ಕೊಪ್ಪಳ: ಕೋವಿಡ್ ಹೋಗುತ್ತದೆ ಎಂದು ನಾವೆಲ್ಲ ನಂಬಿದ್ದೆವು. ಆದರೆ ಮತ್ತೆ ಉಲ್ಬಣಿಸುತ್ತಿದೆ. ಜನರು ಸಹಕಾರ ನೀಡಿ ಅಂತರ ಕಾಪಾಡಿಕೊಳ್ಳಬೇಕು. ಇಲ್ಲದಿದ್ದರೆ ಮುಂದಿನ ದಿನದಲ್ಲಿ ಲಾಕ್‌ಡೌನ್ ಅನಿವಾರ್ಯವಾಗಲಿದೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಹೇಳಿದರು. ಕೊಪ್ಪಳದ ಗಿಣಗೇರಿ ಬಳಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಸಿಎಂ ಬಿಎಸ್ ವೈ ಲಾಕ್‌ಡೌನ್ ಇಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.
ಅಲ್ಲದೇ, ಏ. 18ರಂದು ಮತ್ತೆ ಸರ್ವ ಪಕ್ಷಗಳ ಸಭೆಯನ್ನೂ ಕರೆದಿದ್ದಾರೆ. ಲಾಕ್‌ಡೌನ್ ಮಾಡುವುದು ಸರಿಯಲ್ಲ. ಜನರೂ ಜವಾಬ್ದಾರಿಯಿಂದ ವರ್ತನೆ ಮಾಡಬೇಕು. ಜಾತ್ರೆ, ಮದುವೆ ಸಮಾರಂಭದಲ್ಲಿ ಜನ ನಿಯಂತ್ರಣ ಇರಬೇಕು. ಇಲ್ಲಿ ಜನರ ದೊಡ್ಡ ಪಾತ್ರವಿದೆ. ಮಹಾರಾಷ್ಟ್ರ, ದೆಹಲಿಯಲ್ಲಿ ಕರ್ನಾಟಕಕ್ಕಿಂತ ಹೆಚ್ಚಿನ ಸೋಂಕು ಉಲ್ಬಣವಾಗಿದೆ. ನಾವೂ ಜನರಿಗೆ ಇದನ್ನು ಬಿಟ್ಟಿದ್ದೇವೆ. ಜನರಲ್ಲಿ ಜಾಗೃತಿ ಬರಲಿ. ಬರೀ ಕಾನೂನಿನ ಚೌಕಟ್ಟಿನಲ್ಲಿ ಬಿಗಿ ಮಾಡುವುದಕ್ಕಿಂತ ಜನರ ಸಹಕಾರ ಬೇಕಾಗುತ್ತದೆ. ಕಳೆದ ವರ್ಷ ಲಾಕ್‌ಡೌನ್ ನಿಂದ ತುಂಬಾ ಸಂಕಷ್ಟ ಎದುರಿಸಿದ್ದಾರೆ. ಈ ಬಾರಿ ಸಹಕಾರ ನೀಡದಿದ್ದರೆ ಮುಂದಿನ ದಿನದಲ್ಲಿ ಲಾಕ್ ಡೌನ್ ಅನಿವಾರ್ಯವಾಗಲಿದೆ ಎಂದರು.
ಕೋವಿಡ್ ನಡುವೆಯೂ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆಯೂ ನಡೆಯಬೇಕು. ಅಭಿವೃದ್ಧಿಯೂ ಮಾಡಲಾಗುತ್ತದೆ. ರಾಜ್ಯದಲ್ಲಿನ ಮೂರು ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲ್ಲಲಿದ್ದಾರೆ. ಕೋವಿಡ್‌ನಲ್ಲಿ ಎಲ್ಲರ ಜವಾಬ್ದಾರಿಯೂ ಇದೆ. ಸಿನಿಮಾ ಕ್ಷೇತ್ರದಲ್ಲೂ ಮುಂದಿನ ದಿನದಲ್ಲಿ ಶೇ.100 ಅನುಮತಿ ಸಿಗಲಿದೆ.
ಸಿದ್ದರಾಮಯ್ಯ-ಈಶ್ವರಪ್ಪ ಅವರು ಎರಡು ಮದ್ದಾನೆಗಳಿದ್ದಂಗೆ. ಆ ಮದ್ದಾನೆಗಳ ಮಧ್ಯೆ ಗುಬ್ಬಿ ಹೋಗಿ ಬುದ್ಧಿ ಹೇಳುವುದು ಪೆದ್ದ ಎನ್ನುವ ಮಾತಿದೆ. ಸಿದ್ದು ಈಶ್ವರಪ್ಪರಿಗೆ ಉತ್ತರ ಕೊಡ್ತಾರೆ. ಈಶ್ವರಪ್ಪ ಅವರು ಸಿದ್ದು ಅವರಿಗೆ ಉತ್ತರ ಕೊಡ್ತಾರೆ. ನಾನು ಗುಬ್ಬಿ ಇದ್ದಂತೆ. ಅದಕ್ಕೆ ನಾನೇಕೆ ಉತ್ತರ ಕೊಡ್ಲಿ ಎಂದರು. ಅಂಜನಾದ್ರಿ ಅಭಿವೃದ್ಧಿ ಕುರಿತು ಸಚಿವ ಈಶ್ವರಪ್ಪ, ಕೋಟಾ ಶ್ರೀನಿವಾಸ ಹಾಗೂ ನನ್ನ ನೇತೃತ್ವದಲ್ಲಿ ಸಭೆ ನಡೆಯಬೇಕಿತ್ತು. ಆದರೆ ಕೋಟಾ ಶ್ರೀನಿವಾಸ ಅವರಿಗೆ ಕೋವಿಡ್ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸಭೆ ಮುಂದೂಡಿದೆ. ಹನುಮಂತ ಜನಿಸಿದ್ದು ಅಂಜನಾದ್ರಿಯಲ್ಲಿಯೇ ಎನ್ನುವುದು ದಾಖಲೆ ಸಾರಿ ಸಾರಿ ಹೇಳುತ್ತವೆ. ಟಿಟಿಡಿಯವರು ಏನೇ ಹೇಳಿದರೂ ನಾವು ಕೊಪ್ಪಳದ ಜನತೆ ಹನುಮಂತ ಜನಿಸಿದ್ದು ಅಂಜನಾದ್ರಿಯಲ್ಲೇ ಎಂದು ಹೇಳುತ್ತೇವೆ. ಅದನ್ನು ಸುಮ್ಮನೆ ಮಾತನಾಡಿ ನಾವು ವಿವಾದ ಮಾಡುವುದಿಲ್ಲ. ರೈತ ಮಿತ್ರ ನೇಮಕ ಮಾಡಿಕೊಳ್ಳುವ ಪ್ರಸ್ತಾಪ ಸರ್ಕಾರದ ಮುಂದಿತ್ತು. ಆದರೆ ಕೋವಿಡ್ ಉಲ½ಣಿಸಿದ ಹಿನ್ನೆಲೆಯಲ್ಲಿ ಅದನ್ನು ಕೈಗೆತ್ತಿಕೊಳ್ಳಲಾಗುವುದಿಲ್ಲ ಎಂದರು.