Advertisement

ಭೂಕುಸಿತ ಸಂತ್ರಸ್ತರಿಗೆ ಶೀಘ್ರ ಪರಿಹಾರ: ಸಚಿವ

04:10 PM Aug 16, 2022 | Team Udayavani |

ಸಕಲೇಶಪುರ: ತಾಲೂಕಿನ ದೋಣಿಗಾಲ್‌ ಗ್ರಾಮ ದಲ್ಲಿ ಇತ್ತೀಚೆಗಷ್ಟೇ ಭೂಕುಸಿತದಿಂದಾಗಿ ಭೂಮಿ ಕಳೆದುಕೊಂಡವರಿಗೆ ಸೂಕ್ತ ಪರಿಹಾರ ನೀಡುವ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ಗೋಪಾಲಯ್ಯ ಹೇಳಿದರು.

Advertisement

ತಾಲೂಕಿನ ದೋಣಿಗಾಲ್‌ ಸಮೀಪ ರಾಷ್ಟ್ರೀಯ ಹೆದ್ದಾರಿ 75ರ ಕಾಮಗಾರಿಯಿಂದ ಭೂಕುಸಿತಕ್ಕೆ ಒಳಗಾಗಿ ತೋಟ, ಗದ್ದೆ ಜಾಗ ವೀಕ್ಷಿಸಿ ಮಾತನಾಡಿದ ಅವರು, ರಾಜ್‌ಕಮಲ್‌ ಕಂಪನಿ ಮಾಡಿದ ಎಡವಟ್ಟಿ ನಿಂದ 35ಕ್ಕೂ ಹೆಚ್ಚು ಎಕರೆ ಕಾಫಿ, ಮೆಣಸು, ಭತ್ತ ಬೆಳೆಯುತ್ತಿದ್ದ ಜಾಗ ಮಣ್ಣುಪಾಲಾಗಿರುವ ಮಾಹಿತಿ ನನಗೆ ದೊರಕಿದೆ. ಇಲ್ಲಿ ಪುನಃ ಬೆಳೆ ಬೆಳೆಯಲಾರದಂಹ ಪರಿಸ್ಥಿತಿ ನಿರ್ಮಾಣವಾಗಿದೆ. ಜಮೀನು ಕಳೆದುಕೊಂಡವರ ಕುರಿತು ಸರಿಯಾಗಿ ಮಾಹಿತಿ ಪಡೆದು ಮುಖ್ಯಮಂತ್ರಿಗಳ ಜೊತೆ ಸಭೆ ನಡೆಸಿ ಮುಂದಿನ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಹೇಳಿದರು.

ಅನ್ಯಾಯವಾಗದಂತೆ ನೋಡಿಕೊಳ್ಳುತ್ತೇವೆ: ಭೂಕು ಸಿತ ಉಂಟಾಗಲು ಕಾರಣವಾಗಿರುವ ಗುತ್ತಿಗೆ ದಾರರೆ ಪರಿಹಾರ ನೀಡುವಂತೆ ಕ್ರಮ ಕೈಗೊಳ್ಳುತ್ತೇವೆ. ಒಟ್ಟಾರೆಯಾಗಿ ಬಡವರಿಗೆ ಯಾವುದೇ ರೀತಿಯಲ್ಲಿ ಅನ್ಯಾಯವಾಗದಂತೆ ನೋಡಿಕೊಳ್ಳುತ್ತೇವೆ. ತಾಲೂಕಿನಲ್ಲಿ ನಿರೀಕ್ಷೆಗೂ ಮೀರಿ ಹಿಂದೆಂದು ಕಾಣದ ಮಳೆ ಬಂದಿದೆ, ಮಳೆ ಕಡಿಮೆಯಾಯಿತು ಅನ್ನುವ ಹೊತ್ತಿಗೆ ಮತ್ತೆ ಮಳೆ ಬಂದು ಹಾನಿ ಮಾಡಿದೆ ಎಂದು ತಿಳಿಸಿದರು.

