Advertisement

ರೈತರು ಉದ್ಧಾರವಾಗಲು ಉದ್ಯಮಿಯಾಗಬೇಕು : ಸಚಿವ ಬಿ.ಸಿ.ಪಾಟೀಲ್

07:00 PM Sep 18, 2022 | Team Udayavani |

ಧಾರವಾಡ : ರೈತರು ಉದ್ಯಮಿಯಾಗದ ಹೊರತು ಉದ್ದಾರವಾಗುವುದು ಕಷ್ಟವಿದ್ದು, ಬದಲಾಗುತ್ತಿರುವ ಜಗತ್ತಿನ ಹೊಸ ಕೃಷಿ ತಾಂತ್ರಿಕತೆಗಳು ಮತ್ತು ಉದ್ಯಮಶೀಲತೆಯನ್ನು ಅಳವಡಿಸಿಕೊಳ್ಳುವ ಅನಿವಾರ್ಯತೆ ಎದುರಾಗಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದರು.

Advertisement

ಅವರು ರವಿವಾರ ಇಲ್ಲಿನ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ಧಾರವಾಡ ಕೃಷಿ ಮೇಳ-2022ನ್ನು ಅಧಿಕೃತವಾಗಿ ಉದ್ಘಾಟಿಸಿ ಮಾತನಾಡಿ, ಬರೀ ಮೋಡ ನೋಡಿ ಬಿತ್ತನೆ ಮಾಡುವ ಕಾಲ ಮುಗಿದು ಹೋಗಿದೆ. ಇದೀಗ ಹವಾಮಾನ ವೈಪರಿತ್ಯದಿಂದ ಅತೀವೃಷ್ಠಿ, ಅನಾವೃಷ್ಠಿಗಳು ಸಂಭವಿಸುತ್ತಿವೆ. ಇದೆಲ್ಲದರಲ್ಲೂ ದಾಟಿಕೊಂಡು ಮುನ್ನಡೆಯುವ ಅಗತ್ಯವಿದ್ದು, ಅದಕ್ಕಾಗಿ ಬರೀ ಕೃಷಿಯನ್ನಷ್ಟೇ ಅಲ್ಲ, ಅದರೊಂದಿಗೆ ಕೃಷಿ ಉತ್ಪನ್ನಗಳಿಗೆ ಮೌಲ್ಯವರ್ಧನೆ ಮಾಡುವ ಅಗತ್ಯವಿದೆ ಎಂದು ಸಲಹೆ ನೀಡಿದರು.

ರೈತರಿಗೆ ಡಬ್ಸಿಡಿ ಡೀಸಲ್ : ಇನ್ನು ರಾಜ್ಯದಲ್ಲಿ ಒಟ್ಟು 69 ಲಕ್ಷಕ್ಕೂ ಅಧಿಕ ಸಣ್ಣ ರೈತ ಕುಟುಂಬಗಳಿದ್ದು, ಇತ್ತೀಚಿನ ವರ್ಷಗಳಲ್ಲಿ ಎಲ್ಲರೂ ಯಂತ್ರಾಧಾರಿತ ಕೃಷಿ ಮಾಡುತ್ತಿದ್ದಾರೆ. ಹೀಗಾಗಿ ರೈತರ ಹೊಲ ಉಳುಮೆಗೆ ಅಗತ್ಯವಾದ ಇಂಧನದ ಖರ್ಚನ್ನು ಸರ್ಕಾರ ಭರಿಸಬೇಕು ಎಂದು ಯೋಚಿಸಲಾಗಿತ್ತು. ಕೊರೊನಾ ಸಂದರ್ಭದಲ್ಲಿ ಇದು ಸಾಧ್ಯವಾಗಿರಲಿಲ್ಲ. ಇದೀಗ ರೈತ ಶಕ್ತಿ ಯೋಜನೆ ಮೊದಲ ಬಾರಿಗೆ ಜಾರಿಗೆ ತಂದಿದ್ದು ರೈತರಿಗೆ ಡೀಸೆಲ್ ಹಣ ಒದಗಿಸಲು ಯೋಜಿಸಲಾಗಿದೆ. ಪ್ರತಿವರ್ಷ ಒಂದು ಎಕರೆ ಉಳುಮೆ ಮಾಡಲು 20 ಲೀಟರ್ ಡೀಸೆಲ್ ಅಗತ್ಯವಿದೆ. ಪ್ರತಿ ಲೀಟರ್‌ಗೆ 25 ರೂ.ಸಬ್ಸಿಡಿ ಕೊಡುವುದು ಬಿ.ಎಸ್.ಯಡಿಯೂರಪ್ಪ ಅವರ ಕನಸು ಇದಾಗಿತ್ತು. ಆದರೆ ಕೊರೊನಾದಿಂದ ಇದು ಸಾಧ್ಯವಾಗಿರಲಿಲ್ಲ. ಇದೀಗ ಪ್ರತಿ ಎಕರೆಗೆ 10 ಲೀಟರ್ ಡೀಸೆಲ್ ಮೇಲೆ 25 ರೂ.ಗಳ ಸಬ್ಸಿಡಿ ನೀಡಲು ಯೋಜಿಸಿದ್ದು, 1250 ರೂ.ಗಳನ್ನು ಪ್ರತಿಯೊಬ್ಬ ಸಣ್ಣ ರೈತನಿಗೂ ಇದನ್ನು ನೀಡಲಾಗುತ್ತದೆ. ಇದೇ ತಿಂಗಳಿನಿಂದಲೇ ಇದನ್ನು ಜಾರಿ ಮಾಡಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಒಪ್ಪಿಕೊಂಡಿದ್ದಾರೆ ಎಂದು ಸಚಿವ ಬಿ.ಸಿ.ಪಾಟೀಲ್ ಹೇಳಿದರು.

