ಬೆಂಗಳೂರು: ಕಂದಾಯ ಸಚಿವ ಆರ್.ಅಶೋಕ್ ಅವರು ಶನಿವಾರ ರಾತ್ರಿ ಹುಲಿಕೆರೆ ಗ್ರಾಮದಲ್ಲಿ ವಾಸ್ತವ್ಯ ಮಾಡಲಿದ್ದಾರೆ. ಈವರೆಗೆ ಕಂದಾಯ ಸಚಿವ ಅಶೋಕ ಅವರು 15 ಗ್ರಾಮಗಳಲ್ಲಿ ವಾಸ್ತವ್ಯ ಮಾಡಿದ್ದಾರೆ. ಸುಮಾರು 3 ಲಕ್ಷ 80 ಸಾವಿರಕ್ಕೂ ಅಧಿಕ ಜನರಿಗೆ ಸರಕಾರದ ವಿವಿಧ ಇಲಾಖೆಗಳ ಸೌಲಭ್ಯಗಳನ್ನು ವಿತರಿಸಲಾಗಿದೆ.
ಶನಿವಾರ ಬೆಳಗ್ಗೆ 11 ಗಂಟೆಗೆ ಅಂಬಳೆ ಮತ್ತು ವಸಾರೆಯಲ್ಲ ನಾಡ ಕಚೇರಿಯ ನೂತನ ಕಟ್ಟಡಗಳನ್ನು ಉದ್ಘಾಟಿಸಲಿದ್ದಾರೆ. ಮಧ್ಯಾಹ್ನ 12 ಗಂಟೆಗೆ ಚಿಕ್ಕಮಗಳೂರು ಜಿಲ್ಲಾ ಕೇಂದ್ರದಲ್ಲಿ ಜಿಲ್ಲಾ ಡಳಿತದ ಕಟ್ಟಡಗಳ ಸಂಕೀರ್ಣಕ್ಕೆ ಶಂಕುಸ್ಥಾಪನೆ ನೆರವೇರಿಸುವರು. ಮಧ್ಯಾಹ್ನ 2ರಿಂದ 4 ಗಂಟೆಯ ವರೆಗೆ ಎಐಟಿ ತಾಂತ್ರಿಕ ಮಹಾವಿದ್ಯಾಲಯದ ಬಯಲು ರಂಗಮಂದಿರದಲ್ಲಿ ಕಾಫಿ ಬೆಳೆಗಾರರ ಸಮಾವೇಶ ನಡೆಯಲಿದೆ. ಸಂಜೆ 4.20ಕ್ಕೆ ಸಖರಾಯಪಟ್ಟಣ ಹೊಬಳಿಯ ಪಿಳ್ಳೇನಹಳ್ಳಿ ಗ್ರಾಮದಿಂದ ಹುಲಿಕೆರೆಗೆ ಮೆರವಣಿಗೆ ಮೂಲಕ ಸಚಿವರು ತೆರಳಲಿದ್ದಾರೆ.
ಸಂಜೆ 4:30ರಿಂದ ವಿವಿಧ ಇಲಾಖೆಯ ಮಳಿಗೆಗಳನ್ನು ಉದ್ಘಾಟಿಸಿದ ಬಳಿಕ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಲಿದ್ದಾರೆ. ಸರಕಾರದ ವಿವಿಧ ಫಲಾನುಭವಿಗಳಿಗೆ ಸವಲತ್ತುಗಳನ್ನು ವಿತರಿಸಲಿದ್ದಾರೆ. ಸಂಜೆ 6.30ರಿಂದ ಸ್ಥಳೀಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ಇರಲಿದೆ. ರಾತ್ರಿ ಹುಲಿಕೆರೆ ಗ್ರಾಮದ ಸರಕಾರಿ ಶಾಲೆಯಲ್ಲಿ ಭೋಜನ ಮತ್ತು ವಾಸ್ತವ್ಯ ಮಾಡಲಿದ್ದಾರೆ.
ಪಹಣಿ ಪತ್ರ ವಿತರಣೆ
ಫೆ. 5ರಂದು ಬೆಳಗ್ಗೆ ದಲಿತ ಕಾಲನಿಗೆ ಭೇಟಿ ನೀಡಿ, ಉಪಾಹಾರ ಸ್ವೀಕರಿಸಿ, ಹುಲಿಕೆರೆ ಗ್ರಾಮಸ್ಥರೊಂದಿಗೆ ಕುಂದು ಕೊರತೆಗಳ ಬಗ್ಗೆ ಗ್ರಾಮ ಸಭೆ ನಡೆಸಲಿದ್ದಾರೆ. ಅನಂತರ ಪೌತಿ ಖಾತೆ ಆಂದೋಲನಕ್ಕೆ ಚಾಲನೆ ನೀಡಿ, ಹಲವರಿಗೆ ಪಹಣಿ ವಿತರಿಸಲಿದ್ದಾರೆ. ಸ್ಥಳೀಯ ಶಾಸಕ ಸಿ. ಟಿ. ರವಿ ಹಾಗೂ ಜಿಲ್ಲಾಡಳಿತದ ಅಧಿಕಾರಿಗಳು ಉಪಸ್ಥಿತರಿರಲಿದ್ದಾರೆ.