Advertisement

ಕಲಾಗ್ರಾಮಕ್ಕೆ ಸಚಿವ ಸಿ.ಟಿ.ರವಿ ದಿಢೀರ್‌ ಭೇಟಿ

12:58 AM Oct 31, 2019 | Lakshmi GovindaRaju |

ಬೆಂಗಳೂರು: ನಗರದ ಜ್ಞಾನಭಾರತಿ ಆವರಣಕ್ಕೆ ಹೊಂದಿಕೊಂಡಿರುವ ಮಲ್ಲತ್ತಹಳ್ಳಿ ಬಳಿಯ ಕಲಾಗ್ರಾಮಕ್ಕೆ ಸಚಿವ ಸಿ.ಟಿ.ರವಿ ದಿಢೀರ್‌ ಭೇಟಿ ನೀಡಿ ಅಲ್ಲಿನ ಅವ್ಯವಸ್ಥೆಗಳ ಬಗ್ಗೆ ಮಾಹಿತಿ ಪಡೆದರು. ಕಲಾಗ್ರಾಮದಲ್ಲಿ ಕಳೆದ ಒಂದು ವರ್ಷದಿಂದ ಎಲ್ಲಾ ಪ್ರಗತಿ ಕಾರ್ಯಗಳು ಸ್ಥಗಿತವಾಗಿದ್ದು, ದುರಸ್ತಿ ಹಂತದಲ್ಲಿರುವ ಕಟ್ಟಡಗಳ ನವೀಕರಣ ಮತ್ತು ಪ್ರಗತಿ ಕಾಣದೇ ಅರ್ಧಕ್ಕೆ ನಿಂತಿರುವ ಕಾಮಗಾರಿಗಳನ್ನು ಶೀಘ್ರವಾಗಿ ಪೂರೈಸುವ ನಿಟ್ಟಿನಲ್ಲಿ ಕ್ರಮ ಜರುಗಿಸಲು ಅಧಿಕಾರಿಗಳಿಗೆ ತಾಕೀತು ಮಾಡಿದರು.

Advertisement

ಕಲಾಗ್ರಾಮ ಸ್ಥಾಪನೆಯ ಉದ್ದೇಶ ಇಂದು ಜೀವ ಕಳೆದುಕೊಂಡಿದ್ದು, ಮತ್ತೆ ಕಲಾಗ್ರಾಮಕ್ಕೆ ಜೀವ ತುಂಬುವ ನಿಟ್ಟಿನಲ್ಲಿ ನೂತನ ಸ್ಪರ್ಶ ನೀಡಲು ಸಚಿವರು ಮುಂದಾಗಿದ್ದಾರೆ. ಈ ಹಿನ್ನೆಲೆ, ಕಲಾಗ್ರಾಮದಲ್ಲಿರುವ ಕುವೆಂಪು ಭಾಷಾ ಭಾರತಿ, ಗುಡಿ ಕೈಗಾರಿಕೆ ಕೇಂದ್ರ, ನ್ಯಾಷನಲ್‌ ಸ್ಕೂಲ್‌ ಆಫ್ ಡ್ರಾಮಾ ಮತ್ತಿತರ ಅಕಾಡೆಮಿಗಳ ಸಿಬ್ಬಂದಿಯಿಂದ ಮಾಹಿತಿ ಸಂಗ್ರಹಿಸಿದರು.

ಕಲಾಗ್ರಾಮ ಆವರಣದಲ್ಲಿ ಮೂರು ಕಟ್ಟಡಗಳ ನಿರ್ಮಾಣ ಕಾಮಗಾರಿ ಸದ್ಯಕ್ಕೆ ಸ್ಥಗಿತಗೊಂಡಿದ್ದು, ಈ ಕಾಮಗಾರಿಗಳನ್ನು ಪುನರ್‌ ಆರಂಭಗೊಳಿಸಲು ಶೀಘ್ರ ಕ್ರಮ ವಹಿಸಲು ಸೂಚನೆ ನೀಡಿದ್ದಾರೆ. ಇನ್ನೂ ಕೆಲವು ಕಟ್ಟಡಗಳು ಸಂಪೂರ್ಣವಾಗಿ ನಿರ್ಮಾಣವಾಗಿದ್ದರೂ ಇಲಾಖೆಗೆ ಹಸ್ತಾಂತರವಾಗಿಲ್ಲ. ಸಾಕಷ್ಟು ವಾದ್ಯ ಪರಿಕರಗಳು ಹಾಳಾಗಿದ್ದು, ಇವುಗಳನ್ನು ಹೊಸದಾಗಿ ಖರೀದಿಸಲು ಇಂಡೆಂಟ್‌ ರಚಿಸಲು ನಿರ್ದೇಶನ ನೀಡಿದ್ದಾರೆ.

ಈ ವೇಳೆ ಸ್ಥಳದಲ್ಲಿ ಉಪಸ್ಥಿತರಿದ್ದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಎಸ್‌.ರಂಗಪ್ಪ , ಕಲಾಗ್ರಾಮ ಸ್ಥಾಪನೆಯ ಉದ್ದೇಶ ಕಳೆದ ಒಂದು ವರ್ಷದಿಂದ ನನೆಗುದಿಗೆ ಬಿದ್ದಿದೆ. ಇನ್ನೇನು ಕೆಲ ದಿನಗಳಲ್ಲಿ ಮಲೆಗಳಲ್ಲಿ ಮದುಮಗಳು ನಾಟಕ ಪ್ರಪದರ್ಶನ ಪ್ರಾರಂಭವಾಗಲಿದ್ದು, ಇದಕ್ಕೆ ಬೇಕಿರುವ ಸಿದ್ಧತೆಗಳನ್ನು ಮಾಡಿಕೊಳ್ಳಬೇಕಿದೆ.

ಜತೆಗೆ ಸಭಾಂಗಣಗಳಲ್ಲಿ ದುರಸ್ತಿಯಾಗಿರುವ ವಿದ್ಯುತ್‌ ಸಂಪರ್ಕ ಕಾಮಗಾರಿ, ಆವರಣ ಸ್ವತ್ಛತೆ ಮತ್ತು ಅಗತ್ಯ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡವುದು ಅಗತ್ಯ ಎಂದಿದ್ದಾರೆ. ಇಲಾಖೆಯ ಹಿರಿಯ ಅಧಿಕಾರಿಗಳು, ಹಲವು ಪ್ರಾಧಿಕಾರದ ಅಧ್ಯಕ್ಷರು ಮತ್ತು ಅಕಾಡೆಮಿ ಸದಸ್ಯರು ಹಾಜರಿದ್ದರು.

Advertisement

ಕಲಾಗ್ರಾಮದಲ್ಲಿರುವ ಎಲ್ಲಾ ಸಂಸ್ಥೆಗಳು ಹೊಂದಾಣಿಕೆಯಿಂದ ಕೆಲಸ ಮಾಡಿದರೆ ಮಾತ್ರ ಕಲಾಗ್ರಾಮದ ಸಮಗ್ರ ಅಭಿವೃದ್ಧಿ ಸಾಧ್ಯ
-ಸಿ.ಟಿ.ರವಿ, ಸಚಿವ

Advertisement

Udayavani is now on Telegram. Click here to join our channel and stay updated with the latest news.

Next