ಮಡಿಕೇರಿ: ಜಿಲ್ಲೆಯ ಸರಕಾರಿ ಆಸ್ಪತ್ರೆಗಳಲ್ಲಿ ದುಡಿಯುತ್ತಿರುವ ಸ್ವಚ್ಛತಾ ಸಿಬ್ಬಂದಿಗಳು ಮತ್ತು ಇತರ ನೌಕರರಿಗೆ ಸರಕಾರ ನಿಗಧಿಪಡಿಸಿದ ಕನಿಷ್ಠ ವೇತನವನ್ನು ಗುತ್ತಿಗೆದಾರರು ನೀಡದೆ ವಂಚಿಸುತ್ತಿದ್ದಾರೆ ಎಂದು ಆರೋಪಿಸಿ ಸಿಐಟಿಯು ಸಂಘಟನೆಯ ನೇತೃತ್ವದಲ್ಲಿ ಜಿಲ್ಲಾಸ್ಪತ್ರೆಯ ಎದುರು ಸ್ವಚ್ಛತಾ ಸಿಬಂದಿ ಸಂಘದಿಂದ ಪ್ರತಿಭಟನೆ ನಡೆಯಿತು.
ಕೆಲಸ ಸ್ಥಗಿತಗೊಳಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಗುತ್ತಿಗೆ ಆಧಾರದ ಸಿಬ್ಬಂದಿಗಳು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಪ್ರತಿಭಟನಕಾರರು ಒತ್ತಾಯಿಸಿದರು.
ಈ ಸಂದರ್ಭ ಮಾತನಾಡಿದ ಸಿಐಟಿಯು ಕಾರ್ಯದರ್ಶಿ ಪಿ.ಆರ್.ಭರತ್, ಹಲವು ವರ್ಷಗಳಿಂದ ಹೋರಾಟ ನಡೆಸಿದ ಫಲವಾಗಿ ಕಾರ್ಮಿಕ ಇಲಾಖೆ ಕೊಡಗು ಜಿಲ್ಲೆಯ ಸರಕಾರಿ ಆಸ್ಪತ್ರೆಯ ಸ್ವಚ್ಛತಾ ಸಿಬ್ಬಂದಿಗಳಿಗೆ, ಡಿ ಗ್ರೂಪ್ ನೌಕರರಿಗೆ ಹಾಗೂ ಇತರ ನೌಕರರಿಗೆ ಮಾಸಿಕ ವೇತನವನ್ನು ನಿಗಧಿಪಡಿಸಿ 2017ರಲ್ಲಿ ಆದೇಶ ಹೊರಡಿಸಿದೆ. ಆದರೆ ಸರಕಾರ ನಿಗಧಿಪಡಿಸಿದ ವೇತನವನ್ನು ನೀಡದೆ ಗುತ್ತಿಗೆದಾರರು ಸ್ವಚ್ಛತಾ ಸಿಬ್ಬಂದಿಗಳನ್ನು ವಂಚಿಸುತ್ತಿದ್ದಾರೆ ಎಂದು ಆರೋಪಿಸಿದರು.
ಸರಕಾರದ ನಿಯಮಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಿರುವ ಗುತ್ತಿಗೆದಾರರ ವಿರುದ್ಧ ಕ್ರಮಕೈಗೊಳ್ಳಬೇಕಾದ ಕಾರ್ಮಿಕ ಇಲಾಖೆಯ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಮೌನ ವಹಿಸುವ ಮೂಲಕ ಪರೋಕ್ಷ ಬೆಂಬಲ ನೀಡುತ್ತಿದ್ದಾರೆ ಎಂದು ಟೀಕಿಸಿದರು. ನಿಗದಿಪಡಿಸಿದ ವೇತನ, ಹಳೇ ಬಾಕಿ ವೇತನ, ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಕ್ರಮಕೈಗೊಳ್ಳ ಬೇಕು ಎಂದು ಒತ್ತಾಯಿಸಿದ ಭರತ್ ನೌಕರರ ನ್ಯಾಯಯುತ ಬೇಡಿಕೆಗಳು ಈಡೇರದಿದ್ದಲ್ಲಿ ಕೆಲಸವನ್ನು ಸ್ಥಗಿತಗೊಳಿಸಿ ಹೋರಾಟವನ್ನು ತೀವ್ರಗೊಳಿಸುವುದಾಗಿ ಎಚ್ಚರಿಕೆ ನೀಡಿದರು. ಜಿಲ್ಲಾಸ್ಪತ್ರೆ ಸಿಬಂದಿ ಸಂಘದ ಕಾರ್ಯದರ್ಶಿ ಜಾನಕಿ ಮಾತನಾಡಿ, ಕಳೆದ ಹಲವು ವರ್ಷಗಳಿಂದ ಸ್ವಚ್ಛತಾ ಸಿಬ್ಬಂದಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರೂ ಸರಕಾರ ನಿಗಧಿ ಪಡಿಸಿದ ವೇತನ ಇಲ್ಲಿಯವರೆಗೆ ದೊರೆತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಸಂಘದ ಸದಸ್ಯರಾದ ಮಂಜುಳಾ, ಸುಶೀಲಾ, ಲಕ್ಷ್ಮೀ, ಮೇರಿ, ಅನಿತಾ, ಪದ್ಮಾ, ಶೀಲಾ ಪಾಲ್ಗೊಂಡಿದ್ದರು.