Advertisement

ಪರಿಶಿಷ್ಟರ ಮೀಸಲಾತಿ ಹೆಚ್ಚಿಸದಿದ್ರೆ ರಾಜಕೀಯ ನಿವೃತಿ : ಸಚಿವ ಬಿ.ಶ್ರೀರಾಮುಲು

04:57 PM Jul 13, 2022 | Team Udayavani |

ಕೊಳ್ಳೇಗಾಲ: ಪರಿಶಿಷ್ಟ ಜಾತಿ, ಪಂಗಡಗಳಿಗೆ ಮೀಸಲಾತಿ ಪ್ರಮಾಣ ಹೆಚ್ಚಿಸಲು ಆಗದಿದ್ದರೆ ರಾಜಕೀಯ ನಿವೃತ್ತಿ ಹೊಂದುತ್ತೇನೆ ಎಂದು ಸಾರಿಗೆ, ಪರಿಶಿಷ್ಟವರ್ಗಗಳ ಕಲ್ಯಾಣ ಇಲಾಖೆ ಸಚಿವ ಬಿ.ಶ್ರೀರಾಮುಲು ಘೋಷಿಸಿದರು.

Advertisement

ನಗರದ ಲೋಕೋಪಯೋಗಿ ಇಲಾಖೆಯ ವಸತಿ ಗೃಹದಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪರಿಶಿಷ್ಟ ಜಾತಿ, ಪಂಗಡಮೀಸಲಾತಿ ಹೋರಾಟ ಸಮಿತಿ ರಾಜ್ಯಾವ್ಯಾಪಿ ಪ್ರತಿಭಟನೆ ನಡೆಸುತ್ತಿದೆ. ಆದರೂ, ಸಚಿವ ಶ್ರೀರಾಮುಲು ಮೌನವಾಗಿರುವುದು ಏಕೆ ಎಂದು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿದೆ. ನಾನು ಮೌನವಾಗಿಲ್ಲ. ಮೀಸಲಾತಿ ಹೆಚ್ಚಳ ಮಾಡಿಸುವ ಉದ್ದೇಶದಿಂದ ನವದೆಹಲಿಗೆ ತೆರಳಿ ಪ್ರಧಾನಿಗೆ ಮನವಿ ಸಲ್ಲಿಸಿರುವುದಾಗಿ ಹೇಳಿದರು.

ಸಿಎಂ ಬಳಿ ಚರ್ಚೆ ಮಾಡಿದ್ದೇನೆ: ವಾಲ್ಮೀಕಿ ಸಮುದಾಯದ ಶ್ರೀಗಳು 153 ದಿನಗಳಿಂದ ಬೆಂಗಳೂರಿನ ಫ್ರೀಡಂಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಶ್ರೀಗಳು ಹೋರಾಟ ಕೈಬಿಡಲು ಮನವಿ ಮಾಡಿದ್ದೇನೆ. ಆದರೆ, ಅವರು ಪ್ರತಿಭಟಿಸಲು ನಿರ್ಧರಿಸಿರುವುದಾಗಿ ಹೇಳಿದ ಹಿನ್ನೆಲೆಯಲ್ಲಿ ನಾನು ಒತ್ತಡ ಹೇರಲು ಮುಂದಾಗಿಲ್ಲ, ಈಗಾಗಲೇ ಸಿಎಂ ಬಳಿ ಚರ್ಚೆ ಮಾಡಿದ್ದು, ಕಾನೂನು ತೊಡಕಿನಿಂದ ಮೀಸಲಾತಿ ಪ್ರಮಾಣ ಹೆಚ್ಚಳ ಕುರಿತ ಪ್ರಕ್ರಿಯೆ ತಡವಾಗಿದೆ ಎಂದು ವಿವರಿಸಿದರು.