ಇದನ್ನೂ ಓದಿ: ಸಹಕಾರಿ ಸಂಸ್ಥೆ ಚುನಾವಣೆ: ಮಮತಾ ಬ್ಯಾನರ್ಜಿ ಅವರಿಗೆ ಮತ್ತೆ ಶಾಕ್; ಬಿಜೆಪಿ ಜಯಭೇರಿ

ರೈತರು ಸೂಟು ಹಾಕಬೇಕು : ರೈತರು ಬರೀ ಉಳುಮೆಯಷ್ಟೇ ಅಲ್ಲ ಜೇನು ಕೃಷಿ, ಹೈನುಗಾರಿಕೆ ಸೇರಿದಂತೆ ವಿಭಿನ್ನವಾಗಿ ಆಲೋಚನೆ ಮಾಡಬೇಕು. ಇದರಿಂದ ಹೆಚ್ಚಿನ ಆದಾಯ ಬರಲಿದ್ದು, ರೈತರು ಇನ್ನಾದರೂ ಅರ್ಥಮಾಡಿಕೊಳ್ಳಬೇಕು. ನಾನು ರಾಜ್ಯಾದ್ಯಂತ ಅನೇಕ ಪ್ರಗತಿಪರ ರೈತರ ಮನೆಗಳಲ್ಲಿ ವಾಸ್ತವ್ಯ ಹೂಡಿ ಕೃಷಿಯಲ್ಲಿ ಉತ್ತಮ ಬದುಕು ಕಟ್ಟಿಕೊಂಡವರನ್ನು ಮಾತನಾಡಿಸಿದ್ದೇನೆ. ಕೃಷಿಯಲ್ಲಿ ಬದುಕಿದೆ. ಇದನ್ನು ಅರ್ಥಮಾಡಿಕೊಳ್ಳಬೇಕು. ಶಿರಸಿಯ ಮಧುಕೇಶ್ವರ ಹೆಗಡೆ ಅವರು ಬರೀ ಜೇನು ಕೃಷಿ ಮಾಡಿ ಇಂದು ಕೋಟಿ ಕೋಟಿ ರೂ.ಗಳನ್ನು ಗಳಿಕೆ ಮಾಡುತ್ತಿದ್ದಾರೆ. ಅಂದು ಊಟಕ್ಕೆ ಗತಿ ಇಲ್ಲದವರು ಇಂದು ಸೂಟು ಬೂಟು ಹಾಕಿಕೊಂಡು ಓಡಾಡುತ್ತಿದ್ದಾರೆ. ರೈತರಿಗೆ ಇದು ಮಾದರಿಯಾಗಬೇಕಿದ್ದು, ಎಲ್ಲರೂ ಸೂಟುಬೂಟು ಹಾಕಿಕೊಳ್ಳುವಂತಾಗಲಿ ಎಂದು ಸಚಿವ ಪಾಟೀಲ್ ಹೇಳಿದರು.

