Advertisement

ಅಡಕೆ ಬೆಳೆ ಹೇಳಿಕೆ ವಿವಾದ: ಸ್ಪಷ್ಟನೆ ನೀಡಿದ ಸಚಿವ ಆರಗ ಜ್ಞಾನೇಂದ್ರ

12:45 PM Dec 31, 2022 | keerthan |

ಬೆಂಗಳೂರು: ಸಾಂಪ್ರದಾಯಿಕ ಪ್ರದೇಶದಲ್ಲಿ ಬೆಳೆಯುತ್ತಿರುವ ಅಡಕೆ ರೈತರ ಹಿತ ರಕ್ಷಣೆ ಬಗ್ಗೆ ಸದನದಲ್ಲಿ ಮಾತನಾಡಿದ್ದನ್ನು ತಿರುಚಿ ನನ್ನ ವಿರುದ್ಧ ಅಪಪ್ರಚಾರ ನಡೆಸಲಾಗುತ್ತಿದೆ. ಇದನ್ನು ಖಂಡಿಸುತ್ತೇನೆ. ನನ್ನ ವಿರುದ್ಧ ಆರೋಪ ಮಾಡಲು, ಬೇರೆ ಏನೂ ಇಲ್ಲದ ರಾಜಕೀಯ ವಿರೋಧಿಗಳು ಮಲೆನಾಡು ಹಾಗೂ ಕರಾವಳಿ ಪ್ರದೇಶದ ಅಡಕೆ ಬೆಳೆಗಾರರ ಪರವಾಗಿ ಮಾತನಾಡಿದ್ದನ್ನು ಟೀಕೆ ಮಾಡಿದ್ದಾರೆ. ಸದನದಲ್ಲಿ ನಾನು ಮಾತನಾಡಿದ ಒಟ್ಟು ಭಾಷಣದ ಅರ್ಥವನ್ನು ಗ್ರಹಿಸದೆ ನನ್ನ ಹೇಳಿಕೆಯನ್ನೇ ತಪ್ಪಾಗಿ ಬಿಂಬಿಸಿ ಅಪಪ್ರಚಾರ ಹಾಗೂ ಸುಳ್ಳನ್ನು ಬಿತ್ತುವ ಹತಾಶ ಪ್ರಯತ್ನ ಮಾಡುತ್ತಿದ್ದಾರೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಹೇಳಿದ್ದಾರೆ.

Advertisement

ಅಡಕೆ ಬೆಳೆಗಾರರ ಭವಿಷ್ಯವನ್ನೇ ಹೊಸಕಿ ಹಾಕುವ ಪ್ರಯತ್ನದಲ್ಲಿ ಇವರು ಸುಪ್ರೀಂ ಕೋರ್ಟ್ ನಲ್ಲಿ ಅಡಕೆ ಕ್ಯಾನ್ಸರ್ ಕಾರಕ ಎಂದು ಅಫಿಡವಿಟ್       ಸಲ್ಲಿಸಿದ್ದನ್ನು ಯಾರೂ ಮರೆತಿಲ್ಲ. ಇದನ್ನು ವಿರೋಧಿಸಿ ಅಡಕೆ ಕ್ಯಾನ್ಸರ್ ಕಾರಕ ಅಲ್ಲ, ಅದೊಂದು ಆರೋಗ್ಯವರ್ಧಕ ಎಂದು ಯಶಸ್ವಿಯಾಗಿ ವಾದ ಮಂಡಿಸಿ, ರೈತರ ಮೇಲಿದ್ದ ತೂಗು ಕತ್ತಿಯನ್ನು ನಿವಾರಣಾ ಮಾಡುವಲ್ಲಿ ವಿಶೇಷ ಪ್ರಯತ್ನ ಮಾಡಿದ್ದನ್ನು, ಇಲ್ಲಿ ಸ್ಮರಿಸ ಬಯಸುತ್ತೇನೆ.

