ಹೊಸದಿಲ್ಲಿ: ಕೇಂದ್ರ ಕ್ಯಾಬಿನೆಟ್ 2023-24ರ ಮಾರುಕಟ್ಟೆ ಋತುವಿಗಾಗಿ ಖಾರಿಫ್ ಬೆಳೆಗಳ ಹೆಚ್ಚಿದ ಕನಿಷ್ಠ ಬೆಂಬಲ ಬೆಲೆಯನ್ನು (MSP) ಅನುಮೋದಿಸಿದ್ದು, ಬೆಳೆಗಾರರ ಉತ್ಪನ್ನಗಳಿಗೆ ಲಾಭದಾಯಕ ಬೆಲೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಬೆಳೆ ವೈವಿಧ್ಯೀಕರಣವನ್ನು ಉತ್ತೇಜಿಸಲು ಈ ಕ್ರಮವಾಗಿದೆ ಎಂದು ಕೇಂದ್ರ ಸಚಿವ ಪಿಯೂಷ್ ಗೋಯಲ್ ಮಾಧ್ಯಮಗೋಷ್ಠಿಯಲ್ಲಿ ಬುಧವಾರ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ (CCEA) ರೈತರನ್ನು ಉತ್ತೇಜಿಸುವ ಸಲುವಾಗಿ 2023-24 ಬೆಳೆ ವರ್ಷಕ್ಕೆ (ಜುಲೈ-ಜೂನ್) ಭತ್ತದ ಎಂಎಸ್ಪಿಯನ್ನು ಪ್ರತಿ ಕ್ವಿಂಟಾಲ್ಗೆ 143 ರೂ. ಹೆಚ್ಚಳ ಮಾಡಿ 2,183 ರೂಪಾಯಿಗೆ ಹೆಚ್ಚಿಸಲು ಅನುಮೋದಿಸಿದೆ. ಹೆಚ್ಚಿನ ಪ್ರದೇಶವನ್ನು ಬೆಳೆಯ ಅಡಿಯಲ್ಲಿ ತರಲು ಮತ್ತು ಅವರ ಆದಾಯವನ್ನು ಹೆಚ್ಚಿಸಲು ಈ ಕ್ರಮ ಎಂದಿದೆ.
“ಕೃಷಿಯಲ್ಲಿ, ನಾವು ಸಿಎಸಿಪಿ (ಕೃಷಿ ವೆಚ್ಚಗಳು ಮತ್ತು ಬೆಲೆಗಳ ಆಯೋಗ) ಶಿಫಾರಸುಗಳನ್ನು ಆಧರಿಸಿ ಕಾಲಕಾಲಕ್ಕೆ ಎಂಎಸ್ಪಿಯನ್ನು ನಿಗದಿಪಡಿಸುತ್ತಿದ್ದೇವೆ. ಈ ವರ್ಷ ಖಾರಿಫ್ ಬೆಳೆಗಳ ಎಂಎಸ್ಪಿ ಹೆಚ್ಚಳವು ಹಿಂದಿನ ವರ್ಷಗಳಿಗೆ ಅತ್ಯಧಿಕವಾಗಿದೆ” ಎಂದು ಗೋಯಲ್ ಹೇಳಿದರು.
ಚಿಲ್ಲರೆ ಹಣದುಬ್ಬರ ಕುಸಿತದ ಪ್ರವೃತ್ತಿಯಲ್ಲಿರುವ ಸಮಯದಲ್ಲಿ ಎಂಎಸ್ಪಿ ಹೆಚ್ಚಳದಿಂದ ರೈತರಿಗೆ ಲಾಭವಾಗಲಿದೆ ಎಂದು ಅವರು ಹೇಳಿದರು.
Related Articles
‘ಎ’ ದರ್ಜೆಯ ಭತ್ತದ ಬೆಂಬಲ ಬೆಲೆ ಏರಿಕೆ
ಸಾಮಾನ್ಯ ದರ್ಜೆಯ ಭತ್ತದ ಎಂಎಸ್ಪಿಯನ್ನು 2023-24ರ ಬೆಳೆ ವರ್ಷಕ್ಕೆ 2,040 ರೂ. ಯಿಂದ 143 ರೂ. ಹೆಚ್ಚಳ ಮಾಡಿ 2,183 ರೂ.ಗೆ ಹೆಚ್ಚಿಸಲಾಗಿದೆ. ‘ಎ’ ದರ್ಜೆಯ ಭತ್ತದ ಬೆಂಬಲ ಬೆಲೆಯನ್ನು ಕ್ವಿಂಟಲ್ಗೆ 2,060 ರಿಂದ 163 ರೂ. ಹೆಚ್ಚಳ ಮಾಡಿ 2,203 ರೂ. ಗೆ ಹೆಚ್ಚಿಸಲಾಗಿದೆ ಎಂದು ಗೋಯಲ್ ಹೇಳಿದರು.
ಎಮ್ಎಸ್ಪಿಯಲ್ಲಿ ಗರಿಷ್ಠ ಹೆಚ್ಚಳವು ಹೆಸರು ಬೆಳೆಗೆ ಶೇಕಡಾ 10.4 ರಷ್ಟು ಹೆಚ್ಚಾಗಿದೆ.2023-23 ಬೆಳೆ ವರ್ಷದಲ್ಲಿ ಪ್ರತಿ ಕ್ವಿಂಟಾಲ್ಗೆ 8,558 ರೂ. ಮಾಡಲಾಗಿದೆ. ಹಿಂದಿನ ವರ್ಷದಲ್ಲಿ ಕ್ವಿಂಟಲ್ಗೆ 7,755 ರೂ. ಇತ್ತು.
ಜೂನ್-ಸೆಪ್ಟೆಂಬರ್ ಅವಧಿಯಲ್ಲಿ ಸಾಮಾನ್ಯ ಮಾನ್ಸೂನ್ ಸಾಧ್ಯತೆ
ಭತ್ತವು ಮುಖ್ಯ ಖಾರಿಫ್ ಬೆಳೆಯಾಗಿದೆ, ಇದರ ಬಿತ್ತನೆಯು ಸಾಮಾನ್ಯವಾಗಿ ನೈಋತ್ಯ ಮಾನ್ಸೂನ್ ಆರಂಭದೊಂದಿಗೆ ಪ್ರಾರಂಭವಾಗುತ್ತದೆ. ಭಾರತೀಯ ಹವಾಮಾನ ಇಲಾಖೆ (IMD) ಜೂನ್-ಸೆಪ್ಟೆಂಬರ್ ಅವಧಿಗೆ ಎಲ್ ನಿನೋ ಪರಿಸ್ಥಿತಿಗಳ ಹೊರತಾಗಿಯೂ ಸಾಮಾನ್ಯ ಮಾನ್ಸೂನ್ ಆಗಲಿದೆ ಎಂದು ಹೇಳಿದೆ.