ಸದ್ಯಕ್ಕೆ ಮಳೆಯಿಂದಾಗಿ ಸಂಪೂರ್ಣವಾಗಿ ಮನೆ ಕಳೆದುಕೊಂಡವರಿಗೆ 5 ಲಕ್ಷ ರೂ. ಪರಿಹಾರ ನೀಡಲಾಗುತ್ತಿದೆ. ಇದೀಗ ಮಳೆ ತುಸು ಕಡಿಮೆಯಾಗಿದ್ದು, ಒಟ್ಟಾರೆಯಾಗಿ ಮಳೆ ನಿಂತ ನಂತರ ಬೆಳೆ ಇತರೆ ನಷ್ಟಗಳನ್ನು ಅಧಿಕಾರಿಗಳಿಂದ ವರದಿ ಪಡೆದು ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.

ಕಪ್ಪಳ್ಳಿ ಸಂಪರ್ಕ ರಸ್ತೆ ವೀಕ್ಷಣೆ: ಈ ವೇಳೆ ಏಕಮುಖ ಸಂಚಾರಕ್ಕೆ ಸಿದ್ಧತೆ ನಡೆಸುತ್ತಿರುವ ಕೆಸಗನಹಳ್ಳಿಯಿಂದ ಕಪ್ಪಳ್ಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ವೀಕ್ಷಿಸಿದ ಸಚಿವರು, ಅಧಿಕಾರಿಗಳೊಂದಿಗೆ ಸಭೆ ನಡೆಸಿ ಚರ್ಚಿಸಿ, ಮಂಗಳವಾರ ಸಂಜೆ ವೇಳೆಗೆ ಏಕಮುಖ ಸಂಚಾರದ ಕುರಿತು ತೀರ್ಮಾನಿಸಲಾಗುವುದು ಎಂದು ವಿವರಿಸಿದರು.

Advertisement

ಸಚಿವರ ಮುಂದೆ ಸಂತ್ರಸ್ತರ ಕಣ್ಣೀರು: ಇದೇವೇಳೆ ಸಚಿವರ ಮುಂದೆ ಕಣ್ಣೀರು ಹಾಕಿದ ಸಂತ್ರಸ್ತರು, ಬಹುತೇಕರಿಗೆ ಇಲ್ಲಿ ಸ್ವಲ್ಪ ಜಾಗ ಇದ್ದು, ಅದರಲ್ಲೇ ಕಷ್ಟಪಟ್ಟು ಕಾಫಿ, ಮೆಣಸು, ಅಡಕೆ, ಭತ್ತವನ್ನು ಬೆಳೆಯುತ್ತಿದ್ದೆವು. ಇದೀಗ ಹೆದ್ದಾರಿ ಕಾಮಗಾರಿ ಮಾಡುತ್ತಿರುವ ಗುತ್ತಿಗೆದಾರರು ಮಾಡಿದ ತಪ್ಪಿನಿಂದ ವಿನಾಕಾರಣ ನಾವು ಬಲಿಯಾಗಬೇಕಾಗಿದೆ ಎಂದು ಹೇಳಿದರು.

ನಮ್ಮ ಜೀವನಕ್ಕೆ ಆಧಾರವಾಗಿದ್ದ ಜಮೀನು ಇಲ್ಲವಾಗಿದೆ. ನಾವು ಮುಂದೆ ಏನು ಮಾಡುವುದು, ದಯವಿಟ್ಟು ನಮಗೆ ಬದಲಿ ಭೂಮಿ ನೀಡಬೇಕು, ಸೂಕ್ತ ಪರಿಹಾರ ನೀಡಬೇಕು ಎಂದು ಕಣ್ಣೀರು ಹಾಕಿದರು.

ಜಿಲ್ಲಾಧಿಕಾರಿ ಆರ್‌.ಗಿರೀಶ್‌, ಜಿಪಂ ಸಿಇಒ ಕಾಂತರಾಜ್‌, ಉಪವಿಭಾಗಾಧಿಕಾರಿ ಪ್ರತೀಕ್‌ ಬಾಯಲ್‌, ತಹಶೀಲ್ದಾರ್‌ ಜಯಕುಮಾರ್‌, ಲೋಕೋಪಯೋಗಿ ಇಲಾಖೆ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next