ಬೆಳ್ತಂಗಡಿ: ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವ ದಲ್ಲಿ ಮನೆ ಮನೆಗೆ ಜೀವಜಲ ಸಂಪರ್ಕ ಕಲ್ಪಿಸಬೇಕೆಂಬ ನೆಲೆಯಲ್ಲಿ 50 ಸಾವಿರ ಕೋಟಿ ರೂ. ವೆಚ್ಚದಲ್ಲಿ ಯೋಜನೆ ರೂಪಿಸಲಾಗಿದೆ. ಅಮುಕ್ತ್ ಯೋಜನೆಯಲ್ಲಿ ರಾಜ್ಯದಲ್ಲಿ 9 ಸಾವಿರ ಕೋಟಿ ರೂ. ವೆಚ್ಚದಲ್ಲಿ ಎಲ್ಲ ಮನೆಗಳಿಗೂ ಕುಡಿಯುವ ನೀರು ಸರಬರಾಜು ಮಾಡಿ ದಾಹ ಮುಕ್ತ ಕರ್ನಾಟಕ ರೂಪಿಸಲಾಗುವುದು ಎಂದು ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್ ಹೇಳಿದರು.
ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಹಾಗೂ ಧರ್ಮಸ್ಥಳ ಗ್ರಾ.ಪಂ. ಜಂಟಿ ಆಶ್ರಯದಲ್ಲಿ ಧರ್ಮಸ್ಥಳ ಕ್ಷೇತ್ರ ಹಾಗೂ ಗ್ರಾ.ಪಂ. ವ್ಯಾಪ್ತಿಗೆ 26.06 ಕೋಟಿ ರೂ. ವೆಚ್ಚದ ಕುಡಿಯುವ ನೀರು ಸರಬರಾಜು ಯೋಜನೆಗೆ ಸೋಮವಾರ ಶಿವರಾತ್ರಿ ಬೆಟ್ಟದಲ್ಲಿ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು.
ಪುಣ್ಯದ ಕಾರ್ಯ:
ಧರ್ಮಸ್ಥಳಕ್ಕೆ ರಾಜ್ಯದೆಲ್ಲೆಡೆಯಿಂದ ಭಕ್ತರು ಬರುತ್ತಾರೆ. ಕ್ಷೇತ್ರದ ಮೂಲ ಸೌಕರ್ಯ ವೃದ್ಧಿಸುವ ಮೂಲಕ ಭಕ್ತರ ನೀರಿನ ಆವಶ್ಯಕತೆ ಪೂರೈಸುವ ಪುಣ್ಯದ ಕಾರ್ಯಕ್ಕೆ ಮುಂದಾಗಿದ್ದೇವೆ. ವರ್ಷ ದೊಳಗೆ ಗುಣಮಟ್ಟದ ಕಾಮಗಾರಿಯೊಂದಿಗೆ ಯೋಜನೆ ಪೂರ್ಣರ್ಗೊಳ್ಳಲಿದೆ ಎಂದರು.
Related Articles
ಪಂಚಭೂತಗಳಲ್ಲಿ ಜಲ ಬಹುಮುಖ್ಯ
ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಯವರು ಮಾತನಾಡಿ, ಪಂಚಭೂತಗಳಲ್ಲಿ ಜಲ ಬಹುಮುಖ್ಯವಾಗಿದೆ. ಧರ್ಮಸ್ಥಳಕ್ಕೆ ಬಂದ ಭಕ್ತರು ನೇತ್ರಾವತಿಯಲ್ಲಿ ಪುಣ್ಯಸ್ನಾನ ಮಾಡಿ ದೇವರ ದರ್ಶನ ಪಡೆದು ಪರಿಹಾರ ಕಂಡು ಕೊಳ್ಳುತ್ತಾರೆ. ಮಾರ್ಚ್, ಎಪ್ರಿಲ್, ಮೇ ಮಾಸದಲ್ಲಿ ನೀರಿನ ಅಭಾವ ಸೃಷ್ಟಿಯಾಗುತ್ತದೆ. ವಸತಿ ಛತ್ರ ಹಾಗೂ ಅನ್ನದಾನಕ್ಕೂ ನೀರಿನ ಕೊರತೆಯಾದಾಗ ಮುಳಿಕಾರಿನಲ್ಲಿ ಅಣೆಕಟ್ಟು ನಿರ್ಮಿಸಿ ನದಿ ನೀರನ್ನು ಶುದ್ಧೀಕರಿಸಿ ಕುಡಿಯುವ ನೀರು, ವಸತಿ ಛತ್ರಗಳಿಗೆ ಹಾಗೂ ಅನ್ನದಾನಕ್ಕೆ ಮತ್ತು ಊರಿನ ನಾಗರಿಕರಿಗೆ ಒದಗಿಸಲಾಗುತ್ತದೆ ಎಂದರು.
