Advertisement

ಹರ್ಷ ಹತ್ಯೆ ಪೂರ್ವ ನಿಯೋಜಿತ; ಹಿಂದೂ ಕಾರ್ಯಕರ್ತರ ಬೆಂಬಲಕ್ಕೆ ನಾವಿದ್ದೇವೆ: ಸಚಿವ ಸುಧಾಕರ್

05:44 PM Feb 21, 2022 | Team Udayavani |

ಬೆಂಗಳೂರು: ಹಿಂದೂ ಧರ್ಮಕ್ಕಾಗಿ ಕೆಲಸ ಮಾಡಿದ ಭಜರಂಗದಳದ ಕಾರ್ಯಕರ್ತ ಹರ್ಷ ಅವರ ಬರ್ಬರ ಹತ್ಯೆ ಪೂರ್ವ ನಿಯೋಜಿತ ಕೃತ್ಯ ಎಂದು ಮೇಲ್ನೋಟಕ್ಕೆ ಕಂಡುಬರುತ್ತದೆ. ಇದರಲ್ಲಿ ಭಾಗಿಯಾದವರ ವಿರುದ್ಧ ರಾಜ್ಯ ಸರ್ಕಾರ ನಿರ್ದಾಕ್ಷಿಣ್ಯ ಕ್ರಮ ವಹಿಸಲಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಈ ದುಷ್ಕೃತ್ಯದಲ್ಲಿ ಭಾಗಿಯಾದವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ವಹಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಮಾಡುತ್ತೇನೆ. ಇಂತಹ ಘಟನೆಗಳಿಂದ ಹಿಂದೂ ಕಾರ್ಯಕರ್ತರಲ್ಲಿ ಆತಂಕ ಉಂಟಾಗುತ್ತದೆ. ಹಿಂದೂ ಕಾರ್ಯಕರ್ತರೊಂದಿಗೆ ನಾನು ಸದಾ ಬೆಂಬಲವಾಗಿ ನಿಲ್ಲುತ್ತೇನೆ. ಇಲ್ಲಿ ಒಂದು ಕಡೆ ರಾಷ್ಟ್ರೀಯವಾದ, ಮತ್ತೊಂದೆಡೆ ಮೂಲಭೂತವಾದ ಕಾಣಿಸುತ್ತಿದೆ. ದೇಶದಲ್ಲಿ ಅಶಾಂತಿ ನೆಲೆಸಲು ಬೇರೆ ದೇಶದವರ ಕುಮ್ಮಕ್ಕು ಕೂಡ ಇದೆ ಎಂದೂ ಅನ್ನಿಸುತ್ತಿದೆ. ಈ ಬಗ್ಗೆ ಗೃಹ ಸಚಿವರಿಗೆ ಮನವಿ ಮಾಡಿ, ಇಂತಹ ಘಟನೆಗೆ ಕಾರಣರಾದವರ ವಿರುದ್ಧ ಕ್ರಮ ವಹಿಸಬೇಕು ಹಾಗೂ ಇನ್ನು ಮುಂದೆ ಇಂತಹ ಘಟನೆ ನಡೆಯದಂತೆ ತಡೆಯಬೇಕು ಎಂದು ಕೋರುತ್ತೇನೆ ಎಂದರು.

ಇದನ್ನೂ ಓದಿ: ಅಂತರರಾಷ್ಟ್ರೀಯ ಲಾಬಿಯಿಂದ ಹಿಂದೂ ಹರ್ಷಗೆ ಬೆಂಬಲವಿಲ್ಲ: ಬಿ.ಎಲ್.ಸಂತೋಷ್

ಈ ಘಟನೆಯಿಂದ ಮನಸ್ಸಿಗೆ ಬಹಳ ನೋವಾಗಿದೆ. ಹತ್ಯೆಗೀಡಾದ ಯುವಕನ ಮನೆಯವರು ಈ ದುಃಖವನ್ನು ಹೇಗೆ ಭರಿಸಲು ಸಾಧ್ಯ ಎಂದು ಆಲೋಚಿಸಿ ಬಹಳ ನೋವುಂಟಾಗಿದೆ. ಈ ನೊಂದ ಕುಟುಂಬದೊಂದಿಗೆ ಸರ್ಕಾರ ನಿಂತಿದೆ. ಯಾವುದೇ ಹಿಂದೂ ಸಂಘಟನೆಗಳ ಕಾರ್ಯಕರ್ತರು ಆತಂಕ ಪಡಬೇಕಿಲ್ಲ. ಎಲ್ಲಾ ಧರ್ಮಗಳಂತೆ ನಮ್ಮ ಹಿಂದೂ ಧರ್ಮವನ್ನೂ ರಕ್ಷಣೆ ಮಾಡುತ್ತೇವೆ. ಈ ಘಟನೆಯಿಂದಾಗಿ ಜನರು ಬೀದಿಗೆ ಬರುತ್ತಿದ್ದಾರೆ. ಆದರೆ ಯಾರೂ ಕಾನೂನನ್ನು ಕೈಗೆತ್ತಿಕೊಳ್ಳಬಾರದು. ಸರ್ಕಾರ ಎಲ್ಲರ ರಕ್ಷಣೆಗೆ ಬದ್ಧವಾಗಿದೆ. ಪ್ರತಿಭಟನಾಕಾರರು ಶಾಂತಿಯನ್ನು ಕಾಪಾಡಿಕೊಂಡು ಹೋರಾಟ ಮಾಡಬೇಕು ಎಂದು ಕೋರಿದರು.