Advertisement

ಕೃಷಿ ವಿಶ್ವವಿದ್ಯಾಲಯದ ಕೋಟದಲ್ಲಿ ಈ ವರ್ಷದಿಂದ 420 ಕ್ಕೂ ಹೆಚ್ಚುವರಿ ಸೀಟುಗಳು ರೈತರ ಮಕ್ಕಳಿಗೆ ನೀಡುತ್ತಿದ್ದೇವೆ. ಬೊಮ್ಮಾಯಿ ಅವರು ಮುಖ್ಯಮಂತ್ರಿಯಾದ ನಂತರ ರೈತರ ಮಕ್ಕಳಿಗೆ ಉನ್ನತ ಶಿಕ್ಷಣಕ್ಕೆ ಅನುಕೂಲವಾಗಲೆಂದು 8-10 ನೇ ವರ್ಗದ ಮಕ್ಕಳಿಗೆ 2 ಸಾವಿರ ರೂ.ಗಳನ್ನು ನೀಡಿದ್ದು, ದೇಶದಲ್ಲಿಯೇ ಇದು ಮೊದಲ ಕಾರ್ಯಕ್ರಮ 10 ಲಕ್ಷ ಮಕ್ಕಳಿಗೆ 469 ಕೋಟಿ ರೂ.ಗಳನ್ನು ನೀಡಲಾಗಿದೆ.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಅಮೃತ ದೇಸಾಯಿ ಮಾತನಾಡಿ, ರೈತರು ಹೊಸ ತಂತ್ರಜ್ಞಾನವನ್ನು ಅರ್ಥಮಾಡಿಕೊಂಡು ಕೃಷಿ ಮಾಡಬೇಕು. ಕೊರೊನಾ ಸಂದರ್ಭದಲ್ಲಿ ಜಗತ್ತಿಗೆ ಅನ್ನ ನೀಡಿದ ಕೀರ್ತಿ ದೇಶದ ರೈತರಿಗೆ ಸಲ್ಲುತ್ತದೆ. ಅಂತಹ ರೈತರಿಗೆ ಸರ್ಕಾರ ಅಗತ್ಯ ಸೌಲಭ್ಯಗಳನ್ನು ಒದಗಿಸುತ್ತಿದೆ ಎಂದರು.

ಕರ್ನಾಟಕ ಬಯಲಸೀಮೆ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ತವನಪ್ಪ ಅಷ್ಟಗಿ ಮಾತನಾಡಿ, ರೈತರು ದೇಶದ ಬೆನ್ನೆಲುಬಾಗಿದ್ದು, ಅವರ ದುಡಿಮೆಯಿಂದಲೇ ಇಂದು ಜಗತ್ತು ನಡೆದಿದೆ. ಹೊಸ ತಂತ್ರಜ್ಞಾನವನ್ನು ರೈತರು ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಕೃಷಿ ವಿವಿಯ ಕುಲಪತಿ ಡಾ|ಬಸವರಾಜಪ್ಪ ಕೃಷಿ ಮೇಳದಲ್ಲಿನ ವಿಶೇಷತೆಗಳ ಕುರಿತು ರೈತರಿಗೆ ಮನವರಿಕೆ ಮಾಡಿ ವಂದನಾರ್ಪನೆ ಸಲ್ಲಿಸಿದರು. ಕೃಷಿ ವಿವಿ ಆಡಳಿತ ಮಂಡಳಿ ಸದಸ್ಯರು ಸೇರಿದಂತೆ ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಸಬ್ಸಿಡಿ ಯಾರಿಗೆ ಸಿಕ್ಕಿದೆಯಪ್ಪ ? ರೈತರ ಪ್ರಶ್ನೆ :

ಇನ್ನು ಕೃಷಿ ಸಚಿವ ಬಿ.ಸಿ.ಪಾಟೀಲ್ ಅವರ ಭಾಷಣದ ವೇಳೆ ವೇದಿಕೆ ಬಲಬಾಗದಲ್ಲಿ ಕಿಕ್ಕಿರಿದು ನಿಂತಿದ್ದ ರೈತರ ಪೈಕಿ ಕೆಲಸವರು, ನೀವು ನೀಡುತ್ತಿರುವ ಅಂಕಿ ಅಂಶಗಳು ಸರಿಯಿಲ್ಲ. ಎಷ್ಟು ಗೊಬ್ಬರ ಪೂರೈಸಿದ್ದಿರಿ ಸರಿಯಾಗಿ ಹೇಳಿ ? ಎಂದು ಪ್ರಶ್ನಿಸಿದರು. ಇದಕ್ಕೆ ಸಚಿವರು ತಡಕಾಡಿ ಉತ್ತರಿಸಲು ಯತ್ನಿಸಿದರು. ನಂತರ ಮತ್ತೊಮ್ಮ ರೈತ ಏರು ಧ್ವನಿಯಲ್ಲೇ, ಸಾಲ ಯೋಜನೆ ಮತ್ತು ಸಬ್ಸಿಡಿಗಳು ರೈತರಿಗೆ ತಲುಪಿಯೇ ಇಲ್ಲವಲ್ಲ ? ಸುಮ್ಮನೆ ಹೇಳುತ್ತಿದ್ದಿರಿ ? ಎಂದು ಪ್ರಶ್ನಿಸಿದ. ಆದರೆ ಇದಕ್ಕೆ ಉತ್ತರಿಸದ ಸಚಿವರು, ನಾನು ಆ ಮೇಲೆ ಸಿಗತೇನೆ ಅಲ್ಲಿ ಹೇಳತೇನೆ ಎಂದಷ್ಟೇ ಹೇಳಿ ವೇದಿಕೆಯಿಂದ ನಿರ್ಗಮಿಸಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next