ಡಿ. ಸುರೇಂದ್ರ ಕುಮಾರ್, ಡಿ. ಹರ್ಷೇಂದ್ರ ಕುಮಾರ್, ಸುರಪುರ ಶಾಸಕ ಸರಸಿಂಹ ನಾಯಕ, ವಿಧಾನ ಪರಿಷತ್ ಸದಸ್ಯ ಕೆ. ಪ್ರತಾಪಸಿಂಹ ನಾಯಕ್, ಕಿಯೋನಿಕ್ಸ್ ರಾಜ್ಯಾಧ್ಯಕ್ಷ ಹರಿಕೃಷ್ಣ ಬಂಟ್ವಾಳ, ಡಿಎಸ್ ಮ್ಯಾಕ್ಸ್ ಆಡಳಿತ ನಿರ್ದೇಶಕ ದಯಾನಂದ, ಧರ್ಮಸ್ಥಳ ಗ್ರಾ.ಪಂ. ಅಧ್ಯಕ್ಷೆ ಜಯಾ ಮೋನಪ್ಪ ಗೌಡ, ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ಡಾ| ಎಂ.ಎನ್.ಅಜಯ್ ನಾಗಭೂಷಣ್, ಕ.ನ.ನೀ.ಸ. ಮತ್ತು ಒಳಚರಂಡಿ ಮಂಡಳಿ ವ್ಯವಸ್ಥಾಪಕ ನಿರ್ದೇಶಕ ಕೆ.ಪಿ. ಮೋಹನ್ ರಾಜ್, ದ.ಕ. ಜಿ.ಪಂ. ಸಿಇಒ ಡಾ| ಕುಮಾರ್, ಸಿರಿ ಸಂಸ್ಥೆ ಆಡಳಿತ ನಿರ್ದೇಶಕ ಕೆ.ಎನ್. ಜನಾರ್ದನ, ಕ.ನ.ನೀ.ಸ. ಮೈಸೂರು ವಲಯ ಅಭಿಯಂತ ವಿ.ಎಲ್. ಚಂದ್ರಪ್ಪ, ಮಂಗಳೂರು ವಿಭಾಗ ಕಾರ್ಯಪಾಲಕ ಅಭಿಯಂತ ಚಂದ್ರಶೇಖರ ಎಂ., ಅಭಿಯಂತ ರಕ್ಷಿತ್ ರಾವ್ ಉಪಸ್ಥಿತರಿದ್ದರು.
ಶಾಸಕ ಹರೀಶ್ ಪೂಂಜ ಸ್ವಾಗತಿಸಿದರು. ಧರ್ಮಸ್ಥಳ ಗ್ರಾ.ಪಂ. ಉಪಾಧ್ಯಕ್ಷ ಶ್ರೀನಿವಾಸ ರಾವ್ ನಿರ್ವಹಿಸಿದರು.
ಧರ್ಮಸ್ಥಳ, ಸುಬ್ರಹ್ಮಣ್ಯದಲ್ಲಿ ಒಳಚರಂಡಿ ಯೋಜನೆ :
ಬೆಳ್ತಂಗಡಿ, ನ. 21: ಲಕ್ಷಾಂತರ ಭಕ್ತರು ಸಂದರ್ಶಿಸುವ ದಕ್ಷಿಣ ಕನ್ನಡ ಜಿಲ್ಲೆಯ ಶ್ರೀ ಕ್ಷೇತ್ರ ಧರ್ಮಸ್ಥಳ ಮತ್ತು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಗಳಲ್ಲಿ ಉತ್ತಮ ತಂತ್ರಜ್ಞಾನ ಬಳಸಿ ಒಳಚರಂಡಿ (ಯಜಿಡಿ) ವ್ಯವಸ್ಥೆ ಹಾಗೂ ಮಲಿನ ನೀರಿನ ಸಂಸ್ಕರಣ ಘಟಕ ಸ್ಥಾಪಿಸಲು ಯೋಜನೆ ರೂಪಿಸಿದ್ದು ಒಂದು ತಿಂಗಳ ಒಳಗಾಗಿ ಆದೇಶಿಸಲಾಗುವುದು ಎಂದು ನಗರಾಭಿವೃದ್ಧಿ ಸಚಿವ ಬಿ.ಎ. ಬಸವರಾಜ ಹೇಳಿದರು.
ಧರ್ಮಸ್ಥಳದಲ್ಲಿ ಸೋಮವಾರ ಮಾಧ್ಯಮ ದೊಂದಿಗೆ ಮಾತನಾಡಿದರು.
ಸ್ಫೋಟ ಪ್ರಕರಣದ ತನಿಖೆ:
ಮಂಗಳೂರಿನಲ್ಲಿ ಕುಕ್ಕರ್ ಬಾಂಬ್ ಪ್ರಕರಣದ ವಿಚಾರ ಪ್ರತಿಕ್ರಿಯಿಸಿದ ಸಚಿವರು, ವಿಷಯ ತಿಳಿದು ಪರಿಸ್ಥಿತಿ ಗಂಭೀರತೆಯನ್ನು ಸರಕಾರ ಆಲಿಸಿದೆ. ಕೃತ್ಯ ನಡೆಸಿದವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು. ಇಂತಹ ಕೃತ್ಯ ತಡೆಗಟ್ಟಲು ಈಗಾಗಲೇ ಕೇಂದ್ರ ಹಾಗೂ ರಾಜ್ಯ ಸರಕಾರ ಕಠಿನ ನಿರ್ಧಾರ ಕೈಗೊಂಡಿವೆ ಎಂದರು.