Advertisement
ಹೀಗೆಲ್ಲ ಅನುಕೂಲಗಳನ್ನು ಮಾಡಿಕೊಳ್ಳಲು ಒಂದಷ್ಟು ಹೆಚ್ಚುವರಿಯಾಗಿ ಕಟ್ಟಬೇಕು ಎಂದಾಗ ನಮಗೆ ಮೊದಲು ಆತಂಕವಾಗಿಬಿಡುತ್ತದೆ. ನಾವು ಹತ್ತಾರು ವರ್ಷದ ಹಿಂದೆ ಕಟ್ಟಿದ ಮನೆಯ ತಾರಸಿಯಲ್ಲಿ ಮತ್ತಷ್ಟು ಭಾರ ಹೊರುವಂತೆ ಮಾಡಲು ಸಾಧ್ಯವೇ? ಎಂಬುದು ಆ ಆತಂಕಕ್ಕೆ ಮುಖ್ಯ ಕಾರಣ. ಇಂಥ ಸಂದರ್ಭಗಳಲ್ಲಿ ನಾವು ಲಘು ಕಟ್ಟಡಗಳಿಗೆ ಅಂದರೆ ಲೈಟ್‌ವೇಟ್ ಸ್ಟ್ರಕ್ಚರ್ಗಳಿಗೆ ಮೊರೆಹೋದರೆ, ನಿರಾಯಾಸವಾಗಿ ನಮಗೆ ನಮ್ಮ ಅನುಕೂಲಕ್ಕೆ ತಕ್ಕಂಥ ಹೆಚ್ಚುವರಿ ಸ್ಥಳ ಸಿಗುತ್ತದೆ.
ಬಹುದಶಕಗಳ ಹಿಂದೆಯೇ ಪರಿಚಯಿಸಲ್ಪಟ್ಟ ಹಾಲೋ ಕ್ಲೇಬ್ಲಾಕ್ಸ್ ಇತ್ತೀಚಿನ ದಿನಗಳಲ್ಲಿ ಹೆಚ್ಚು ಜನಪ್ರಿಯವಾಗುತ್ತಿದೆ. ಇದು ಪರಿಸರ ಪ್ರೇಮಿಯಾಗಿರುವುದರ ಜೊತೆಗೆ ತನ್ನ ಗಟ್ಟಿತನದಿಂದಲೂ ದೀರ್ಘ ಬಾಳಿಕೆ ಬರುವುದರಿಂದಲೂ, ಮೇಲು ಮಹಡಿಗಳಲ್ಲಿ ಬಳಕೆಗೆ ಹೆಚ್ಚು ಸೂಕ್ತವಾಗಿರುತ್ತದೆ. ಸಾಮಾನ್ಯವಾಗಿ ಎತ್ತರ ಹೆಚ್ಚಿದಷ್ಟೂ ಮಳೆಯ ಬಿರುಸು ಹಾಗೂ ಬಿಸಿಲಿನ ಝಳ ಹೆಚ್ಚಿದ್ದು, ವಾತಾವರಣದ ವೈಪರೀತ್ಯಗಳನ್ನು ಪರಿಣಾಮಕಾರಿಯಾಗಿ ಎದುರಿಸಬಲ್ಲ ವಸ್ತುಗಳನ್ನು ಆಯ್ಕೆ ಮಾಡಿಕೊಳ್ಳುವುದು ಉತ್ತಮ. ದಕ್ಷಿಣ ಭಾರತದ ಬಹುತೇಕ ಕಡೆ ಸಿಗುವ ಇಟ್ಟಿಗೆಗಳಿಗೆ ನೀರು ನಿರೋಧಕ ಗುಣ ಸಾಕಷ್ಟು ಇರದ ಕಾರಣ ನಮ್ಮಲ್ಲಿ ಇವುಗಳನ್ನು ಪ್ಲಾಸ್ಟರ್ ಮಾಡುವ ಪರಂಪರೆ ಬೆಳೆದು ಬಂದಿದೆ. ಆದರೆ ಉತ್ತಮ ಗುಣಮಟ್ಟದ ಟೊಳ್ಳು ಇಟ್ಟಿಗೆಗಳನ್ನು ಪ್ಲಾಸ್ಟರ್ ಮಾಡದೇನೆ ಬಳಸಬಹುದು. ಈ ಮೂಲಕವೂ ನಾವು ನಮ್ಮ ಮನೆಯ ಮೇಲೆ ಹೆಚ್ಚುವರಿಯಾಗಿ ಪ್ಲಾಸ್ಟರ್ ನಿಂದಾಗಿ ಬೀಳಬಹುದಾಗಿದ್ದ ಭಾರವನ್ನು ಕಡಿಮೆಮಾಡಿದಂತೆ ಆಗುತ್ತದೆ. ಪಾಟ್ ಕಡೇಪಕ್ಷ ಅರ್ಧ ಇಂಚಿನಷ್ಟಾದರೂ ದಪ್ಪ ಇರಬೇಕಾಗುತ್ತದೆ. ನಾವು ಲಘು ಗೋಡೆ ಕಟ್ಟುವಾಗಲೇ ಪಾಯಿಂಟಿಂಗ್ ಮಾಡಲೆಂದು ಒಂದರ್ಧ ಇಂಚಿನಷ್ಟು ಸಿಮೆಂಟ್ ಗಾರೆಯನ್ನು ಸಂದಿಗಳಿಂದ ಕೊರೆದುಹಾಕಿದ್ದರೆ, ಮತ್ತೆ ಪಾಯಿಂಟಿಂಗ್ ಮಾಡುವಾಗ ಚೆನ್ನಾಗಿ ಸೆಟ್ ಆಗಿರುವ ಗಾರೆಯನ್ನು ಒಡೆದು ತೆಗೆದು ಗಾಡಿ-ಗ್ರೂವ್ ಮಾಡುವ ಕಿರಿಕಿರಿ ತಪ್ಪುತ್ತದೆ. ಟೊಳ್ಳು ಇಟ್ಟಿಗೆಯ ಮಿತಿಗಳು
ಎಂಟು ಇಂಚಿನ ಹಾಲೋ ಕ್ಲೇ ಬ್ಲಾಕ್ಸ್ ಒಂಭತ್ತು ಇಂಚಿನ ಇಟ್ಟಿಗೆ ಗೋಡೆಯಷ್ಟೇ ಭಾರವನ್ನು ಹೊರಬಲ್ಲದಾದರೂ ನಾವು ದೊಡ್ಡ ದೊಡ್ಡ ಕಿಟಕಿಗಳನ್ನೂ ಬಾಗಿಲುಗಳನ್ನೂ ಇಟ್ಟರೆ, ಮಧ್ಯೆ ಬರುವ ಕಟ್ಟೆಗಳೇ ಎಲ್ಲ ಭಾರವನ್ನೂ ಅಂದರೆ ಲಿಂಟಲ್ ಹಾಗೂ ಅದರ ಮೇಲೆ ಬರುವ ಗೋಡೆ ಹಾಗೂ ಸೂರಿನ ಭಾರವನ್ನೂ ಹೊರಬೇಕಾಗುತ್ತದೆ. ಇಂಥ ಸಂದರ್ಭದಲ್ಲಿ ನಾವು ನುರಿತ ಆರ್ಕಿಟೆಕ್ಟ್ಗಳ ಸಹಾಯ ಪಡೆದು ನಿರ್ದಿಷ್ಟವಾಗಿ ಭಾರಹೊರುವ ಕಟ್ಟೆಗಳನ್ನು ಗುರುತಿಸಿ ಭದ್ರವಾಗಿಸುವುದು ಅನಿವಾರ್ಯ.
Related Articles
Advertisement
ಪ್ಲಾಸ್ಟರ್ ಬದಲು ಪಾಯಿಂಟಿಂಗ್ಹೇಳಿಕೇಳಿ ಯಾವುದೇ ಪ್ಲಾಸ್ಟರ್ ಮಾಡಿದರೂ ಕಡೇ ಪಕ್ಷ ಚದರ ಅಡಿಗೆ ಐದರಿಂದ ಹತ್ತು ಕೆ.ಜಿಯಷ್ಟು ಹೆಚ್ಚುವರಿ ಭಾರ ಬೀಳುತ್ತದೆ. ಹಾಗಾಗಿ ನಮ್ಮ ಮೂಲ ಉದ್ಧೇಶವಾದ ಲಘು ಕಟ್ಟಡದ ಆಶಯ ಪ್ಲಾಸ್ಟರ್ ಮಾಡುವುದರ ಮೂಲಕ ಒಂದಷ್ಟು ಕುಂಠಿತವಾಗುತ್ತದೆ. ಆದುದರಿಂದ ನಾವು ಲಘು ಇಟ್ಟಿಗೆಗಳಿಗೆ ಪಾಯಿಂಟಿಂಗ್ ಅಂದರೆ ಜಾಯಿಂಟ್‌ಗಳನ್ನು ನೀರುನಿರೋಧಕ ದ್ರಾವಣ ಬೆರೆಸಿರುವ ಸಿಮೆಂಟ್ ಮರಳು ಮಿಶ್ರಣ 1:4 ಹಾಕಿ ಮಾಡಿದರೆ ನೋಡಲು ಸುಂದರವಾಗಿ ಕಾಣುವುದರ ಜೊತೆಗೆ ಭಾರವೂ ಕಡಿಮೆ ಆಗುತ್ತದೆ. ಲಘು ಸೂರುಗಳು
