Advertisement

ಆರೆಸ್ಸೆಸ್‌ ತಾಲಿಬಾನ್‌ಗೆ ಹೋಲಿಸಿದ ಸಿದ್ದುಗೆ ಬಿ.ಸಿ ಪಾಟೀಲ ತಿರುಗೇಟು

01:28 PM Sep 30, 2021 | Team Udayavani |

ಬೆಳಗಾವಿ:ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಆರೆಸ್ಸೆಸ್‌ ಅನ್ನು ತಾಲಿಬಾನ್‌ ಸಂಘಟನೆಗೆ ಹೋಲಿಕೆ ಮಾಡಿರುವುದು ಸರಿಯಲ್ಲ. ಅವರದ್ದು ಬಾಲೀಶ ಹೇಳಿಕೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ ಕಾಂಗ್ರೆಸ್‌ಗೆ ತಿರುಗೇಟು ನೀಡಿದರು.

Advertisement

ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ನವರು ಮೊದಲಿನಿಂದಲೂ ಪಾಕಿಸ್ತಾನ, ತಾಲಿಬಾನ್‌ ಸಂಘಟನೆಗಳಿಗೆ ಬೆಂಬಲಿಸುತ್ತ ಬಂದಿದ್ದಾರೆ. ಈಗ ಬೇರೆಯವರತ್ತ ಬೆರಳು ತೋರಿಸುತ್ತಿದ್ದಾರೆ. ಪಾಕಿಸ್ತಾನವನ್ನು ಬೆಂಬಲಿಸುವವರು ಯಾರು ಎಂಬುದು ಎಲ್ಲರಿಗೂ ಗೊತ್ತಿದೆ ಎಂದು ಕಿಡಿಕಾರಿದರು. ಬಿಜೆಪಿ ರಾಷ್ಟ್ರೀಯವಾದ ಮತ್ತು ಏಕತೆಗೆ ಒತ್ತು ಕೊಡುತ್ತದೆ. ಕಾಂಗ್ರೆಸ್‌ನವರ ಇಲ್ಲಸಲ್ಲದ ಆರೋಪಗಳು ಸತ್ಯಕ್ಕೆ ದೂರವಾಗಿವೆ ಎಂದರು.

ನಾವು ಯಾರೂ ಕಾಂಗ್ರೆಸ್‌ಗೆ ಮರಳುವ ಪ್ರಶ್ನೆಯೇ ಇಲ್ಲ. ಆದರೆ ಆ ಪಕ್ಷದ ಕೆಲವು ನಾಯಕರು ಬಟ್ಟೆ ಹಾವು ಬಿಟ್ಟು ಹೆದರಿಸುತ್ತಿದ್ದಾರೆ. ಬೆಂಕಿ ಹಚ್ಚುವ ಕೆಲಸ ಅವರು ಮಾಡುತ್ತಿದ್ದಾರೆ. ಬಿಜೆಪಿಗೆ ಬಂದಿರುವ ನಾವು ಯಾರೂ ವಲಸಿಗರಲ್ಲ. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಗೆದ್ದು ಸಚಿವರಾಗಿದ್ದೇವೆ. ಬಿಜೆಪಿಯಲ್ಲಿ ನಮಗೆ ಸೂಕ್ತ ಸ್ಥಾನಮಾನ ಸಿಕ್ಕಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಹಾಗೂ ನಮ್ಮ ಸ್ನೇಹ ವಲಯದ ಶಾಸಕರ ಮಧ್ಯೆ ಯಾವುದೇ ಬ್ರೇಕ್‌ ಆಗಿಲ್ಲ. ನಮ್ಮೆಲ್ಲರ ಮಧ್ಯೆ ಪ್ರೀತಿ ಇದೆ ಎಂದರು.

ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ರಾಜ್ಯದಲ್ಲಿ ಪಕ್ಷ ಸಂಘಟನೆಗಾಗಿ ಕೈಗೊಂಡಿರುವ ಪ್ರವಾಸಕ್ಕೆ ಯಾರೂ ಬ್ರೇಕ್‌ ಹಾಕಿಲ್ಲ. ಪಕ್ಷ ಮತ್ತಷ್ಟು ಸಬಲವಾಗಲಿದೆ. ಯಡಿಯೂರಪ್ಪ ಅವರ ಮಾರ್ಗದರ್ಶನ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿಯೇ 2023ರ ವಿಧಾನಸಭೆ ಸಾರ್ವತ್ರಿಕ ಚುನಾವಣೆ ಎದುರಿಸಲಿದ್ದೇವೆ. ಹೆಚ್ಚಿನ ಸ್ಥಾನಗಳನ್ನು ಗೆದ್ದು ಮತ್ತೆ ಅಧಿಕಾರಕ್ಕೆ ಬರುತ್ತೇವೆ. ಹಾನಗಲ್‌ ಮತ್ತು ಸಿಂದಗಿ ಉಪ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಬಾರಿಸಲಿದೆ ಎಂದರು.

ಹಾನಗಲ್‌ನಲ್ಲಿ ವಿಧಾನಸಭೆ ಉಪಚುನಾವಣೆಗೆ ಸಂಬಂಧಿಸಿದಂತೆ ಬಿಜೆಪಿ ಟಿಕೆಟ್‌ ಆಕಾಂಕ್ಷಿಗಳ ಪಟ್ಟಿ ಸಿದ್ಧಪಡಿಸುಂತೆ ವರಿಷ್ಠರಿಂದ ಸೂಚನೆ ಬಂದಿದೆ. ಅಲ್ಲಿ ಉಸ್ತುವಾರಿ ಸಚಿವನಾಗಿದ್ದರಿಂದ ಹಾನಗಲ್‌ನಲ್ಲಿ ಸಭೆ ನಡೆಸಿ ಆಕಾಂಕ್ಷಿಗಳ ಪಟ್ಟಿ ಪಡೆದು ಹೈಕಮಾಂಡ್‌ಗೆ ಕಳುಹಿಸಲಾಗುವುದು ಎಂದರು.

Advertisement

ಪಕ್ಷದ ರಾಜ್ಯ ಘಟಕದ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಹಾನಗಲ್‌ ನಿಂದ ಸ್ಪರ್ಧಿಸುವ ವಿಷಯ ನನಗೆ ಗೊತ್ತಿಲ್ಲ. ಅಲ್ಲಿಂದ ಯಾರು ಸ್ಪರ್ಧಿಸಬೇಕು ಎಂಬುದನ್ನು ವರಿಷ್ಠರು ತೀರ್ಮಾನಿಸಲಿದ್ದಾರೆ ಎಂದು ಸಚಿವ ಪಾಟೀಲ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next