ಬೆಂಗಳೂರು: ಮಹದೇವಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಅಗತ್ಯವಿರುವ ಎಲ್ಲ ಕ್ರಮಗಳನ್ನು ಕಟ್ಟುನಿಟ್ಟಾಗಿ ಕೈಗೊಂಡು ಕೋವಿಡ್ ಪರಿಸ್ಥಿತಿ ನಿಯಂತ್ರಿಸಬೇಕೆಂದು ಸಚಿವ ಅರವಿಂದ ಲಿಂಬಾವಳಿ ಹೇಳಿದ್ದಾರೆ.
ಇಂದು (ಮಂಗಳವಾರ) ಮಾರತ್ತಹಳ್ಳಿ ತುಳಸಿ ಚಿತ್ರ ಮಂದಿರ ರಸ್ತೆಯ ಎಸ್.ಬಿ.ಆರ್ ಕನ್ವೆನ್ಷನ್ ಹಾಲ್ ನಲ್ಲಿ ಕೋವಿಡ್ -19 ನಿಯಂತ್ರಣ ಕ್ರಮಗಳ ಪರಿಶೀಲನೆ ಕುರಿತು ಮಹದೇವಪುರ ವಿಧಾನಸಭಾ ಕ್ಷೇತ್ರದ ಆರೋಗ್ಯ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು, ಕಂದಾಯ ಅಧಿಕಾರಿಗಳು, ಬಿಬಿಎಂಪಿ ಮತ್ತು ಗ್ರಾಮಾಂತರ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸಚಿವರು ಮಾತನಾಡಿದರು.
ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ಕೋವಿಡ್- 19 ಹೇಗೆ ನಿಯಂತ್ರಣ ಮಾಡಬೇಕು ಹಾಗೂ ಯಾವ ರೀತಿಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಈ ಸಭೆಯಲ್ಲಿ ಚರ್ಚಿಸಲಾಯಿತು. ಅಗತ್ಯ ಇರುವ ಕಡೆಗಳಲ್ಲಿ ಕಂಟೋನ್ಮೆಂಟ್ ಜೋನ್ ನಿರ್ಮಾಣ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಅವರು ಸೂಚಿಸಿದರು.
ರಾಜ್ಯದಲ್ಲಿ ಏ. 28 ರಿಂದ ಆರಂಭವಾಗುವ ಉಚಿತ ಕೋವಿಡ್ ಲಸಿಕೆ ಅಭಿಯಾನದಲ್ಲಿ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ನೊಂದಣಿ ಮಾಡಿಸಲು ಜಾಗೃತಿ ಮೂಡಿಸಬೇಕು. ಈ ಲಸಿಕೆ ನೀಡುವ ಕಾರ್ಯ ದೊಡ್ಡ ರೀತಿಯಲ್ಲಿ ಆಯೋಜಿಸಿ ಎಲ್ಲರಿಗೂ ಲಸಿಕೆ ನೀಡುವಂತಾಗಬೇಕು ಇದಕ್ಕೆ ಜನಜಾಗೃತಿ ಕಾರ್ಯಕ್ರಮ ಏರ್ಪಡಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಕೋವಿಡ್ ವಾರಿಯರ್ಸ್ ಗಳು ಕರ್ತವ್ಯ ನಿರ್ವಹಿಸುವಾಗ ತಮ್ಮ ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸಬೇಕು, ತಮ್ಮ ಆರೋಗ್ಯ ಕಾಪಾಡಿಕೊಂಡು ಕಾರ್ಯನಿರ್ವಹಿಸಬೇಕು ಎಂದು ಸಲಹೆ ನೀಡಿದರು.
ಇದು ಒಂದು ಸಂಕಷ್ಟದ ಸಮಯ, ಈ ಸಮಯದಲ್ಲಿ ಅಧಿಕಾರಿಗಳು ಬದ್ದತೆಯಿಂದ ಮತ್ತು ಸಮರ್ಪಣಾ ಮನೋಭಾವದಿಂದ ಕೆಲಸ ಮಾಡಬೇಕು, ಜನರು ಸಹ ಅಧಿಕಾರಿಗಳೊಂದಿಗೆ ಸಹಕರಿಸಿ ಕೋವಿಡ್ ಲಸಿಕೆ ಪಡೆದು, ಸರ್ಕಾರ ರೂಪಿಸಿರುವ ಎಲ್ಲಾ ನಿಯಮಗಳನ್ನು ಪಾಲಿಸುವ ಮೂಲಕ ಕೋವಿಡ್ ತಡೆಯಲು ಕೈಜೋಡಿಸಬೇಕೆಂದು ಸಚಿವ ಅರವಿಂದ ಲಿಂಬಾವಳಿ ಮನವಿ ಮಾಡಿದರು.