ಕಲಬುರಗಿ: ರಾಜ್ಯದಾದ್ಯಂತ ಉದ್ಯೋಗಾವಕಾಶ ಕಲ್ಪಿಸಲು ರಾಜ್ಯದ 25 ಜಿಲ್ಲೆಗಳಲ್ಲಿ ಮಿನಿ ಟೆಕ್ಸ್ ಟೈಲ್ ಪಾರ್ಕ್ ಸ್ಥಾಪಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ನಗರದ ಇಂಜನಿಯರಿಂಗ್ ಕಾಲೇಜು ಸಭಾಂಗಣದಲ್ಲಿಂದು ಪಿಎಂ ಮಿತ್ರ ಮೆಗಾ ಟೆಕ್ಸ್ ಟೈಲ್ ಪಾರ್ಕ್ ಗೆ ಚಾಲನೆ ನೀಡಿ ಮಾತನಾಡಿದರು.
ಕಲಬುರಗಿಯಲ್ಲಿ ಲಕ್ಷ ಜನರಿಗೆ ಉದ್ಯೋಗದ ಅವಕಾಶ ದೊರೆಯಲಿದ್ದು, ಇದೇ ಮಾದರಿಯಲ್ಲಿ ರಾಯಚೂರು ಹಾಗೂ ವಿಜಯಪುರ ದಲ್ಲಿ ಟೆಕ್ಸ್ ಟೈಲ್ ಪಾರ್ಕ್ ಸ್ಥಾಪಿಸಲಾಗುವುದು. ಅದರ ಜತೆ ಜಿಲ್ಲೆಗೊಂದು 25 ಜಿಲ್ಲೆಗಳಲ್ಲಿ ಮಿನಿ ಟೆಕ್ಸ್ ಟೈಲ್ ಪಾರ್ಕ್ ಸ್ಥಾಪಿಸಲಾಗುವುದು ಎಂದು ವಿವರಿಸಿದರು.
ಕಲಬುರಗಿಯಲ್ಲಿನ ಪಿಎಂ ಮಿತ್ರ ಮೆಗಾ ಟೆಕ್ಸ್ ಟೈಲ್ ಪಾರ್ಕ್ ನಲ್ಲಿ 2000 ಕೋ.ರೂ ಗೂ ಹೆಚ್ಚಿನ ಬಂಡವಾಳ ಹೂಡಿಕೆ ಮಾಡಲು ಉದ್ದಿಮೆದಾರರು ಆಸಕ್ತಿ ಹೊಂದಿರುತ್ತಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
Related Articles
ಪಾರ್ಕ್ ಸ್ಥಾಪನೆ ನಂತರ 10 ಸಾವಿರ ಕೋ ರೂ ಬಂಡವಾಳ ಹೂಡಿಕೆ ಆಗುವ ನಿರೀಕ್ಷೆವಿದೆ. ಇದರಿಂದ ಕಲ್ಯಾಣ ಕರ್ನಾಟಕದ 1 ಲಕ್ಷ ಯುವಕ/ ಯುವತಿಯರಿಗೆ ನೇರ ಉದ್ಯಮ ಮತ್ತು 2 ಲಕ್ಷ ಪರೋಕ್ಷ ಉದ್ಯೋಗ ಸೃಷ್ಟಿಯಾಗಲಿದೆ ಎಂದು ವಿವರಿಸಿದರು.
ರಾಜ್ಯ ಸರ್ಕಾರವು ಪಾರ್ಕ್ ಸ್ಥಾಪನೆಗೆ ಜಿಲ್ಲೆ ಫರತಾಬಾದ್ ಬಳಿ 1000 ಎಕರೆ ಭೂಮಿ ಒದಗಿಸಲಾಗಿದೆ. ಕೇಂದ್ರ ಸರ್ಕಾರದಿಂದ ಪಾರ್ಕ್ ಗೆ 800 ಕೋಟಿ ರೂ ಅನುದಾನ ನೀಡಲಾಗುತ್ತದೆ. ಮೆಗಾ ಟೆಕ್ಸ್ ಟೈಲ್ ಪಾರ್ಕ್ ನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜಂಟಿಯಾಗಿ ಎಸ್ ಪಿವಿ ಮೂಲಕ ಅನುಷ್ಠಾನ ಗೊಳಿಸಲಾಗುವುದು ಎಂದು ಸಿಎಂ ತಿಳಿಸಿದರು.
