಿಎಸ್‌ ನೇಮಕ: ಸಿಎಂಗೆ ಅಧಿಕಾರ :

ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್‌ ಅವರು ಈ ಮಾಸಾಂತ್ಯಕ್ಕೆ ನಿವೃತ್ತಿಯಾಗುತ್ತಿರುವುದರಿಂದ ನೂತನ ಮುಖ್ಯ ಕಾರ್ಯದರ್ಶಿ ನೇಮಕ ಮಾಡಲು ಸಚಿವ ಸಂಪುಟ ಮುಖ್ಯಮಂತ್ರಿಯವರಿಗೆ ಅಧಿಕಾರ ನೀಡಿದೆ. 9 ಹಿರಿಯ ಅಧಿಕಾರಿಗಳು ಮುಖ್ಯ ಕಾರ್ಯದರ್ಶಿ ಹುದ್ದೆಗೆ ಅರ್ಹರಿದ್ದು ಮುಖ್ಯಮಂತ್ರಿಯವರು ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ಸಚಿವ ಮಾಧುಸ್ವಾಮಿ ತಿಳಿಸಿದರು.

ಸಚಿವರ ಆಕ್ಷೇಪ :

ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಮಂಜೂರಾಗುವ ಕೈಗಾರಿಕೆ ನಿವೇಶನದ ದರದಲ್ಲಿ ಪ್ರಸ್ತುತ ನೀಡುತ್ತಿರುವ ಶೇ.50 ರಿಯಾಯಿತಿಯನ್ನು ಶೇ.75 ಕ್ಕೆ ಏರಿಸುವ ಪ್ರಸ್ತಾವನೆಗೂ ಸಂಪುಟ ಒಪ್ಪಿಗೆ ನೀಡಿದೆ. ಆದರೆ, ಇದಕ್ಕೆ ಕೆಲವು ಸಚಿವರು ಆಕ್ಷೇಪ ವ್ಯಕ್ತಪಡಿಸಿದರು ಎಂದು ಹೇಳಲಾಗಿದೆ.

ಪ್ರಮುಖ ತೀರ್ಮಾನಗಳು :

  • ಕರ್ನಾಟಕ ಖಾಸಗಿ ಭದ್ರತಾ ಸಂಸ್ಥೆಗಳ ನಿಯಮಗಳು-2022ಕ್ಕೆ ಅನುಮೋದನೆ
  • ಕರ್ನಾಟಕ ಸೈಬರ್‌ ಭದ್ರತಾ ನೀತಿ-2022-2027ಕ್ಕೆ ಒಪ್ಪಿಗೆ
  • ಬೆಂಗಳೂರಿನ ಪೀಣ್ಯ ಕೈಗಾರಿಕೆ ಪ್ರದೇಶದಲ್ಲಿ ಮೂಲಸೌಕರ್ಯ ಕಲ್ಪಿಸಲು 100 ಕೋಟಿ ರೂ. ಅನುದಾನ
  • ಔರಾದ್‌ ತಾಲೂಕಿನ ಬಲ್ಲೂರ ಗ್ರಾಮದಲ್ಲಿ ಸಿಪೆಟ್‌ ಸಂಸ್ಥೆಯ ಕೌಶಲ್ಯ ಮತ್ತು ತಾಂತ್ರಿಕ ನೆರವು ಕೇಂದ್ರ 89.94 ಕೋಟಿ ರೂ. ವೆಚ್ಚದಲ್ಲಿ ಸ್ಥಾಪನೆಗೆ ಒಪ್ಪಿಗೆ
  • ಬಸವಕಲ್ಯಾಣದಲ್ಲಿ ಆನುಭವ ಮಂಟಪ ನಿರ್ಮಾಣದ 612 ಕೋಟಿ ರೂ. ಪರಿಷ್ಕೃತ ಮೊತ್ತಕ್ಕೆ ಒಪ್ಪಿಗೆ
Advertisement

Udayavani is now on Telegram. Click here to join our channel and stay updated with the latest news.

Next