ಸಾಂಪ್ರದಾಯಿಕ ವಾಗಿ ಅಡಕೆ ಬೆಳೆಯುತ್ತಿರುವ ಪ್ರದೇಶದಲ್ಲಿ ಮಾತ್ರ, ಬಂದಿರುವ, ಹಾಗೂ ರೈತರಿಗೆ ಮಾರಕ ವಾಗಿರುವ, ಎಲೆ ಚುಕ್ಕೆ ರೋಗ ನಿಯಂತ್ರಣಕ್ಕೆ ಔಷಧ ಸಿಂಪರಣೆಗೆ ಸರಕಾರದಿಂದ ಅನುದಾನ ಬಿಡುಗಡೆ ಗೊಳಿಸಿದ್ದೇನೆ. ಎಲೆ ಚುಕ್ಕೆ ರೋಗಕ್ಕೆ ಕಾರಣವಾದ ಅಂಶಗಳ ಮೇಲೆ ಸಂಶೋಧನೆ ನಡೆಸಲು ಕೇಂದ್ರ ಸರಕಾರದ ಮೇಲೆ ಒತ್ತಡ ತಂದ ಪರಿಣಾಮವಾಗಿ ಕೇಂದ್ರ ಸಂಶೋಧಕರ ಹಾಗೂ ವಿಜ್ಞಾನಿಗಳ ತಂಡ ಬಂದಿದೆ ಎಂದಿದ್ದಾರೆ.

ಇದನ್ನೂ ಓದಿ:ಅಪಘಾತದ ವೇಳೆ ಪಂತ್ ಗೆ ಸಹಾಯ ಮಾಡಿದವರಿಗೆ ಸರ್ಕಾರದಿಂದ ಗೌರವ

ಮಾರುಕಟ್ಟೆಯಲ್ಲಿ ಅಡಕೆ ಬೆಳೆ ಧಾರಣೆಗೆ ಸ್ತಿರತೆ ಒದಗಿಸಲು ಅನುಕೂಲವಾಗುವಂತೆ, ಕೇಂದ್ರ ಸರಕಾರದ ಮೇಲೆ ಒತ್ತಡ ತಂದ ಪರಿಣಾಮವಾಗಿ ಅಡಕೆ ಬೆಳೆಯ ಕನಿಷ್ಠ ಉತ್ಪಾದನಾ ವೆಚ್ಚದರ ಹೆಚ್ಚಳಕ್ಕೆ ಸರಕಾರ ಒಪ್ಪಿಕೊಂಡಿದೆ. ಇಷ್ಟರಲ್ಲಿಯೇ ಈ ಸಂಬಂಧ ಆದೇಶ ಹೊರ ಬರಲಿದೆ.  ಅಡಕೆ ಬೆಳೆಗಾರರ ಹಿತ ಕಾಪಾಡಲು, ಕಟಿಬದ್ದ ವಾಗಿರುವ ನನ್ನ ಮೇಲೆ ಗೂಬೆ ಕೂರಿಸುವ ವ್ಯರ್ಥ ಪ್ರಯತ್ನ ನಡೆಸುತ್ತಿದ್ದಾರೆ.

Advertisement

ಒಂದು ಕಾಲದಲ್ಲಿ, ಅಡಕೆ ಧಾರಣೆ ಕ್ವಿಂಟಾಲ್ ಗೆ ಎಂಬತ್ತು ಸಾವಿರ ರೂಪಾಯಿವರೆಗೂ ಹೋಗಿತ್ತು, ಅದರ ಪರಿಣಾಮವಾಗಿ ಅಡಕೆ ಬೆಳೆ ಅಸಂಪ್ರದಾಯಿಕ ಪ್ರದೇಶಗಳಲ್ಲಿಯೂ, ವ್ಯಾಪಕವಾಗಿ ವಿಸ್ತಾರ ಗೊಂಡ ಪರಿಣಾಮ, ನಂತರದ ದಿನಗಳಲ್ಲಿ 25 ರಿಂದ 30 ಸಾವಿರಕ್ಕೂ ಬಂದಿದ್ದನ್ನು ಮರೆಯಬಾರದು. ಈ ಕಾರಣದಿಂದಲೇ ಮಲೆನಾಡು ಹಾಗೂ ಕರಾವಳಿ ಪ್ರದೇಶಗಳನ್ನು ಬಿಟ್ಟು, ಬೇರೆ ಪ್ರದೇಶದಲ್ಲಿ ಅಡಕೆ ಬೆಳೆಗೆ  ಹೆಚ್ಚಿನ ಪ್ರೋತ್ಸಾಹ ಕೊಡಬಾರದು ಎಂದು ಅಭಿಪ್ರಾಯ ಪಟ್ಟಿದ್ದೇನೆ ಎಂದು ಆರಗ ಜ್ಞಾನೇಂದ್ರ  ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next