Advertisement

ತಮ್ಮ ಮಟ್ಟ ತಾವೇ ಇಳಿಸಿಕೊಳ್ಳುತ್ತಿರುವ ಸಿದ್ದರಾಮಯ್ಯ: ಅಶ್ವತ್ಥನಾರಾಯಣ್‌ ವಾಗ್ದಾಳಿ

05:15 PM Jul 06, 2022 | Team Udayavani |

ಬೆಂಗಳೂರು: ಪಿಎಸ್ಐ ನೇಮಕಾತಿ ಹಗರಣ ಸಂಬಂಧವಾಗಿ ಯಾವುದೇ ದಾಖಲೆಗಳಿಲ್ಲದೆ ಗಾಳಿಯಲ್ಲಿ ಗುಂಡು ಹೊಡೆದಂತೆ ತಮ್ಮ ವಿರುದ್ಧ ಆರೋಪಿಸುತ್ತಿರುವ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರು ಪೆದ್ದರಾಮಯ್ಯ ಅವರಂತೆ ವರ್ತಿಸುತ್ತಿದ್ದಾರೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ್ ಹರಿಹಾಯ್ದಿದ್ದಾರೆ.

Advertisement

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದಾಖಲೆ ಸಂಖ್ಯೆಯಲ್ಲಿ ರಾಜ್ಯದ ಬಜೆಟ್ ನ್ನು ಮಂಡಿಸಿದವರು. ಆದರೆ ಈಗ ಅವರು ದಾಖಲೆಗಳಿಲ್ಲದೆಯೇ ಇಲ್ಲಸಲ್ಲದ ಆಪಾದನೆಗಳನ್ನು ಮಾಡುತ್ತಿದ್ದಾರೆ. ಈ ಮೂಲಕ ತಮ್ಮ ಮಟ್ಟವನ್ನು ತಾವೇ ಇಳಿಸಿಕೊಳ್ಳುತ್ತಿದ್ದಾರೆ ಎಂದು ಅವರು ಹೇಳಿಕೆಯಲ್ಲಿ ಚುಚ್ಚಿದ್ದಾರೆ.

ಎಲ್ಲರ ಕೈಗಳೂ ತನ್ನ ಕೈಗಳಂತೆಯೇ ಕೊಳಕು ಎಂದುಕೊಂಡಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಮಾತಿಗೆ ಸಿದ್ದರಾಮಯ್ಯ ಗೋಣು ಹಾಕುತ್ತಿದ್ದಾರೆ. ಒಂದು ಸುಳ್ಳನ್ನು ನೂರು ಸಲ ಹೇಳಿದರೆ ಅದನ್ನು ಸತ್ಯವಾಗಿಸಬಹುದು ಎಂಬ ಭ್ರಮೆ ಸಿದ್ದರಾಮಯ್ಯ ಅವರನ್ನು ಆವರಿಸಿಕೊಂಡಿದೆ. ತಮ್ಮ 75ನೇ ವರ್ಷಾಚರಣೆ ಸಂದರ್ಭದಲ್ಲಾದರೂ ಅವರು ಈ ಭ್ರಮೆಯಿಂದ ಹೊರಬರಬೇಕು ಎಂದು ಸಚಿವರು ಹೇಳಿದ್ದಾರೆ.

ಇದನ್ನೂ ಓದಿ: ಸಾಗರ: ಮ್ಯಾನ್‌ಹೋಲ್ ಒಡೆದು ನೀರಿನ ಒತ್ತಡಕ್ಕೆ ನೆಲ ಬಿರುಕು; ಭೂಕಂಪ ಎಂದು ಹೊರಗೋಡಿದ ಜನ