ರಾಜಕೀಯ ಬೇಡ:

Advertisement

ಹಿರಿಯ ನಾಯಕರು ಇಂತಹ ಸಮಯದಲ್ಲಿ ಬೇಜವಾಬ್ದಾರಿ ಹೇಳಿಕೆ ನೀಡಬಾರದು. ನೊಂದ ಕುಟುಂಬಕ್ಕೆ ಮನೋಸ್ಥೈರ್ಯ ತುಂಬುವ ಕೆಲಸವನ್ನು ಪಕ್ಷಾತೀತವಾಗಿ ಮಾಡಬೇಕು. ಆದರೆ ಇದರಲ್ಲೂ ರಾಜಕೀಯ ಮಾಡಿದರೆ ಅದು ಹೇಯ ಕೃತ್ಯ. ಬಿಜೆಪಿ ರಾಷ್ಟ್ರೀಯ ಪಕ್ಷವಾಗಿದ್ದು, ಇದು ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗುವ ಸಂಘಟನೆ. ಯಾವುದೇ ಕಾರಣಕ್ಕೂ ನಮ್ಮ ಪಕ್ಷ ಸಮಾಜದಲ್ಲಿ ವಿಷಬೀಜ ಬಿತ್ತುವ ಕೆಟ್ಟ ಪ್ರವೃತ್ತಿಯನ್ನು ಎಂದೂ ಮಾಡುವುದಿಲ್ಲ ಎಂದರು.

ಕೆಲ ವರ್ಷಗಳಿಂದ ದೇಶದಲ್ಲಿ ಹಿಂದೂ ಕಾರ್ಯಕರ್ತರನ್ನು ಪೂರ್ವ ನಿಯೋಜಿತವಾಗಿ ಕೊಲೆ ಮಾಡಲಾಗುತ್ತಿದೆ. ಇಂತಹ ಕೊಲೆಗಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಇದಕ್ಕೆ ಯಾರೇ ಕಾರಣರಾಗಿದ್ದರೂ ಅಥವಾ ಯಾವುದೇ ಸಂಘಟನೆಯಾದರೂ ಕ್ರಮ ಕೈಗೊಳ್ಳಲೇಬೇಕು ಎಂದು ಸ್ಪಷ್ಟಪಡಿಸಿದರು.

ಇದನ್ನೂ ಓದಿ: ಹಿಜಾಬ್ ಅತ್ಯಗತ್ಯ ಧಾರ್ಮಿಕ ಆಚರಣೆಯಲ್ಲ : ಹೈಕೋರ್ಟ್ ನಲ್ಲಿ ಪುನರುಚ್ಚಾರ

ನಿಯಮ ಪಾಲಿಸಬೇಕು : ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸಂದರ್ಶನವೊಂದರಲ್ಲಿ ಹಿಜಾಬ್ ಕುರಿತು ಅಭಿಪ್ರಾಯ ಹೇಳಿದ್ದಾರೆ. ಕೋರ್ಟ್ ಆದೇಶವನ್ನು ಪಾಲಿಸಬೇಕು ಎಂದೂ ಅವರು ಹೇಳಿದ್ದಾರೆ. ಶಾಲೆಯಲ್ಲಿ ಸಮವಸ್ತ್ರದ ನಿಯಮವನ್ನು ಪಾಲಿಸಬೇಕು ಎಂದು ಅವರು ಹೇಳಿದ್ದಾರೆ. ಇದು ಸಹಜವಾದ ಹಾಗೂ ಸರಿಯಾದ ವಿಚಾರ. ಶಿಕ್ಷಣ ಸಂಸ್ಥೆಯ ಎಲ್ಲಾ ನಿಯಮಗಳನ್ನು ಮಕ್ಕಳು ಪಾಲಿಸಬೇಕು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next