Advertisement
ವಿಶ್ವವಿಖ್ಯಾತ ದಸರಾ ಮಹೋತ್ಸವದ ಆಕರ್ಷಣೆ ಹೆಚ್ಚಿಸಿ, ಪ್ರವಾಸಿಗರನ್ನು ಸೆಳೆಯುವ ಸಲುವಾಗಿ ಜಿಲ್ಲಾಡಳಿತ ಪ್ರವಾಸೋದ್ಯಮ ಇಲಾಖೆಯ ಸಹಯೋಗದಲ್ಲಿ ನಗರದ ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಲಲಿತಮಹಲ್ ಹೆಲಿಪ್ಯಾಡ್‌ನಲ್ಲಿ ಭಾನುವಾರ ಆಯೋಜಿಸಿದ್ದ ಗ್ರಾವೆಲ್ ಫೆಸ್ಟ್ ಕಾರ್ ರೇಸ್ ನೋಡುಗರಿಗೆ ಭರ್ಜರಿ ರಸದೌತಣ ನೀಡಿತು. ಒಬ್ಬರನ್ನು ಹಿಂದಿಕ್ಕಿ ಮತ್ತೂಬ್ಬರು ಗೆಲ್ಲಲು ನಡೆಸಿದ ಪೈಪೋಟಿ ಕ್ರೀಡಾಸಕ್ತರಿಗೆ ಹೊಸದೊಂದು ಥ್ರಿಲ್ ನೀಡಿತು.
Related Articles
Advertisement
13 ಮಹಿಳಾ ರೇಸರ್‌ಗಳು: ಹೆಲಿಪ್ಯಾಡ್ ಅಂಗಳದಲ್ಲಿ ನಡೆದ ರೋಮಾಂಚಕ ಕಾರ್ ರೇಸ್‌ನಲ್ಲಿ ಪುರುಷ ಸ್ಪರ್ಧಿಗಳ ಜತೆಗೆ 13 ಮಹಿಳಾ ರೇಸರ್‌ಗಳು ಎಲ್ಲರ ಗಮನ ಸೆಳೆದರು. ಪುರುಷರಿಗಿಂತ ನಾವೇನು ಕಮ್ಮಿಯಿಲ್ಲ ಎಂಬಂತೆ ರೇಸ್ ಸೂಟ್ ಧರಿಸಿ ತಮ್ಮ ನೆಚ್ಚಿನ ಕಾರಿನಲ್ಲಿ ಶರವೇಗದಲ್ಲಿ ಮುನ್ನುಗ್ಗುತ್ತಾ ಧೂಳೆಬ್ಬಿಸಿದರು. ಚಿತ್ರ ನಟಿ ರೇಖಾ ಸೇರಿದಂತೆ ಬೆಂಗಳೂರು, ಹಾಸನ ಹಾಗೂ ಮೈಸೂರಿನ 13 ಮಹಿಳಾ ರೇಸರ್‌ಗಳು ಸ್ಪರ್ಧೆಯಲ್ಲಿ ಭಾಗವಹಿಸಿ ನೋಡುಗರ ಹುಬ್ಬೇರುವಂತೆ ಮಾಡಿದರು.
ಕಿಕ್ಕೇರಿಸಿದ ಡಿಜೆ ಸದ್ದು: ಕಾರ್ ರೇಸ್ ವೀಕ್ಷಿಸಲು ನೆರೆದಿದ್ದ ಪ್ರೇಕ್ಷಕರಿಗೆ ಕಾರುಗಳು ಸದ್ದಿನೊಂದಿಗೆ ಡಿಜೆ ಸದ್ದು ಕಿಕ್ಕೇರಿಸಿತು. ಹೊಗೆ ಉಗುಳುತ್ತ ಮಣ್ಣಿನ ರಸ್ತೆಯಲ್ಲಿ ಧೂಳೆಬ್ಬಿಸಿ ಸಾಗುತ್ತಿದ್ದರೆ ಇತ್ತ ಹಿನ್ನೆಲೆಯಿಂದ ಬರುತ್ತಿದ್ದ ಡಿಜೆ ಹಾಡಿನ ಸದ್ದು ನೋಡುಗರಲ್ಲಿ ಮತ್ತಷ್ಟು ಆಸಕ್ತಿ ಕೆರಳಿಸಿತು.
ಪ್ರೇಕ್ಷಕರ ವೀಕ್ಷಣೆಗೆ ಅನುಕೂಲವಾಗಲೆಂದೆ ದೊಡ್ಡ ಎಲ್‌ಇಡಿ ಪರದೆ ವ್ಯವಸ್ಥೆ ಮಾಡಲಾಗಿತ್ತು. ನೇರವಾಗಿ ವೀಕ್ಷಣೆ ಮಾಡಲಾಗದವರು ಎಲ್‌ಇಡಿ ಪರದೆಯಲ್ಲಿ ರೇಸ್ ವೀಕ್ಷಿಸಿ ಖುಷಿ ಪಟ್ಟರು. ಇದಕ್ಕೂ ಮುನ್ನ ಕಾರ್ ರೇಸ್‌ಗೆ ಪ್ರವಾಸೋದ್ಯಮ ಇಲಾಖೆ ನಿರ್ದೇಶಕ ರಾಮು, ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಅವರು ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.