ಅಧಿಕಾರಕ್ಕೆ ಬಂದ 24 ಗಂಟೆ ಒಳಗಾಗಿ ಎಸ್ಸಿಗೆ ಶೇ.17, ಎಸ್ಟಿಗೆ 7.5 ಮೀಸಲಾತಿ ಕೊಡುತ್ತೇವೆ ಎಂದು ಭರವಸೆ ನೀಡಿದ್ದೆವು. ಕಾನೂನು, ತಾಂತ್ರಿಕ ತೊಡಕಿನಿಂದ ವಿಳಂಬವಾಗಿದೆ. ಶೀಘ್ರದಲ್ಲೇ ಈ ವಿಷಯ ಸಚಿವ ಸಂಪುಟದ ಮುಂದೆ ಬರಲಿದೆ. ಕೊಟ್ಟ ಮಾತು ಉಳಿಸಿಕೊಳ್ಳಲಾಗುತ್ತದೆ. ಸಿಹಿ ಸುದ್ದಿಸುದ್ದಿಯನ್ನೂ ಕೊಡುತ್ತೇವೆ ಎಂದು ಹೇಳಿದರು.

ಕಳೆದ 70 ವರ್ಷದಿಂದ ಅಧಿಕಾರ ನಡೆಸಿದ ಕಾಂಗ್ರೆಸ್‌, ಪರಿಶಿಷ್ಟ ಜಾತಿ, ಪಂಗಡದವರನ್ನು ಕೇವಲ ಓಟು ಬ್ಯಾಂಕ್‌ ಮಾಡಿಕೊಂಡಿತೇ ಹೊರತು, ಅವರಿಗೆ ಮೀಸಲಾತಿ ಹೆಚ್ಚಿಸುವಲ್ಲಿ ವಿಫ‌ಲವಾಗಿದೆ. ಈ ವಿಷಯದಲ್ಲಿ ಮಧ್ಯ ಪ್ರವೇಶ ಮಾಡಿ, ತನ್ನ ಬೇಳೆ ಬೇಯಿಸಿಕೊಳ್ಳುವ ಪ್ರಯತ್ನ ಮಾಡುತ್ತಿದೆ ಎಂದು ದೂರಿದರು.

Advertisement

ಬಸ್‌ ನಿಲ್ದಾಣ: ಇತ್ತೀಚಿಗೆ ಮಾಜಿ ಸಿಎಂ ಸಿದ್ದರಾಮಯ್ಯ ನಗರದ ಬಸ್ತೀಪುರ ಬಡಾವಣೆಗೆ ಬಂದಿದ್ದ ವೇಳೆ, ನನ್ನ ಅಧಿಕಾರ ಅವಧಿಯಲ್ಲಿ ಮಂಜೂರು ಮಾಡಲಾಗಿದ್ದ ಬಸ್‌ ನಿಲ್ದಾಣ, ಇತರೆ ಕಾಮಗಾರಿಗಳನ್ನು ನಾನೇ ಉದ್ಘಾಟಿಸುವೆ ಎಂದು ಹೇಳಿದ್ದಾರೆ. ಇನ್ನು ನಾಲ್ಕು ತಿಂಗಳ ಒಳಗೆ ಲೋಕಾರ್ಪಣೆ ಮಾಡಲಾಗುವುದು ಎಂದು ವಿವರಿಸಿದರು.

ಉತ್ಸವ ಮೂರ್ತಿ: ಆಗಸ್ಟ್‌ 3ರಂದು ಸಿದ್ದರಾಮೋತ್ಸವ ನಡೆಯುತ್ತಿದ್ದು, ಮುಗಿದ ಬಳಿಕ ಅವರು ಉತ್ಸವ ಮೂರ್ತಿಯಾಗಿ ಕೂರಲಿದ್ದಾರೆ ಎಂದು ನುಡಿದರು.

ಸುದ್ದಿಗೋಷ್ಠಿಯಲ್ಲಿ ಶಾಸಕರಾದ ಆರ್‌.ನರೇಂದ್ರ, ಎನ್‌.ಮಹೇಶ್‌, ಮಾಜಿ ಶಾಸಕರಾದ ಜಿ.ಎನ್‌. ನಂಜುಂಡಸ್ವಾಮಿ, ಪರಿಮಳನಾಗಪ್ಪ, ಕೇಂದ್ರ ಪರಿಹಾರ ಸಮಿತಿ ಅಧ್ಯಕ್ಷ ರಾಮಚಂದ್ರ, ಜಿಲ್ಲಾ ಬಿಜೆಪಿ ಅಧ್ಯಕ್ಷ ಸುಂದರ್‌, ಮುಖಂಡ ವೆಂಕಟೇಶ್‌ ಇದ್ದರು

 

Advertisement

Udayavani is now on Telegram. Click here to join our channel and stay updated with the latest news.

Next