ಇದನ್ನೂ ಓದಿ:ನಾಗರಿಕರು ನಿರಾಳ: ಪಾನ್-ಆಧಾರ್ ಲಿಂಕ್ ಮಾಡುವ ಗಡುವು ವಿಸ್ತರಿಸಿದ ಸರ್ಕಾರ
ದೇಶದಲ್ಲಿ ಮೆಗಾ ಟೆಕ್ಸ್ ಟೈಲ್ ಪಾರ್ಕ ಸ್ಥಾಪನೆಯಿಂದ ವಾರ್ಷಿಕ ಜವಳಿ ರಫ್ತು ವಹಿವಾಟು 2030 ಕ್ಕೆ 100 ಬಿಲಿಯನ್ ಯುಎಸ್ ಡಾಲರ್ ವರೆಗೆ ಹೆಚ್ಚಿಸುವ ಗುರಿ ಹೊಂದಲಾಗಿದೆ ಎಂದು ಬೊಮ್ಮಾಯಿ ತಿಳಿಸಿದರು.
ಇದೇ ಸಂದರ್ಭದಲ್ಲಿ ಮೆಗಾ ಟೆಕ್ಸ್ ಟೈಲ್ ಪಾರ್ಕದಲ್ಲಿ ಹಲವಾರು ಬಂಡವಾಳ ಹೂಡಿಕೆದಾರರೊಂದಿಗೆ ಒಪ್ಪಂದ ಮಾಡಿಕೊಳ್ಳಲಾಯಿತು.
ಕೇಂದ್ರದ ರೈಲ್ವೆ ಮತ್ತು ಜವಳಿ ಖಾತೆ ರಾಜ್ಯ ಸಚಿವೆ ದರ್ಶನ ವಿ ಜರ್ದೋಶ್, ರಾಸಾಯನಿಕ ಮತ್ತು ರಸಗೊಬ್ಬರ ಹಾಗೂ ನವೀಕರಿಸಬಹುದಾದ ಇಂಧನ ಖಾತೆ ಸಚಿವ ಭಗವಂತ ಖೂಬಾ, ಬೃಹತ್ ಹಾಗೂ ಮಧ್ಯಮ ಕೈಗಾರಿಕಾ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ ನಿರಾಣಿ, ಕೈ ಮಗ್ಗ ಮತ್ತು ಜವಳಿ ಹಾಗೂ ಸಕ್ಕರೆ ಸಚಿವ ಶಂಕರ್ ಬಿ. ಪಾಟೀಲ್ ಮುನೇನಕೊಪ್ಪ, ಸಂಸದ ಡಾ. ಉಮೇಶ ಜಾಧವ್, ಶಾಸಕರಾದ ಸುಭಾಷ ಗುತ್ತೇದಾರ, ಬಸವರಾಜ ಮತ್ತಿಮಡು, ಶಶೀಲ್ ನಮೋಶಿ, ಬಿ.ಜಿ.ಪಾಟೀಲ್, ಸುನೀಲ್ ವಲ್ಲಾಪುರೆ, ಮೇಯರ್ ವಿಶಾಲ್ ದರ್ಗಿ ಸೇರಿದಂತೆ ಮುಂತಾದವರಿದ್ದರು. ಕಲಬುರಗಿ ದಕ್ಷಿಣ ಕ್ಷೇತ್ರದ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ ಅಧ್ಯಕ್ಷತೆ ವಹಿಸಿದ್ದರು.