ಶಿರಸಿ: ರಾಣಿಬೆನ್ನೂರಿನಿಂದ ಶಿರಸಿಯ ಮಾರಿಕಾಂಬಾ, ಬನವಾಸಿ ದೇವಾಲಯ ವೀಕ್ಷಣೆಗೆ ಬರುತ್ತಿದ್ದ ಮಿನಿ ಶಾಲಾ ಬಸ್ ಪಲ್ಟಿಯಾಗಿ ಒಬ್ಬರು ಮೃತಪಟ್ಟು, 12 ಜನ ಗಾಯಗೊಂಡ ಘಟನೆ ತಾಲೂಕಿನ ಬನವಾಸಿ ಸಮೀಪ ಇಂದು ನಡೆದಿದೆ.
ಶಾಲಾ ಸಿಬ್ಬಂದಿ ಕಸ್ತೂರಮ್ಮ(50) ಮೃತಪಟ್ಟಿದ್ದು, 12 ಜನ ಸಿಬಂದಿಗಳು ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.
ರಾಷ್ಟ್ರೀಯ ಹೆದ್ದಾರಿ 766(ಇ) ಕುಮಟಾ-ಹಾವೇರಿ ಮಾರ್ಗ ಮಧ್ಯೆ ಬುಗಡಿಕೊಪ್ಪ ಗ್ರಾಮದ ಬಳಿ ಈ ಅಪಘಾತ ಸಂಭವಿಸಿದ್ದು, ಅಪಘಾತವಾದ ಬಸ್ ರಾಣಿಬೆನ್ನೂರಿನ ಸಿದ್ದರೂಡ ನಗರದ ಪರಿಣಿತಿ ವಿದ್ಯಾಮಂದಿರದ ಶಾಲಾ ಬಸ್ ಇದಾಗಿದೆ ಎಂದು ತಿಳಿದು ಬಂದಿದೆ. ಶಾಲಾ ಸಿಬ್ಬಂದಿಗಳು ದೇವರ ದರ್ಶನಕ್ಕೆ ತೆರಳುತ್ತಿದ್ದರು ಎಂಬ ಮಾಹಿತಿ ಸಿಕ್ಕಿದೆ. ಬನವಾಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.