ಲೋಕಾಯುಕ್ತದ ಕೈ ಕಟ್ಟಿ  ಅದನ್ನು ನೀರಿಗೆ ಬಿಟ್ಟ ಕುಖ್ಯಾತಿ ಸಿದ್ದರಾಮಯ್ಯ ಅವರಿಗೆ ತಳುಕು ಹಾಕಿಕೊಂಡಿದೆ. ಹಾಗೆಯೇ, ಅವರು “ಅರ್ಕಾವತಿ ಹಗರಣದ ಪಿತಾಮಹ”ನೂ ಆಗಿದ್ದಾರೆ. ಸಿದ್ದರಾಮಯ್ಯ ಅವರು ಸುಳ್ಳುಗಳ ಸರಮಾಲೆ ಹೆಣೆಯುವುದರಲ್ಲಿ ಸಿದ್ಧಹಸ್ತರು. ಜೊತೆಗೆ, ತಾವು ಅಧಿಕಾರದಲ್ಲಿದ್ದಾಗ ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗಲಾಗದೆ ಸಮುದಾಯಗಳನ್ನು ಪರಸ್ಪರ ಎತ್ತಿಕಟ್ಟಿ ಜನರ ಕೆಂಗಣ್ಣಿಗೆ ಗುರಿಯಾದ ಅವರು ಜನರಿಂದ  ತಿರಸ್ಕೃತರಾಗಿರುವುದು ಎಲ್ಲರಿಗೂ ಗೊತ್ತಿರುವಂಥದ್ದೇ ಆಗಿದೆ. ಕೇವಲ ಮಾತಿನ ಚಾತುರ್ಯದಿಂದ ಸುಳ್ಳನ್ನು ಸತ್ಯ ಮಾಡಲಾಗದು ಎಂಬ ಅರಿವು ಅವರಿಗಿದ್ದರೆ ಒಳ್ಳೆಯದು ಎಂದಿದ್ದಾರೆ.

Advertisement

ಡಿವೈಎಸ್ ಪಿ ಗಣಪತಿ ಅವರ ಆತ್ಮಹತ್ಯೆಗೆ ಕಾರಣವೇನೆಂದು ಕೇಳಿದರೆ ಸಿದ್ದರಾಮಯ್ಯ ಅವರು ಕಳ್ಳರಂತೆ ನುಣುಚಿಕೊಳ್ಳುತ್ತಾರೆ. ‘ಕಾಮಾಲೆ ಕಣ್ಣಿಗೆ ಕಾಣುವುದೆಲ್ಲಾ ಹಳದಿ’ ಎನ್ನುವಂತೆ ಸಿದ್ದರಾಮಯ್ಯ ಅವರಿಗೆ ಯಾವಾಗಲೂ ಸಮಾಜ ಕೆಟ್ಟದ್ದಾಗಿಯೇ ಕಾಣುತ್ತದೆ. ಹೀಗಾಗಿಯೇ ಅವರು ಸಾಮರಸ್ಯದ ನಿದರ್ಶನಗಳನ್ನು ಬಿಟ್ಟು, ಸಮುದಾಯಗಳ ಮಧ್ಯೆ ಒಡಕು ತರುವ ಮಾತುಗಳನ್ನೇ ಆಡುತ್ತಿರುತ್ತಾರೆ ಎಂದು ಅಶ್ವತ್ಥನಾರಾಯಣ ಪ್ರಹಾರ ಮಾಡಿದ್ದಾರೆ.

ಸಿದ್ದರಾಮಯ್ಯ ಅವರು ಇಲ್ಲಸಲ್ಲದ ಆರೋಪ ಮಾಡಿದರೆ ಡಿಕೆಶಿ ಅವರು ತಲೆ ಅಲ್ಲಾಡಿಸಬಹುದೇ ವಿನಾ ನಾಡಿನ ಜನರು ನಂಬಲಾರರು.  ಕಾಂಗ್ರೆಸ್‌ ಸುಳ್ಳಿನ ಫ್ಯಾಕ್ಟರಿಯ ಸಿಇಓ ಆಗಲು ಪೈಪೋಟಿ ನಡೆಸುತ್ತಿರುವ ಸಿದ್ದರಾಮಯ್ಯ ಹಾಗೂ ಡಿಕೆಶಿ ಅವರು “ದಿನಕ್ಕೊಂದು ಸುಳ್ಳು” ಎಂಬ ತತ್ತ್ವಕ್ಕೆ ಮೊರೆ ಹೋಗಿದ್ದಾರೆ. ತಾವು ಬೆಳೆಸಿದ ಭ್ರಷ್ಟರನ್ನು ಬಿಜೆಪಿ ಸರ್ಕಾರ ಮಟ್ಟ ಹಾಕುತ್ತಿದೆ ಎಂಬ ಭಯ ಅವರಲ್ಲಿ ಅಸ್ಥಿರತೆ ಉಂಟುಮಾಡಿದೆ ಎಂದು ಟೀಕಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next