ಮಾರುಕಟ್ಟೆಯಲ್ಲಿ ವಿವಿಧ ಆಕಾರ ಹಾಗೂ ವಿನ್ಯಾಸದ ಝಿಂಕ್ ಇಲ್ಲವೆ ಅಲ್ಯೂಮಿನಿಯಮ್‌ನ ಮಾಮೂಲಿ ಶೀಟುಗಳು ಬಹು ಕಾಲದಿಂದಲೂ ಲಭ್ಯವಿವೆ. ಆದರೆ ಇವು ಮಳೆ ನೀರು ನಿರೋಧಕ ಗುಣ ಹೊಂದಿದ್ದರೂ ಶಾಖ ನಿರೋಧಕ ಗುಣ ಹೊಂದಿರುತ್ತಿರಲಿಲ್ಲ. ಜೊತೆಗೆ ಮಳೆ ಜೋರಾಗಿ ಬಿದ್ದರೆ, ಕಿವಿಗಡಚಿಕ್ಕುವ ಶಬ್ಧವೂ ಪ್ರತಿಧ್ವನಿಸಲು ತೊಡಗಬಹುದು. ಇವುಗಳ ನಿವಾರಣೆಗೋಸ್ಕರ ಇತ್ತೀಚೆಗೆ ಶಾಖನಿರೋಧಕ ಪದರ ಹೊಂದಿರುವ ಶೀಟುಗಳು ಲಭ್ಯ. ಇವು ಮನೆಯ ಒಳಾಂಗಣವನ್ನು ತಂಪಾಗಿ ಇಡುವುದರ ಜೊತೆಗೆ ಉತ್ತಮ ಶಬ್ದನಿರೋಧಕ ಗುಣವನ್ನೂ ಹೊಂದಿರುವುದರಿಂದ ರಸ್ತೆಯ ಶಬ್ಧವಾಗಲೀ, ಮಳೆಯ ಅಬ್ಬರವಾಗಲೀ ಒಳನುಸುಳಲು ಬಿಡುವುದಿಲ್ಲ! ನಾವು ಹಾಕುವ ಆರು ಇಂಚಿನ ಆರ್‌ಸಿಸಿ ಸ್ಲಾಬ್‌ಗಳ ಸ್ವಭಾರವೇ ಚದರ ಅಡಿಗೆ ಮೂವತ್ತು ಕೇಜಿಯಷ್ಟಿದ್ದು, ಎಂಥ ಬಿರುಗಾಳಿ ಬೀಸಿದರೂ ಛಾವಣಿ ಕಿತ್ತು ಹೋಗುವ ಸಾಧ್ಯತೆ ಇರುವುದಿಲ್ಲ. ಆದರೆ ಲಘು ಸೂರು ಬಳಸಿದಾಗ, ಜೋರು ಗಾಳಿಗೆ ಹಾರಿಹೋಗುವ ಸಾಧ್ಯತೆ ಇರುತ್ತದೆ. ಆದುದರಿಂದ ಲಘು ಸೂರು ಬಳಸುವಾಗ, ಸೂರಿಗೆ ಆಧಾರವಾಗಿ ನೀಡಿರುವ ರೀಪರ್-ಮರದ ಇಲ್ಲವೇ ಕಬ್ಬಿಣದ ತೊಲೆಗಳು ಗೋಡೆಗೆ ಸದೃಢವಾಗಿ ಅಂಟಿಕೊಂಡಂತೆ ಮಾಡುವುದು ಅತ್ಯಗತ್ಯ. ಲಘು ಗೋಡೆಗಳ ಮೇಲೆ ಕಡೇಪಕ್ಷ ನಾಲ್ಕು ಇಂಚಿನಷ್ಟು ದಪ್ಪದ ಲಿಂಟಲ್ ಒಂದನ್ನು ಕಂಬಿ ಸಮೇತ ಹಾಕಿ, ತೊಲೆಗಳು ಈ ಕಾಂಕ್ರಿಟ್‌ನೊಂದಿಗೆ ಬಿಗಿಯಾಗಿ ಕೂರುವಂತೆ ಸೂಕ್ತ ಬಿಗಿಬೋಲ್ಟ್ ಗಳನ್ನು ಸಿಗಿಸಬೇಕಾಗುತ್ತದೆ. ಲಘುಸೂರು ಹೊಂದಿರುವ ಹೆಚ್ಚುವರಿ ಸ್ಥಳವನ್ನು ಅತಿಶೀಘ್ರವಾಗಿ ಕಟ್ಟಿಕೊಳ್ಳಬಹುದು. ಮೊದಲ ಮಹಡಿಯಾದರೆ, ಹೆಚ್ಚುವರಿ ಪಾಯ ಇತ್ಯಾದಿಯೂ ಬೇಕಾಗುವುದಿಲ್ಲ. ಮುಂಜಾಗರೂಕತೆ ವಹಿಸಿ ಕಟ್ಟಿಕೊಂಡರೆ ಮನೆಯ ಎಕ್ಸ್‌ಟೆನÒನ್ ಬಹುಕಾಲ ಗಟ್ಟಿಮುಟ್ಟಾಗಿ ನಿಲ್ಲುವುದರ ಜೊತೆಗೆ ಜೋರು ಗಾಳಿಮಳೆಗೂ ನಾವು ಅಂಜಬೇಕಾಗುವುದಿಲ್ಲ. ಹೆಚ್ಚಿನ ಮಾತಿಗೆ ಫೋನ್ 98441 32826
ಆರ್ಕಿಟೆಕ್ಟ್ ಕೆ ಜಯರಾಮ್